2023-24ನೇ ಆರ್ಥಿಕ ವರ್ಷದಲ್ಲಿ 10,636 ಕೋಟಿ ರೂ. ಮೌಲ್ಯದ ಕಾಫಿ ರಫ್ತು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12.22ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ 9,473 ಕೋಟಿ ರೂ. ಮೌಲ್ಯದ ಕಾಫಿ ರಫ್ತು ಮಾಡಲಾಗಿತ್ತು. ರೊಬಸ್ಟಾ ಕಾಫಿಗೆ ಹೆಚ್ಚಿದ ಬೇಡಿಕೆಯಿಂದಾಗಿ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ. ಏಷ್ಯಾ ಖಂಡದಲ್ಲಿ ಭಾರತವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯುವ ಮತ್ತು ರಫ್ತು ಮಾಡುವ ಮೂರನೇ ದೊಡ್ಡ ರಾಷ್ಟ್ರವಾಗಿದೆ. 2023-24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 1.25 ಲಕ್ಷ ಟನ್‌ನಷ್ಟು ಕಾಫಿ ರಫ್ತು ಮಾಡಲಾಗಿದೆ. ಇದರ ಹಿಂದಿನ ಆರ್ಥಿಕ ವರ್ಷದಲ್ಲಿ 1.10 ಲಕ್ಷ ಟನ್‌ನಷ್ಟು ರಫ್ತು ಮಾಡಲಾಗಿದೆ. ಈ ಅವಧಿಯಲ್ಲಿ ಒಟ್ಟಾರೆ ರಫ್ತಿನಲ್ಲಿ ಶೇ.13.35ರಷ್ಟು ಏರಿಕೆಯಾಗಿದೆ. ಭಾರತದಿಂದ ಇಟಲಿ, ರಷ್ಯಾ, ಯುಎಇ, ಜರ್ಮನಿ ಮತ್ತು ಟರ್ಕಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ.