Mysore
22
overcast clouds
Light
Dark

ಹೊಲದ ಗುಡಿಯಲ್ಲಿ ಹಚ್ಚಿ ದ್ವಿದಳ ದೀಪ

ಎನ್.ಕೇಶವಮೂರ್ತಿ

ನಂಜನಗೂಡು ತಾಲ್ಲೂಕಿನ ಸುತ್ತೂರು ಸಮೀಪದ ಒಬ್ಬ ಭತ್ತದ ಬೆಳೆಗಾರನನ್ನು ನಾನು ಭೇಟಿಯಾಗಿದ್ದೆ. ಅವರು ಪ್ರತಿವರ್ಷ ತಮ್ಮ 5ಎಕರೆ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಈ ಬಗ್ಗೆ ಅವರ ಅನುಭವ ಕೇಳಿದಾಗ ಅವರು, ‘ಸಾರ್ ನಾನು ಈ ಬಾರಿ ಭತ್ತ ಬೆಳೆಯುವ ಮೊದಲು ಐದು ಎಕರೆಗೆ ಉದ್ದು ಬಿತ್ತಿದ್ದೆ. ಈ ಭಾಗದಲ್ಲೆಲ್ಲ ಚೆಲ್ಲಿಕೆ ಮೂಲಕ ಬಿತ್ತನೆ ಮಾಡುತ್ತಾರೆ. ಆದರೆ ನಾನು ಕೃಷಿ ವಿಜ್ಞಾನ ಕೇಂದ್ರದಿಂದ ಉದ್ದಿನ ತಳಿ ರಲ್ಲಿ ಬಿತ್ತನೆ ತಂದು, ಬೀಜೋಪಚಾರ ಮಾಡಿ, ಮಣ್ಣಿಗೆ ಗೊಬ್ಬರ ಹಾಕಿ ಸಾಲಿನಲ್ಲಿ ಬಿತ್ತನೆ ಮಾಡುತ್ತೇನೆ. ಎರಡು ಬಾರಿ ಎಡೆಕುಂಟೆ ಉಳುಮೆ ಮಾಡಿ, ಒಮ್ಮೆ ಕೆಲಸಗಾರರೊಂದಿಗೆ ಸೇರಿ ಕಳೆಗಳನ್ನು ತೆಗೆಸಿ, ಒಂದೆ ರಡು ಬಾರಿ ಔಷಧ ಸಿಂಪಡಣೆ ಮಾಡಿದರೆ ಬೆಳೆ ಚೆನ್ನಾಗಿ ಬರಲಿದೆ.

ಹೀಗೆ ಮಾಡಿದಾಗ ನನಗೆ ಎಕರೆಗೆ ಆರು ಕಿಂಟಾಲ್ ಇಳುವರಿ ಬಂತು. ಉದ್ದಿಗೆ ಒಳ್ಳೆಯ ಧಾರಣೆಯೂ ಉತ್ತಮವಾಗಿದ್ದರಿಂದ ಕ್ವಿಂಟಾಲ್ ಆರು ಸಾವಿರ ರೂ.ಗಳಂತೆ ಲಾಭ ಸಿಕ್ಕಿತು. ನಾನು ಎಕರೆಗೆ 6,000 ರೂ. ಖರ್ಚು ಮಾಡಿ ಉತ್ತಮ ಲಾಭ ಪಡೆದೆ. ಒಟ್ಟು 30,000 ರೂ. ಆದಾಯ ಬಂದಿತ್ತು.

ಒಟ್ಟಾರೆ ಐದು ಎಕರೆಗಳಿಂದ ಒಟ್ಟು ಒಂದೂವರೆ ಲಕ್ಷ ರೂ. ಲಾಭ ಸಿಕ್ಕಿತ್ತು. ನೀವೇ ಹೇಳಿ ರೈತರು ಯಾಕೆ ಬೇಳೆ ಕಾಳು ಬೆಳೆಯಬಾರದು? ಸತ್ಯ ಹೇಳುತ್ತೀನಿ ನಾನು ಭತ್ತಾನೂ ಬೆಳೆಯುತ್ತೀನಿ. ಆರು ತಿಂಗಳ ಬೆಳೆ. ಎಷ್ಟೋ ಬಾರಿ ಎಕರೆಗೆ ಮೂವತ್ತು ಸಾವಿರ ಆದಾಯ ಬರುವುದಿಲ್ಲ. ಹಾಗಾಗಿ ಇನ್ನು ಮುಂದೆ ತೊಗರಿ, ಹೆಸರು, ಉದ್ದು, ಅಲಸಂದೆ, ಅವರೆ ಬೆಳೆಗಳನ್ನೂ ಬೆಳೆಯಬೇಕು ಅಂದುಕೊಂಡಿದ್ದೇನೆ’ ಎಂದರು.

ರೈತರು ದ್ವಿದಳ ಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ. ಅವರು ಹೆಚ್ಚು ಹೆಚ್ಚು ಈ ಬೆಳೆಗಳನ್ನು ಬೆಳೆಯಬೇಕು. ನಮ್ಮ ದೇಶ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸದಾ ಮಂಚೂಣಿಯಲ್ಲಿರಬೇಕು ಅನ್ನುವಉದ್ದೇಶದಿಂದಲೇ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ನಾನಾ ಸವಲತ್ತುಗಳನ್ನು ನೀಡ್ತಿದೆ. ಆದರೂ ರೈತರು ದ್ವಿದಳ ಧಾನ್ಯಗಳನ್ನು ಬೆಳೆಯಲು ಏಕೆ ಮುಂದಾಗುತ್ತಿಲ್ಲ. ಏಕೆಂದರೆ ದ್ವಿದಳ ಧಾನ್ಯಗಳು ವಾಣಿಜ್ಯ ಬೆಳೆ ಅಲ್ಲ. ಅವುಗಳನ್ನು ಹೆಚ್ಚಾಗಿ ಮಳೆ ಆಶ್ರಯದಲ್ಲಿ ಬೆಳೆಯುವುದರಿಂದ ಮಳೆ ಬಾರದಿದ್ದರೆ ಸಂಪೂರ್ಣವಾಗಿ ಬೆಳೆವಾರದ ಕೃಷಿ ಅಂಕಣ ಹಾಳಾಗುತ್ತದೆ. ಹಾಗಾಗಿ, ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರಿನಲ್ಲಿ ಈ ಬೆಳೆ ಬೆಳೆಯುವವರು ಮನೆಯಲ್ಲಿರುವ ಬೀಜಗಳನ್ನು ಬಳಸುತ್ತಾರೆ. ಜಮೀನಿನ ಉಳುಮೆ ಮಾಡಿ ಬೀಜ ಎರಚುತ್ತಾರೆ. ಗೊಬ್ಬರ ಹಾಕುವುದಿಲ್ಲ. ಮಳೆ ಹೆಚ್ಚಾದರೆ ಬೆಳೆಗಿಂತ ಕಳೆಯೇ ಹೆಚ್ಚಾಗುತ್ತದೆ.

ಸಾಲಲ್ಲಿ ಬಿತ್ತನೆ ಮಾಡದಿರುವುದರಿಂದ ಕುಂಟೆ ಹಾಯಿಸಿ ಕಳೆ ತೆಗೆಯಲು ಆಗುವುದಿಲ್ಲ. ಇದು ಉಚಿತ ಬೆಳೆ ಅಂತಾ ಔಷಧ ಕೂಡ ಸಿಂಪಡಿಸಲು ಸಾಧ್ಯವಿಲ್ಲ. ಹಳದಿ ಎಲೆ ರೋಗ, ನುಸಿ ಕೀಟ ಬಂದರೆ ಬೆಳೆ ಇರಲಿ ಗಿಡವೂ ಇರುವುದಿಲ್ಲ. ಹೀಗಾದರೆ ಆದಾಯ ಸಿಗುತ್ತದೆಯೇ? ಏನಾದರೂ ಪರಿಸರ ಸಹಕರಿಸಿದರೆ ಎಕರೆಗೆ ಒಂದು ಕ್ವಿಂಟಾಲ್ ಕಾಳು ಸಿಗಬಹುದು ಅಷ್ಟೇ. ಈ ಸಂಪತ್ತಿಗೆ ಯಾರು ಬೆಳೆಯುತ್ತಾರೆ ಹೇಳಿ? ಆದರೆ ಒಮ್ಮೆ ಆಲೋಚನೆ ಮಾಡಿ, ಲಾಭ ನಷ್ಟ ಪರಿಗಣಿಸದೆ ಯಾರೋ ಪುಣ್ಯಾತ್ಮರು ಬೆಳೆಯುತ್ತಿರುವುದರಿಂದಲೇ ನಾವು ಈಗ ತಿನ್ನಲು ಸಾಧ್ಯವಾಗಿದೆ. ಹಾಗಾಗಿ ಯಾರು ಬೆಳೆಯುತ್ತಾರೋ, ಬಿಡುತಾರೋ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ನೀವು ಬೆಳೆಯಿರಿ, ಏಕೆಂದರೆ ಕಾಳುಗಳಲ್ಲಿ ನಮಗೆ ಅತೀ ಅಗತ್ಯವಿರುವ ಪ್ರೋಟೀನ್ ಸಿಗಲಿದೆ. ಹಸಿ ತರಕಾರಿ ಆಗಿ ಬಳಸಬಹುದು. ಒಣಗಿಸಿ ಕಾಳು ಮಾಡಬಹುದು.

ಬೇರೆ ಬೆಳೆಗಳ ಜತೆ ಅಕ್ಕಡಿಯಾಗಿ ಬೆಳೆಯಬಹುದು. ಈ ಬೆಳೆಗಳು ವಾತಾವರಣದ ಸಾರಜನಕ ಸ್ಥಿರೀಕರಣ ಮಾಡುವುದರಿಂದ, ಮಣ್ಣು ಫಲವತ್ತಾಗುತ್ತದೆ. ಸ್ವಲ್ಪ ಮುತುವರ್ಜಿಯಿಂದ ಬೆಳೆದರೆ ದ್ವಿದಳ ಧಾನ್ಯಗಳ ಬೆಳೆಗಳಿಂದ ಅತಿಹೆಚ್ಚು ಆದಾಯಪಡೆಯಬಹುದು.

ಈಗಂತೂ ದ್ವಿದಳ ಧಾನ್ಯದ ಅನೇಕ ಹೊಸ ತಳಿಗಳು ಲಭ್ಯ ಇವೆ. ಸುಧಾರಿತ ಬೇಸಾಯ ಕ್ರಮಗಳೂ ಇವೆ. ಮಾಹಿತಿ ನೀಡಲು ಇಲಾಖೆ, ಸಂಶೋಧನಾ ಸಂಸ್ಥೆ ಇದೆ. ಮತ್ತೇಕೆ ತಡ, ಈ ಬಾರಿ ನಿಮ್ಮ ಜಮೀನಿನಲ್ಲಿ ಬೆಳಗಲಿ ಬಿಡಿ ದ್ವಿದಳ ದೀಪ.

(Keshavamurthy.n@gmail.com)