ಎನ್.ಕೇಶವಮೂರ್ತಿ
ನಂಜನಗೂಡು ತಾಲ್ಲೂಕಿನ ಸುತ್ತೂರು ಸಮೀಪದ ಒಬ್ಬ ಭತ್ತದ ಬೆಳೆಗಾರನನ್ನು ಭೇಟಿಯಾಗಿದ್ದೆ. ಸುಮಾರು ಐದು ಎಕರೇಲಿ ಪ್ರತೀ ವರ್ಷ ಭತ್ತ ಬೆಳೀತಾರೆ ಇವರು. ಅವರ ಅನುಭವ ಕೇಳಿದಾಗ ಅವರು ಹೇಳಿದರು: ಸಾರ್ ನಾನು ಈ ಬಾರಿ ಭತ್ತ ಬೆಳೆಯುವ ಮೊದಲು ಐದು ಎಕರೆಗೆ ಉದ್ದು ಬಿತ್ತಿದ್ದೆ. ಇಲ್ಲೆಲ್ಲ ಚೆಲ್ಲಿಕೆ ಮಾಡ್ತಾರೆ ಆದರೆ ನಾನು ಕೃಷಿ ವಿಜ್ಞಾನ ಕೇಂದ್ರದಿಂದ ಉದ್ದಿನ ತಳಿ ರಶ್ಮಿ ಬಿತ್ತನೆ ತಂದು, ಬೀಜೋಪಚಾರ ಮಾಡಿ, ಮಣ್ಣಿಗೆ ಗೊಬ್ಬರ ಹಾಕಿ ಸಾಲಿನಲ್ಲಿ ಬಿತ್ತನೆ ಮಾಡಿದೆ. ಎರಡು ಬಾರಿ ಎಡೆಕುಂಟೆ ಹೊಡಿಸ್ದೆ. ಒಮ್ಮೆ ಆಳುಗಳನ್ನು ಬಿಟ್ಟು ಕಳೆ ತೆಗೆಸ್ದೆ. ಒಂದೆರಡು ಬಾರಿ ಔಷಧ ಸಿಂಪಡಣೆ ಮಾಡಿದೆ. ಬೆಳೆ ಚೆನ್ನಾಗಿ ಬಂತು. ಎಕರೆಗೆ ಆರು ಕ್ವಿಂಟಾಲ್ ಇಳುವರಿ ಬಂತು. ಉದ್ದಿಗೆ ಒಳ್ಳೆಯ ಧಾರಣೆ ಇತ್ತು. ಒಂದು ಕ್ವಿಂಟಾಲ್‌ಗೆ ಆರು ಸಾವಿರ ಧಾರಣೆ ಸಿಕ್ತು. ನಾನು ಖರ್ಚು ಮಾಡಿದ್ದು ಎಕರೆಗೆ ಆರು ಸಾವಿರ ಅಷ್ಟೇ. ನನಗೆ ಬಂದ ಆದಾಯ ಮೂವತ್ತು ಸಾವಿರ. ಐದು ಎಕರೆಯಿಂದ ಒಂದೂವರೆ ಲಕ್ಷ ಅದೂ ಕೇವಲ ಅರವತ್ತು ದಿನಗಳಲ್ಲಿ. ನೀವೇ ಹೇಳಿ ಸಾರ್ ರೈತರು ಯಾಕೆ ಬೇಳೆ ಕಾಳು ಬೆಳೀಬಾರದು. ಸತ್ಯ ಹೇಳ್ತೀನಿ ಸರ್, ನಾನು ಭತ್ತಾನೂ ಬೆಳೀತೀನಿ, ಆರು ತಿಂಗಳ ಬೆಳೆಗೆ ಎಷ್ಟೋ ಸಾರಿ ಎಕರೆಗೆ ಮೂವತ್ತು ಸಾವಿರ ಆದಾಯ ಬರೋಲ್ಲ. ಹಾಗಾಗಿ ಇನ್ನು ಮುಂದೆ ತೊಗರಿ, ಹೆಸರು, ಉದ್ದು, ಅಲಸಂದೆ, ಅವರೆ ಸದಾ ಬೆಳೀಬೇಕು ಅಂದು ಕೊಂಡಿದ್ದೀನಿ ಅಂದ್ರು. ರೈತರು ದ್ವಿದಳ ಧಾನ್ಯಗಳನ್ನು ಬೆಳೆಯೋದು ಬಿಟ್ಟಿದ್ದಾರೆ. ಅವರುಹೆಚ್ಚು ಹೆಚ್ಚು ಈ ಬೆಳೆ ಬೆಳೀಬೇಕು. ನಮ್ಮ ದೇಶ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸದಾ ಮುಂಚೂಣಿಯಲ್ಲಿರಬೇಕು ಅನ್ನುವ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆ ಅಡಿಯಲ್ಲಿ ನಾನಾ ಸವಲತ್ತುಗಳನ್ನು ನೀಡ್ತಿದೆ. ಆದರೂ ರೈತರು ಬೇಳೆ ಕಾಳು ಬೆಳೆ ಬೆಳೆಯುವ ಉತ್ಸಾಹ ತೋರೋಲ್ಲ ಏಕೆ?
ಏಕೆಂದರೆ ದ್ವಿದಳ ಧಾನ್ಯಗಳು ವಾಣಿಜ್ಯ ಬೆಳೆ ಅಲ್ಲ. ಬಹಳ ಬಾರಿ ಇದನ್ನು ಬೆಳೆಯೋದು ಮಳೆ ಆಶ್ರಯದಲ್ಲಿ. ಮಳೆ ಆಗದಿದ್ರೆ ಸಂಪೂರ್ಣವಾಗಿ ಬೆಳೆ ಹಾಳು. ಹಾಗಾಗಿ, ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರಿನಲ್ಲಿ ಈ ಬೆಳೆ ಬೆಳೆಯೋರು. ಮನೇಲಿರುವ ಬೀಜ ಬಳಸ್ತಾರೆ. ಜಮೀನಿನ ಉಳುಮೆ ಮಾಡಿ ಬೀಜ ಎರಚ್ತಾರೆ. ಗೊಬ್ಬರ ಹಾಕಲ್ಲ. ಮಳೆ ಹಿಡಿದು ಬಿಟ್ರೆ ಬೆಳೇಗಿಂತ ಕಳೇನೇ ಜಾಸ್ತಿ ಬರುತ್ತೆ. ಸಾಲಲ್ಲಿ ಬಿತ್ತನೆ ಮಾಡುವುದರಿಂದ ಕುಂಟೆ ಹಾಯಿಸಿ ಕಳೆ ತೆಗೆಯಲು ಆಗೋಲ್ಲ. ಇದು ಉಚಿತ ಬೆಳೆ ಅಂತ ಔಷಧ ಸಹಾ ಹೊಡೆಯಲ್ಲ. ಹಳದಿ ಎಲೆ ರೋಗ, ನುಸಿ ಕೀಟ ಬಂದ್ರೆ ಬೆಳೆ ಇರಲಿ ಗಿಡ ಸಹಾ ಇರೋಲ್ಲ. ಹೀಗೆ ಬೆಳೆದ್ರೆ ಆದಾಯ ಸಿಗುತ್ತಾ? ಉತ್ತು ಗೊಬ್ಬರ ಮಾಡೋಕೆ ಗಿಡದ ಹಸಿರೂ ಇರೋಲ್ಲ. ಏನಾದರೂ ಪರಿಸರ ಸಹಕರಿಸಿದ್ರೆ ಎಕರೆಗೆ ಕ್ವಿಂಟಾಲ್ ಕಾಳು ಸಿಗಬಹುದು ಅಷ್ಟೇ.
ಈ ಸಂಪತ್ತಿಗೆ ಯಾರು ಬೆಳೀತಾರೆ ಹೇಳಿ ಈ ಬೇಳೇಕಾಳು ಬೇಳೆಯನ್ನು . ಆದರೆ ಒಮ್ಮೆ ಆಲೋಚನೆ ಮಾಡಿ. ಲಾಭ ನಷ್ಟ ಪರಿಗಣಿಸದೆಯಾರೋ ಪುಣ್ಯಾತ್ಮರು ಬೆಳೀತಿರೋದ್ರಿಂದ್ರ ಈಗ ತಿನ್ನೋಕಾದ್ರೂ ಕಾಳು ಸಿಕ್ತಿದೆ. ಬೆಳೆಯೋರೂ ಬೆಳೀದೇ ಹೋದ್ರೆ ರಾಗಿ ಮುದ್ದೆ ಜತೆಗೆ ಕಾಳಿನ ಸಾರು ಇರುತ್ತಾ? ಹಾಗಾಗಿ ಯಾರು ಬೆಳೀತಾರೋ, ಬಿಡ್ತಾರೋ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ನೀವು ಬೆಳೀರಿ ಯಾಕೆ ಗೊತ್ತಾ ಬೇಳೆಕಾಳುಗಳು ನಮಗೆ ಅತೀ ಅಗತ್ಯವಿರುವ ಪ್ರೋಟೀನ್ ಆಗರ. ಹಸೀ ತರಕಾರಿ ಆಗಿ ಬಳಸಬಹುದು. ಒಣಗಿಸಿ ಕಾಳು ಮಾಡಬಹುದು. ಬೇರೇ ಬೆಳೆಗಳ ಜತೆ ಅಕ್ಕಡಿ ಬೆಳೀಬಹುದು. ಈ ಬೆಳೆಗಳು ವಾತಾವರಣದ ಸಾರಜನಕ ಸ್ಥಿರೀಕರಣ ಮಾಡುವುದರಿಂದ, ಮಣ್ಣು ಫಲವತ್ತಾಗುತ್ತೆ. ಸ್ವಲ್ಪ ಮುತುವರ್ಜಿಯಿಂದ ಬೆಳೆದರೆ ದ್ವಿದಳ ಧಾನ್ಯದ ಬೆಳೆಗಳಿಂದ ಅತಿಹೆಚ್ಚು ಆದಾಯ ಪಡೀಬಹುದು. ಈಗಂತೂ ದ್ವಿದಳ ಧಾನ್ಯದ ಅನೇಕ ಹೊಸ ತಳಿಗಳು ಲಭ್ಯ ಇದಾವೆ.
ಸುಧಾರಿತ ಬೇಸಾಯ ಕ್ರಮಗಳು ಇದ್ದಾವೆ. ಮಾಹಿತಿ ನೀಡಲು ಇಲಾಖೆ, ಸಂಶೋಧನಾ ಸಂಸ್ಥೆ ಇವೆ. ಮತ್ತೇಕೆ ತಡ, ಈ ಬಾರಿ ನಿಮ್ಮ ಜಮೀನಿನಲ್ಲಿ ಬೆಳಗಲಿ ಬಿಡಿ ದ್ವಿದಳ ದೀಪ.
(ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ)
ಕೃಷಿಕರಿಗೆ ಸಲಹೆಗಳು…
* ಮಳೆ ನೀರು ಇಂಗಿಸಲು, ಮಣ್ಣಿನ ಕೊಚ್ಚಣೆ ತಡೆಯಲು ಇಳಿಜಾರಿಗೆ ಅಡ್ಡಲಾಗಿ ಉಳುಮೆ, ಬಿತ್ತನೆ ಮಾಡಿ.
* ಬಿತ್ತನೆ ಬೀಜ, ಕಸಿ, ಸಸಿಗಳನ್ನು ಅಧಿಕೃತ ಮೂಲದಿಂದ ಮಾತ್ರ ಖರೀದಿಸಿ.
* ಜಮೀನಿನ,ತೋಟದ ಮಣ್ಣಿನ ಪರೀಕ್ಷೆ ಮಾಡಿಸಿ ಫಲಿತಾಂಶಕ್ಕೆ ತಕ್ಕಂತೆ, ಬೆಳೆಗೆ ತಕ್ಕಂತೆ ಮಾತ್ರ ಗೊಬ್ಬರ, ರಾಸಾಯನಿಕ ಬಳಸಿ.
* ಬೀಜೋಪಚಾರ ಸಾವಯವ ಅಥವಾ ರಾಸಾಯನಿಕ ಯಾವುದಾದರೂ ಮರೀಬೇಡಿ.
* ಮನೆ ಬಿತ್ತನೆ ಬೀಜ ಬಳಸೋದಾದ್ರೆ ಮೊಳಕೆ ಪರೀಕ್ಷೆ ಮಾಡಿ ಬಳಸಿ.
* ಅನುಭವಿ ಕೃಷಿಕರ ಸಲಹೆ ಪಡೀರಿ, ತಜ್ಞರ ಮಾರ್ಗದರ್ಶನ ಪಡೆದು ವ್ಯವಸಾಯ ಮಾಡಿ.





