Mysore
23
overcast clouds
Light
Dark

ಬಿದರಹಳ್ಳಿ ಸಹೋದರರ ಕೃಷಿ ಸವಾಲು

ಡಿ.ಎನ್.ಹರ್ಷ

ಪ್ರಸ್ತುತ ಕೃಷಿ ಎಂದರೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಒಂದು ಕಾಯಕ ಎಂಬ ಮಾತಿದೆ. ವರ್ಷಗಳ ಹಿಂದಷ್ಟೇ, ದೇಶದ ಬೆನ್ನೆಲು ಬಾಗಿದ್ದ ಕೃಷಿಗೆ ಈಗ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ.

ಇದಕ್ಕೆಲ್ಲಾ ಮೂಲ ಕಾರಣ ಕೃಷಿಕರ ಕುಟುಂಬ ದಲ್ಲಿ ಒಗ್ಗಟ್ಟಿನ ಕೊರತೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಗಾದೆ ಮಾತಿನ ಹಾಗೆ ನಗರ ಬದುಕನ್ನು ಅರಸುತ್ತ ಹೋಗುವವರ ಸಂಖ್ಯೆಯೇ ಹೆಚ್ಚಾಗಿ ರುವುದು ಇಂದು ಕೃಷಿಕರ ಸಂಖ್ಯೆ
ಗಣನೀಯವಾಗಿ ಇಳಿಕೆಯಾಗಲು ಕಾರಣವಾಗಿದೆ.

ಇದರ ನಡುವೆ ಕೃಷಿಯಲ್ಲಿಯೂ ಲಾಭ ಗಳಿಸಬಹುದು, ಒಟ್ಟಾಗಿ ದುಡಿದರೆ ಅದರಲ್ಲಿಯೂ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಿ.ಕೆ.ಶ್ರೀಧರ್ ಮತ್ತು ಅವರ ಸಹೋದರರು ಒಟ್ಟಿಗೆ ಕೂಡು ಕುಟುಂಬದಲ್ಲಿ ಕೃಷಿ ಬದುಕು ಸಾಗಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.

ಶ್ರೀಧರ್ ಮತ್ತು ಸಹೋದರರು ತಮ್ಮ 12 ಎಕರೆ ಕೃಷಿ ಭೂಮಿಯಲ್ಲಿ ರೇಷ್ಮೆ ಭತ್ತ ಕಬ್ಬು, ತೆಂಗು, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುವ ಜತೆಗೆ ತಮ್ಮ ಮನೆಗೆ ಬೇಕಾದ ದ್ವಿದಳ ಧಾನ್ಯಗಳು, ರಾಗಿ, ತರಕಾರಿಯಂತಹ ಬೆಳೆಗಳನ್ನೂ ಬೆಳೆದು ಕೃಷಿಯ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.
ದಿವಂಗತ ಬಿ.ಎಸ್.ಕೃಷ್ಣಮೂರ್ತಿ ಮತ್ತು ಲಲಿತಮ್ಮ ದಂಪತಿಗಳ ಪುತ್ರ ಬಿ.ಕೆ.ಶ್ರೀಧರ್, BE, M.Tech, PhD ಪದವೀಧರರಾಗಿದ್ದು, ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಧ್ಯಾಪಕರಾಗಿ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದು, ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ.

ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡು ತಿರುವಾಗಲೇ ಶ್ರೀರಾಂಪುರದ ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ರೇಷ್ಮೆ ಕೃಷಿ ಬಗ್ಗೆ ತರಬೇತಿ ಪಡೆದು, ತಮ್ಮ ರೇಷ್ಮೆ ಕೃಷಿಯ ಇಳುವರಿಯನ್ನು 22 ಕೆ.ಜಿ.ಗಳಿಂದ 46 ಕೆ.ಜಿ.ಗೆ ಹೆಚ್ಚಿಸಿದ್ದು ವಿಶೇಷ

ಬಿ.ಕೆ.ಪ್ರಕಾಶ್, ಬಿ.ಕೆ.ಸತೀಶ್, ಬಿ.ಕೆ.ಶ್ರೀಪಾದ ಈ ಮೂವರು ಸಹೋದರರೂ ತಮ್ಮ ಅಣ್ಣನ ರೀತಿಯಲ್ಲೇ ಸಂಪೂರ್ಣವಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿ.ಕೆ.ಪ್ರಕಾಶ್, ಬಿ.ಕೆ.ಸತೀಶ್ ಇಬ್ಬರೂ ಡಿಪ್ಲೊಮೋ ವ್ಯಾಸಂಗ ಮಾಡಿದ್ದು, ಕೃಷಿಯ ಬಗೆಗಿನ ಪ್ರೀತಿಯಿಂದಾಗಿ ಹಳ್ಳಿಯಲ್ಲೇ ಉಳಿದು ಕೃಷಿ ಬದುಕು ಆರಂಭಿಸಿದರು.

ತಮ್ಮ ಭೂಮಿಯಲ್ಲಿ ರೇಷ್ಮೆ ಕೃಷಿಯನ್ನು ಕಳೆದ ನಲವತ್ತು ವರ್ಷಗಳಿಂದಲೂ ಯಶಸ್ವಿಯಾಗಿ ಮಾಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಸಾಧನಗಳನ್ನು ಸ್ವತಃ ಇವರೇ ಮಾಡಿಕೊಂಡಿರುವುದು ವಿಶೇಷ.

ಇದರೊಂದಿಗೆ ತಮ ಕೃಷಿ ಭೂಮಿಯಲ್ಲಿ ಭತ್ತ, ಕಬ್ಬು, ಬಾಳೆಯ ಜತೆ 180ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಬೆಳೆದಿದ್ದು, ಇವು ಮೂಲ ಆದಾಯ ತಂದು ಕೊಡುವ ಬೆಳೆಗಳಾಗಿವೆ. ಭತ್ತದ ಪೈರುಗಳನ್ನು ಹೆಚ್ಚು ಹೆಚ್ಚು ನಾಟಿ ಮಾಡುವ ಬದಲು, ತೆಂಡೆ ಹೊಡೆದು, ಒಂದು ಅಥವಾ ಎರಡು ಪೈರನ್ನು ನೆಡುವುದರಿಂದ ಇಳುವರಿ ಹೆಚ್ಚಾಗುತ್ತದೆ ಎಂಬುದು ಇವರ ಮಾತು. ಇದೇ ಮಾದರಿಯಲ್ಲಿ ಕಳೆದ ವರ್ಷ ಒಂದು ಎಕರೆಯಲ್ಲಿ 35 ಕ್ವಿಂಟಾಲ್ ಭತ್ತ ಬೆಳೆದು ಉತ್ತಮ ಲಾಭಗಳಿಸಿದ್ದಾರೆ. ಸುತ್ತ ಮುತ್ತಲ ಕೃಷಿಕರಿಗೆ ತಮ್ಮ ಅನುಭವದ ಜ್ಞಾನ ಹಂಚುವುದರ ಮೂಲಕ ಅವರನ್ನೂ ಲಾಭದಾಯಕ ಕೃಷಿಯತ್ತ ಸಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹಳೇ ಬೇರು ಹೊಸ ಚಿಗುರು ಎನ್ನುವ ಹಾಗೆ, ಹಿರಿಯರ ಸಂಪ್ರದಾಯಗಳ ಅನುಭವದ ಜೊತೆ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸುವ ಡಾ.ಬಿ.ಕೆ.ಶ್ರೀಧರ್, ಎಲ್ಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದು, ಈಗ ಕೃಷಿ ಗುರುವಾಗಿ ತಮ್ಮ ತಾಂತ್ರಿಕ ಜ್ಞಾನ ಹಂಚುತ್ತಾ ಇದ್ದಾರೆ. ಯಾವುದೇ ಕೆಲಸವನ್ನು ಪ್ರೀತಿ, ಶ್ರದ್ಧೆಯಿಂದ ಮಾಡಿದಾಗ ಮಾತ್ರ ಶ್ರೇಯಸ್ಸು ಸಿಗುತ್ತದೆ ಎಂಬುದನ್ನು ಅನುಭವದಿಂದ ಅರಿತು ಕೊಂಡು, ತಮ್ಮ ಕುಟುಂಬ ವರ್ಗ, ಸಹವರ್ತಿಗಳು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚಿನ ಅಣ್ಣ, ಗುರು ಆಗಿದ್ದಾರೆ. ಇವರನ್ನು ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ: 98447 44250.
harshayogi@gmail.com