Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬೇಲ ಬೆಳೆದರೆ ಲಾಭ ಬಹಳ’

ರಮೇಶ ಪಿ.ರಂಗಸಮುದ್ರ

ಬೇಲ ಮೂಲತಃ ಭಾರತ ದೇಶದ ಹಣ್ಣಿನ ಮರವಾಗಿದೆ. ಚರಕ, ಸುಶ್ರುತ ಮುಂತಾದ ವೈದ್ಯರ ಗ್ರಂಥಗಳಲ್ಲಿ ಬೇಲದ ಔಷಧಿಯ ಗುಣಗಳ ವರ್ಣನೆ,ಮಾಹಿತಿಗಳಿವೆ. ಪ್ರಥಮ ಪೂಜಿತ ಗಣಪತಿಯನ್ನು ಸ್ತುತಿಸುವ ಶ್ಲೋಕವೊಂದು ಹೀಗೆ ಪ್ರಾರಂಭವಾಗುತ್ತದೆ.

ಕಪಿತ್ತ ಜಂಬೂಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮೀ ವಿಘ್ನೇಶ್ವರ ಪಾದ ಪಂಕಜಂ ಇದು ಸ್ಥೂಲ ಕಾಯನು, ಅಪಾರ ಭೋಜನ, ತಿಂಡಿ ತಿನಿಸುಗಳನ್ನು ಭಕ್ಷಿಸುವ ಗಣಪತಿಯ ಆರೋಗ್ಯ ರಕ್ಷಿಸುವುದು. ಕಪಿತ್ತ (ಬೇಲದ ಹಣ್ಣು),ಜಂಬೂಫಲ (ನೇರಳೆ ಹಣ್ಣು)ಗಳ ಸಾರ (ಶರಬತ್ತು) ಸೇವಿಸುವುದೇ ಆಗಿದೆ. ಭಾರತದ ಮೂಲದ್ದಾಗಿರುವ ಬೇಲದ ಸಸ್ಯಸಂಕುಲವು, ವಿನಾಶದ ಅಂಚಿನಲ್ಲಿರುವ ಸಸ್ಯಗಳ ಪಟ್ಟಿಯಲ್ಲಿರುವುದು ದುರದೃಷ್ಟಕರವಾಗಿದೆ. ಬೇಲ, ಬೆಲವತ್ತ, ಮಾಳೂರು, ಮನ್ಮಥ ಪುಷ್ಪ ಫಲ, ವುಡ ಆಪಲ್ ಎಂದೆಲ್ಲಾ ಕರೆಸಿಕೊಳ್ಳುವ ಇದು ಪೆರೋನಿಯ ಜಾತಿಗೆ ಸೇರಿದೆ.

ಬೇಲದ ಬೇಸಾಯ: ಶುದ್ಧ ಸಾವಯವ ಬೇಸಾಯಕ್ಕೆ ಹೇಳಿ ಮಾಡಿಸಿದ ತೋಟಗಾರಿಕೆ ಬೆಳೆಯೆಂದರೆ ಬೇಲದ ಹಣ್ಣು ಕೃಷಿ. ಯಾವುದೇ ವಿಷ, ರಾಸಾಯನಿಕ ಬೇಡದೆ, ಬಯಸದೆ ತನ್ನ ಎಲೆಗಳ ಉದುರುವಿಕೆಯಿಂದಲೇ ಹೂಮಸ್ ತಯಾರಿಸಿ ಫಲವತ್ತತೆ ಮಾಡಿಕೊಳ್ಳುವ ಸ್ವಾವಲಂಬನಾ, ಸ್ವಾಭಿಮಾನಿ, ದೇಶಿ ಮರವಾಗಿದೆ. ಗಿಡದಿಂದ ಗಿಡಕ್ಕೆ ಹಾಗೂ ಸಾಲಿನಿಂದ ಸಾಲಿಗೆ ೧೨ ರಿಂದ ೧೫ ಅಡಿ ಅಂತರವಿಟ್ಟು, ಗುಂಡಿ ತೆಗೆದು(೨ಗಿ೨) ಗೊಬ್ಬರ ತುಂಬಿ ನಾಟಿ ಮಾಡಿ, ಎರಡು ವರ್ಷ ಕಾಪಾಡಿದರೆ ಸಾಕು. ಎಂತಹ ಬರ ಪರಿಸ್ಥಿತಿಯಲ್ಲೂ ಬದುಕಿ ಬೆಳೆಯ ಬಲ್ಲ, ಆದಾಯ ಭರವಸೆಯ ಮರವಾಗಿದೆ. ಸಹಿಷ್ಣುತೆಯ ಗುಣ ಹೊಂದಿದೆ. ೬-೭ ವರ್ಷ ಗಳ ನಂತರ ಹಣ್ಣಿನ ಇಳುವರಿ ಏರುತ್ತಾ ಸಾಗುತ್ತದೆ.

ಪ್ರಾರಂಭದಲ್ಲಿ ೫ರಿಂದ ೧೫ ಕ್ವಿಂಟಾಲ್ ಹಣ್ಣುಗಳನ್ನು ಒಂದು ಮರ ನೀಡ ಬಲ್ಲದು. ಒಂದು ಕೇಜಿಗೆ ೧೫ ರಿಂದ ೨೦ ರೂಪಾಯಿ ಗಳಿಗೆ ಮಾರಿದರೂ ಒಂದು ಮರಕ್ಕೆ ವಾರ್ಷಿಕ ೩೦ ಸಾವಿರ ರೂಪಾಯಿಗಳನ್ನು ಯಾವುದೇ ಖರ್ಚುಗಳಿಲ್ಲದೆ ಪಡೆಯಬಹುದು. ೩೦ ಮರಗಳನ್ನು ನೆಟ್ಟು ಬೆಳೆಸಿದರೆ ವಾರ್ಷಿಕ ೩ ಲಕ್ಷ ರೂ. ಆದಾಯವನ್ನು ತಂದುಕೊಟ್ಟು ಬೆಳೆದವರ ಬವಣೆಗಳನ್ನು ನೀಗಿಸಬಲ್ಲದು.

ಬೇಲದ ಹೊಸ ತಳಿಗಳು:

ಬೇಲದ ಮಹತ್ವವನ್ನು ಮನಗಂಡ ಐಸಿಎಆರ್‌ನವರು ಎರಡು ರೀತಿಯ ಬೇಲದ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

೧. ಥಾರ್ ದಿವ್ಯ: ಗಿಡ್ಡ ಪೊದೆ ಆಕಾರದಲ್ಲಿ ಬೆಳೆಯುವ ಈ ತಳಿಯ ಹಣ್ಣು ಒಂದೂವರೆಯಿಂದ ಎರಡು ಕೆಜಿ ತೂಕವಿರುತ್ತದೆ. ವಾರ್ಷಿಕ ೧೦೭.೨೪ ಕೆಜಿ ಇಳುವರಿಯನ್ನು ತಂದು ಕೊಡುತ್ತದೆ.

ಮೌಲ್ಯವರ್ಧನೆ: ಬೇಲದ ಪೌಡರ್ (ಟೀ ಗಾಗಿ) ; ಸ್ಯಾಶ್, ಮೊರಬ್ಬ, ಕ್ಯಾಂಡಿ…ಹೀಗೆ ಮಾಡಿ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು.

೨.ಗೋಮಯಶಿ: ಈ ತಳಿಯು ಹೆಚ್ಚಿನ ಪೊದೆ ಆಕಾರದಲ್ಲಿದ್ದು, ವಿಶಿಷ್ಟವಾದ, ಮಧುರವಾದ ರುಚಿ ಹಾಗೂ ಪರಿಮಳವನ್ನು ಹೊಂದಿದೆ. ಶರಬತ್ತು, ಟೀ ಪುಡಿ, ಕ್ಯಾಂಡಿ, ಬರ್ಫಿ, ಲೇಹ್ಯ…ಹೀಗೆ ಹತ್ತು ಹಲವು ಪದಾರ್ಥ ಗಳನ್ನು ತಯಾರಿಸಿ ಹೆಚ್ಚಿನ ಆದಾಯವನ್ನು ನೀರಾವರಿ ಸೌಲಭ್ಯವಿಲ್ಲದ ಹೊಲ, ಬರ ಪ್ರದೇಶಗಳಲ್ಲಿ ಬೆಳೆದು, ಆದಾಯ ಪಡೆದುಕೊಳ್ಳಬಹುದು. ವನವಾಸ ಕಾಲದಲ್ಲಿ ಶ್ರೀರಾಮಚಂದ್ರನ ದೇಹಕ್ಕೆ ತಂಪು ನೀಡಿ, ರಾಮಪ್ರಿಯ ಹಣ್ಣೆನಿಸಿದೆ. ಆದ್ದರಿಂದಲೇ ಬಿಸಿಲ ಬೇಗೆಯಲ್ಲಿ ಬರುವ ಬೇಲದ ಹಣ್ಣನ್ನು ರಾಮ ನವಮಿಯ ದಿನದಂದು ದೇಶದ ಉದ್ದಗಲಕ್ಕೂ ಪಾನಕ ಮಾಡಿ ಇಂದಿಗೂ ಹಂಚುತ್ತಾರೆ.

ಬರ ಪ್ರದೇಶದಲ್ಲಿ ಅದರಲ್ಲೂ ನೀರಾವರಿ ಇಲ್ಲದ ಬರ ಪ್ರದೇಶಗಳಲ್ಲಿ, ಉತ್ತರ ಕರ್ನಾಟಕದ ಭಾಗಗಳಿಗೆ ಕಲ್ಪವೃಕ್ಷದಂತೆ ಆದಾಯ ತಂದುಕೊಡುವ ಬೇಲದ ಕೃಷಿಯನ್ನು ಅಭಿವೃದ್ಧಿಪಡಿಸಬೇಕು. ಅನೇಕ ವಿಶ್ವವಿದ್ಯಾನಿಲಯಗಳ, ಸಂಶೋಧನಾ ಸಂಸ್ಥೆಗಳು ಬೇಲದ ಕೃಷಿ, ತೋಟಗಾರಿಕೆ ಬಗ್ಗೆ ಸಂಶೋಧನೆ ಮಾಡಿ ಬಡವರ, ಬರದ ನಾಡಿನ ಭರವಸೆಯ ಬೆಳೆಯಾದ ಬೇಲಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ನಮ್ಮ ಹೊಲ-ಗದ್ದೆಗಳ ಮೂಲೆಯಲ್ಲಿ ಈ ಮಳೆಗಾಲದಲ್ಲಿ ಒಂದೊಂದು ಬೇಲವನ್ನು ಬೆಳೆಸಿ, ಮನೆಮಂದಿಗೆ ಆರೋಗ್ಯ, ಆದಾಯ ಪಡೆಯುವ ಯೋಚನೆಯನ್ನು ಕೃಷಿಕರು ಮಾಡುತ್ತಾರೆ ಎನ್ನುವ ನಂಬಿಕೆ ಇಡೋಣವೆ.

ಬೇಲದ ಹಣ್ಣಿನ ಔಷಧೀಯ, ಆರೋಗ್ಯದ ಅಂಶಗಳು

* ಹೊಟ್ಟೆಯ ಆರೋಗ್ಯ ರಕ್ಷಕ
* ಕಿಡ್ನಿ, ಲಿವರ್‌ಗಳ ಶಕ್ತಿವರ್ಧಕ
* ಕರುಳಿನ ರೋಗಗಳಾದ ಆಮಶಂಕೆ, ಭೇದಿ ನಿವಾರಕ
* ಬೇಲದ ಎಲೆ ರಸಕ್ಕೆ ಸೈಂದವ ಲವಣವನ್ನು ಸೇರಿಸಿ ಕುಡಿದರೆ ಅಸ್ತಮಾ ನಿಯಂತ್ರಕ
* ಮಧುಮೇಹ, ರಕ್ತದೊತ್ತಡ ನಿಯಂತ್ರಕ
* ಮೂಲವ್ಯಾಧಿ ನಿರ್ಮೂಲಕ
* ರಕ್ತ ವೃದ್ಧಿ, ನರಗಳ ಶಕ್ತಿವರ್ಧಕ
* ಮೆದುಳು ಹಾಗೂ ನೆನಪಿನ ಶಕ್ತಿ ವೃದ್ಧಿ
* ವಿಪುಲವಾದ ಕಬ್ಬಿಣ, ತಾಮ್ರ, ವಿಟಮಿನ್ ‘ಸಿ’, ವಿಟಮಿನ್ ‘ಡಿ’

Tags:
error: Content is protected !!