ಬೆವರು ಬಸಿದು, ಮಳೆ- ಬಿಸಿಲಿಗೆ ಮೈಯೊಡ್ಡಿ ಭೂಮಿಯನ್ನು ಉತ್ತಿ – ಬಿತ್ತಿ -ಸಲು ಬೆಳೆಯುವ ಅನ್ನದಾತರ ಬದುಕು ದುರ್ಬರವಾಗುತ್ತಿದೆ ಎಂಬ ಕೂಗು ಮಾರ್ದನಿಸುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಅಲ್ಲದೆ, ಬೆಳೆ ಕೈಸೇರುವ ಹೊತ್ತಿನಲ್ಲೇ ರೋಗಗಳ ಪಾಲಾಗುವುದು ರೈತರನ್ನು ಕಂಗಾಲಾಗಿಸಿದೆ. ಇದು ರಾಸಾಯನಿಕ ಕೃಷಿ ಪದ್ಧತಿಯ ಫಲ. ಅದರಿಂದ ಭೂಮಿಯ ಫಲವತ್ತತೆಯೂ ನಾಶವಾಗುತ್ತಿದೆ ಎಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಪರ್ಯಾಯ ಎಂಬಂತೆ ಹಲವು ಪ್ರಗತಿಪರ ರೈತರು ಸಾವಯವ ಕೃಷಿಗೆ ಒಲಿದಿದ್ದಾರೆ. ಆದರೆ, ಸಾವಯವಯ ಕೃಷಿ ಮತ್ತು ರಸಗೊಬ್ಬರ ಬೇಸಾಯದ ರೈತರ ನಡುವೆ ಸಹಮತ ಮೂಡುತ್ತಿಲ್ಲ.
ಇದರ ನಡುವೆ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸಣ್ಣ ಧ್ವನಿಯ ಮಾತುಗಳೂ ಇದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾರು ಆತ್ಮವಿಮರ್ಶೆಗೆ ಒಳಗಾಗಬೇಕು ಎಂಬುದು ಪ್ರಶ್ನೆಯಾಗಿದೆ.
ಈಗಾಗಲೇ ಸಾವಯವ ಕೃಷಿ ಮಾರುಕಟ್ಟೆಗಳ ಮೂಲಕ ಗಮನಾರ್ಹ ಸಂಖ್ಯೆಯ ಗ್ರಾಹಕರು ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ. ಸಾವಯವ ಮಾರುಕಟ್ಟೆಯು ವಿಸ್ತಾರಗೊಳ್ಳುತ್ತಿದೆ. ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದರ ನಡುವೆ ಕೆಲವರು ಸಾವಯವ ಕೃಷಿಯ ನೆಪದಲ್ಲಿ ಗ್ರಾಹಕರನ್ನು ವಂಚಿಸಿರುವ ಘಟನೆಗಳೂ ನಡೆದಿವೆ ಎನ್ನಲಾಗಿದೆ.
ಆದರೆ, ಸಾವಯವ ಕೃಷಿಯ ಸಂಘ-ಸಂಸ್ಥೆಗಳಿಂದ ಖರೀದಿಸಿದ ಪದಾರ್ಥಗಳು ನೂರಕ್ಕೆ ನೂರಷ್ಟು ರಾಸಾ ಯನಿಕ ಮುಕ್ತ ಎಂಬುದರಲ್ಲಿ ಅನುಮಾನ ಬೇಡ ಎಂಬುದು ಸಾವಯವ ಕೃಷಿಕರ ಪ್ರಬಲ ಸಮರ್ಥನೆಯಾಗಿದೆ.
ಜಿಲ್ಲೆಯಲ್ಲಿ ಶೇ.೫ರಿಂದ ೧೦ರಷ್ಟು ಪ್ರಮಾಣದ ರೈತರು ಮಾತ್ರ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿಯಲ್ಲಿ ಶೇ.೩೦ರಿಂದ ೪೦ರಷ್ಟು ಇಳುವರಿ ಕಡಿಮೆ ಯಾಗುವುದರಿಂದ ಕೃಷಿಕರು ಇದರತ್ತ ಒಲವು ತೋರುತ್ತಿಲ್ಲ ಎಂಬ ಚರ್ಚೆಗಳೂ ನಡೆದಿವೆ.
ಜೊತೆಗೆ ನಗರ ಪ್ರದೇಶಗಳಲ್ಲಿ ಸಾವಯವ ಉತ್ಪನ್ನಗಳ ಜನರನ್ನು ವಂಚಿಸಲಾಗುತ್ತಿದೆ ಎಂಬ ಆಪಾದನೆಗಳೂ ಇವೆ. ಇದು ನಿಜವಾದ ಸಾವಯವ ರೈತರಿಗೆ ಮುಜುಗರ ಉಂಟು ಮಾಡಿದೆ. ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ ನೀಡಲು ಸರ್ಕಾರದಿಂದ ಸದ್ಯ ಯಾವುದೇ ಪ್ರಮುಖ ಯೋಜನೆಗಳೂ ಇಲ್ಲ. ಮೊದಲಿದ್ದ ಯೋಜನೆಗಳೂ ಸ್ಥಗಿತಗೊಂಡಿವೆ ಎನ್ನಲಾಗಿದೆ. ಹೀಗಾಗಿ ಗ್ರಾಹಕರನ್ನು ಕೆಲವರು ಸಾವಯವ ಕೃಷಿ ಉತ್ಪನ್ನಗಳು ಎಂಬ ಹೆಸರಿನಲ್ಲಿ ವಂಚಿಸುತ್ತಿದ್ದಾರೆ. ಗ್ರಾಹಕರು ಮರುಳಾಗದೆ ಗುಣಮಟ್ಟದ ಆಹಾರ ಪದಾರ್ಥ ಗಳನ್ನು ಖರೀದಿಸಿ ಎನ್ನುತ್ತಿವೆ ಸಂಘ-ಸಂಸ್ಥೆಗಳು.
ಮೈಸೂರು ಜಿಲ್ಲೆಯಲ್ಲಿರುವ ಕೆಲವೇ ಕೆಲವು ಸಾವಯವ ಕೃಷಿಕರು ತಮ್ಮದೇ ಆದ ಸಂಘ ಕಟ್ಟಿಕೊಂಡು, ಸ್ವಯಂ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಸರ್ಕಾರದ ನೆರವನ್ನು ಅಪೇಕ್ಷಿಸದೇ ಬೀಜ, ಗೊಬ್ಬರದಿಂದ ಹಿಡಿದು ಎಲ್ಲವನ್ನೂ ಸ್ವಂತವಾಗಿಯೇ ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ. ಖಾಯಂ ಗ್ರಾಹಕರನ್ನಷ್ಟೇ ನೆಚ್ಚಿಕೊಂಡಿರುವ ಇವರ ಮಾರುಕಟ್ಟೆ ವ್ಯವಹಾರ ಆರಕ್ಕೇರುತ್ತಿಲ್ಲ; ಮೂರಕ್ಕಿಳಿಯುತ್ತಿಲ್ಲ. ಸಾವಯವ ಕೃಷಿಯಲ್ಲಿ ರಾಸಾಯನಿಕ ಬಳಕೆಯ ಆರೋಪ ಹೊಸದಲ್ಲ. ಆದರೆ, ಸುಳ್ಳು ಆರೋಪದಿಂದ ಪ್ರಾಮಾಣಿಕವಾಗಿ ಸಾವಯವ ಕೃಷಿ ಮಾಡುವವರಿಗೆ ಕೆಟ್ಟ ಹೆಸರು ಬರುತ್ತಿದೆ.
ಕಳೆನಾಶಕ ಸುರಿದು ರಾಸಾಯನಿಕ ಬಳಸಿ ಕೃಷಿ ಮಾಡುವವರಿಗೆ ಯಾವುದೇ ಕಡಿವಾಣ ಇಲ್ಲ. ಆದರೆ, ಸಾವಯವದ ಮೂಲಕ ಪರ್ಯಾಯ ಹುಡುಕುವವರ ಚಾರಿತ್ರ್ಯವನ್ನು ಹುಡುಕಲಾಗುತ್ತಿದೆ. ಇದು ಸಮಾಜದ ದೊಡ್ಡ ದುರಂತ. ಬದಲಾವಣೆ ಬಯಸುವವರನ್ನು ಅನುಮಾನದಿಂದ ನೋಡುವುದು ತಪ್ಪಲ್ವಾ? ಎಂಬುದು ಸಹಜ ಸಮೃದ್ಧಿ ಸಂಸ್ಥೆಯ ಜಿ.ಕೃಷ್ಣಪ್ರಸಾದ್ ಅವರ ಪ್ರಶ್ನೆ. ರಾಸಾಯನಿಕ ಮುಕ್ತ ಕೃಷಿಯ ಮೇಲೆ ಅನುಮಾನ ಮೂಡಲು ಕಾರಣ ಸರ್ಕಾರದ ಯಾವುದೇ ಮಾರ್ಗ ಸೂಚಿ-ನಿಯಯವಿಲ್ಲದ್ದು. ಸಾವಯವ ಕೃಷಿ ಪದ್ಧತಿಯಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು. ಹಾಗಾದಾಗ ಮಾತ್ರ ಪ್ರಾಮಾಣಿಕ ಕೃಷಿಕರ ಮೌಲ್ಯ ಹೆಚ್ಚಾಗಲಿದೆ.
ಗ್ರಾಹಕರ ಜವಾಬ್ದಾರಿಯೂ ಇದೆ. ಹೆಚ್ಚು ಹಣ ಕೊಟ್ಟು ಪದಾರ್ಥ ಖರೀದಿಸುವುದರಿಂದ ಆಹಾರ ಎಲ್ಲಿಂದ ಬರುತ್ತಿದೆ ಪರಿಶೀಲನೆ ಮಾಡಬೇಕು. ಗೊತ್ತಿರುವ ಮೂಲಗಳಿಂದ ಗ್ರಾಹಕರು ಖರೀದಿಸಬೇಕು. ರಾಸಾ ಯನಿಕಗಳಿಲ್ಲದೆ ಕೃಷಿ ಮಾಡುವುದು ಸಾಧ್ಯವಿಲ್ಲ ಎನ್ನುವುದು ಜನರ ಭ್ರಮೆ. ಸಾವಯವ ಪದಾರ್ಥಗಳ ಬೆಲೆ ಜಾಸ್ತಿ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ.
ಪರಿಷ್ಕರಣೆ ಘಟಕಗಳು ಅಗತ್ಯ: ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ಹೆಚ್ಚು ದಿನ ಶೇಖರಿಸಿ ಇಟ್ಟಿದ್ದರೂ ತಾಜಾತನ, ಸ್ವಾದಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಸರ್ಕಾರ ಲ್ಯಾಬೊರೇಟರಿಗಳನ್ನು ಚಿಕ್ಕದಾಗಿ ನಿರ್ಮಿಸಿದೆ. ಗುಣಮಟ್ಟದ ಪರಿಷ್ಕರಣೆಗೆ ಘಟಕಗಳನ್ನು ತೆರೆಯಬೇಕು. ಆಗ ಗ್ರಾಹಕನಿಗೆ ತಾನು ಖರೀದಿ ಸಿದ ಉತ್ಪನ್ನಗಳ ಮೇಲೆ ನಂಬಿಕೆ ಹೆಚ್ಚಲಿದೆ ಎಂಬುದು ಕೃಷ್ಣಪ್ರಸಾದ್ ಅವರ ಅಭಿಪ್ರಾಯ.
ಎಚ್.ಡಿ.ಕೋಟೆಯಲ್ಲಿ ಹುಲಿಕಾಡು ರೈತ ಉತ್ಪಾದಕರ ಕಂಪೆನಿ ಇದೆ. ೪೦ ಜನ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಸಂಘಟಿಸಿ ಕಳೆದ ಮೂರು ವರ್ಷಗಳಿಂದ ತರಬೇತಿ ನೀಡಿ ಸಾವಯವ ಕೃಷಿಯ ದೃಢೀಕರಣ ಪತ್ರ ಕೊಡಿಸ ಲಾಗಿದೆ. ಹೀಗಾಗಿ ನಾವು ಬೆಳೆದಿರುವ ಉತ್ಪನ್ನಗಳ ಮೇಲೆ ಸಾವಯವದ ಲೇಬಲ್ ಇರಲಿದೆ. ಸಹಜ ಸೀಡ್ ಸಂಸ್ಥೆಯೊಂದಿಗೆ ೫೬ ರೈತರಿಂದ ದೃಢೀಕೃತಗೊಂಡ ಸಾವಯವ ಕೃಷಿ ಉತ್ಪನ್ನಗಳ ಬೀಜ ಗಳನ್ನು ಖರೀದಿಸಿ, ಮಾರಾಟ ಮಾಡಲಾಗುತ್ತಿದೆ. ಮಾಮೂಲಿ ಮಾರುಕಟ್ಟೆಗೆ ನಮ್ಮ ಉತ್ಪನ್ನಗಳನ್ನು ಸರಬ ರಾಜು ಮಾಡುವುದಿಲ್ಲ. ಸಾವಯವ ಕೃಷಿ ಉತ್ಪನ್ನಗಳಿಗೆ ಗ್ರಾಹಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇದ್ದಾರೆ. ಅವರಿಗೆ ನೇರವಾಗಿ ಮಾರಾಟ ಮಾಡುತ್ತೇವೆ.
ಕೃಷಿ ವಿವಿ, ಕೃಷಿ ಇಲಾಖೆ ಜಾಗೃತಿ ಮೂಡಿಸಲಿ: ಸಾವಯವ ಕೃಷಿ ಉತ್ಪನ್ನ ಮಾರಾಟ ಮಾಡುವ ರೈತರ ಮಳಿಗೆಗಳು ಹೆಚ್ಚಾಗಿವೆ. ಆದರೆ, ಇವರೆಲ್ಲ ರಾಸಾಯನಿಕ ಕೃಷಿ ಪದ್ಧತಿಯಲ್ಲೇ ಮುಂದುವರಿದಿರುವ ರೈತರು ಎಂಬುದು ಸುಳ್ಳು. ಒಂದಿಬ್ಬರು ಮಾಡುವ ಕೆಲಸಕ್ಕೆ ಎಲ್ಲರನ್ನೂ ದೂಷಿಸುವುದು ಸರಿಯಲ್ಲ. ರೈತರು ಬೆಳೆಯುತ್ತಿದ್ದ ಪದಾರ್ಥಗಳು ದೇಶಕ್ಕೆ ಸಾಲುತ್ತಿಲ್ಲ. ಇಳುವರಿಯಲ್ಲಿ ಹೆಚ್ಚಳ ಆಗಬೇಕು ಎಂದು, ೧೯೬೦ರ ದಶಕದಲ್ಲಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಹುನ್ನಾರ ನಡೆಸಿ ತಮ್ಮ ದೇಶದಲ್ಲಿ ಉಳಿದಿರುವ ರಸಗೊಬ್ಬರ ಗಳನ್ನು ಭಾರತಕ್ಕೆ ಪರಿಚಯಿಸಿದರು. ಹಸಿರು ಕ್ರಾಂತಿಯ ಹೆಸರಿನಲ್ಲಿ ಮನೆ ಮನೆಗೆ ರಸಗೊಬ್ಬರ ಕೊಟ್ಟರು. ೪ ತಲೆ ಮಾರುಗಳಿಂದ ರಾಸಾಯನಿಕಯುಕ್ತ ಕೃಷಿಯನ್ನೇ ಮಾಡಲಾಗುತ್ತಿದೆ. ಇದರಿಂದ ಭೂಮಿ ಒಡಲು ವಿಷಯುಕ್ತವಾಗುತ್ತಿದೆ. ಹಾಗಾಗಿ ಸಾವಯವ ಕೃಷಿ ಪದ್ಧತಿಗೆ ಮರಳು ವುದು ತುರ್ತಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಇಲಾಖೆ ಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ದೇಶದ ಬಹುತೇಕ ಕೃಷಿ ಭೂಮಿಯು ಐಸಿಯುನಲ್ಲಿ ರುವ ರೋಗಿಯಂತಾಗಿದೆ. ಇಂತಹ ಮಣ್ಣಿನಲ್ಲಿ ಯಾವ ಬೆಳೆ ಹಾಕಿದರೂ ರೋಗ ಬರಲಿದೆ. ಮಣ್ಣಿನ ಆರೋಗ್ಯ ಕಾಪಾಡ ಬೇಕಿರುವುದು ಸರ್ಕಾರ ಮತ್ತು ಕೃಷಿ ಇಲಾಖೆಯ ಜವಾಬ್ದಾರಿಯಾಗಿದೆ.
‘ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರ ಮುಂದಾಗಲಿ’: ಎರಡು ತಿಂಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದ ಸಂತೆಯಲ್ಲಿ ಸಾವಯವ, ನೈಸರ್ಗಿಕ ವಿಷಮುಕ್ತ ಮತ್ತು ರಾಸಾಯನಿಕ ಪದಾರ್ಥಗಳನ್ನು ಒಂದೇ ಕಡೆ ಮಾರಾಟ ಮಾಡಲಾಯಿತು. ಇದರ ಉದ್ದೇಶ ಗ್ರಾಹಕರಿಗೆ ಆರೋಗ್ಯ ಕಾಳಜಿ ಮತ್ತು ರಾಸಾಯನಿಕ ಬಳಸುವ ರೈತರನ್ನು ಸಾವಯವ ಕೃಷಿಗೆ ಕರೆತರುವ ಪ್ರಯತ್ನವಾಗಿದೆ. ಇಂತಹ ಕೆಲಸಗಳು ಸರ್ಕಾರದಿಂದ ಆಗಬೇಕಿದೆ ಎಂಬುದು ರೈತ ಪರ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ ಅವರ ಒತ್ತಾಯವಾಗಿದೆ.
ಸಾವಯವ ಕೃಷಿಕರ ದೃಢೀಕರಣ ಪತ್ರ ಮಾರಾಟ?: ಸಾವಯವ ಕೃಷಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಸಾವಯವ ಕೃಷಿ ರೈತರಿಗೆ ಆರ್ಥಿಕ ಸಹಾಯ, ತರಬೇತಿ, ತಾಂತ್ರಿಕ ಬೆಂಬಲ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕೃಷಿಯ ಇಲಾಖೆ ವತಿಯಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ದೃಢೀಕರಣ ಪತ್ರ ನೀಡಲಾಗುತ್ತಿದೆ. ಆದರೆ, ಈ ದೃಢೀಕರಣ ಪತ್ರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ರೈತರೊಬ್ಬರ ಆರೋಪ. ಐಸಿಯುನಲ್ಲಿರುವ ದೇಶದ ಮಣ್ಣಿನ ಫಲವತ್ತೆಯನ್ನು ಕಾಪಾಡಲು ರೈತರು ಮೊದಲು ನೈಸರ್ಗಿಕ ಕೃಷಿ ಮಾಡಬೇಕು. ಆನಂತರ ಬೇಕಾದರೆ ಸಾವಯವ ಕೃಷಿ ಮಾಡಲಿ. ಮಣ್ಣು ವಿಷಮುಕ್ತ ಆಹಾರ ಬೆಳೆಯಲು ತಯಾರಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಆತ್ಮವಿಮರ್ಶೆಗೆ ಒಳಪಡಬೇಕಿದೆ.
ನೈಸರ್ಗಿಕ – ಸಾವಯವ ಕೃಷಿ ನಡುವೆ ವ್ಯತ್ಯಾಸ?: ಸಾಂಪ್ರದಾಯಿಕವಾಗಿ ಬೇಸಾಯ ಮಾಡುತ್ತಿದ್ದ ಕೃಷಿಕರೊಬ್ಬರು ೧೯೪೨ರಲ್ಲಿ ಆರ್ಗ್ಯಾನಿಕ್ ಫಾರ್ಮ್ ಇನ್ ಇಂಡಿಯಾ ಕುರಿತು ಪುಸ್ತಕ ಬರೆದರು. ಈ ಪುಸ್ತಕ ಅಮೆರಿಕ ತಲುಪಿ ಸಂಶೋಧನೆಗಳು ನಡೆದಾಗ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೆ, ಭೂಮಿ ತನ್ನ ಸಹಜ ಸ್ಥಿತಿಗೆ ತಲುಪಲು ೩೦ ವರ್ಷಗಳು ಬೇಕಾಗುತ್ತವೆ ಎಂಬುದಾಗಿ ಪ್ರತಿಪಾದಿಸಲಾಯಿತು. ಆದರೆ, ನೈಸರ್ಗಿಕ ಮತ್ತು ಸಾವಯವ ಕೃಷಿ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ನೈಸರ್ಗಿಕ ಕೃಷಿಯಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳನ್ನು ಬಳಸುವುದಿಲ್ಲ. ಜೀವಾಮೃತ ಕೊಟ್ಟು ಬೆಳೆಯುತ್ತೇವೆ. ಹೀಗಾಗಿ ನೈಸರ್ಗಿಕ ಕೃಷಿಯಲ್ಲಿ ರಾಸಾಯನಿಕ ಬಳಸುವ ಅಗತ್ಯವಿಲ್ಲ. ಜೊತೆಗೆ ಜೀವಾಮೃತದಲ್ಲಿಯೇ ಬೆಳೆ ಚೆನ್ನಾಗಿ ಬರುವುದರಿಂದ ಯಾರೂ ಕೂಡ ಗೊಬ್ಬರಗಳನ್ನು ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ಆಂದೋಲನದ ಕೃಷಿಕ ಸ್ವಾಮಿ ಆನಂದ್. ಸಂಪೂರ್ಣ ನೈಸರ್ಗಿಕವಾಗಿ ಹಣ್ಣು, ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತೇವೆ. ಕಳೆದ ೪೦ ವರ್ಷಗಳಿಂದ ನೈಸಗಿಕ ಕೃಷಿಯಲ್ಲಿ ತೆಂಗು, ಬಾಳೆ, ಮಾವು, ಕೋಕ್ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ ಎಂಬುದು ಅವರ ಪ್ರತಿಪಾದನೆ.
– ಚಿರಂಜೀವಿ ಸಿ ಹುಲ್ಲಹಳ್ಳಿ





