Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬೆಳೆ ನಷ್ಟಕ್ಕೆ ಕೃಷಿ ವಿಮೆ ಮಂತ್ರ

ಪ್ರತಿಯೊಬ್ಬರಿಗೂ ಜೀವ ವಿಮೆ, ಆರೋಗ್ಯ ವಿಮೆ ಎಷ್ಟು ಮುಖ್ಯವೋ ಹಾಗೆಯೇ ರೈತರಿಗೆ ಬೆಳೆ ವಿಮೆ ಬಹಳ ಅಗತ್ಯ. ಬರ, ಅತಿ ವೃಷ್ಟಿ, ಅನಾವೃಷ್ಟಿ ಮೊದಲಾದ ಕಾರಣಗಳಿಂದ ರೈತರು ಬೆಳೆದ ಬೆಳೆ ಹಾನಿಗೀಡಾದರೆ ಆಗ ವಿಮೆ ಪರಿಹಾರವನ್ನು ಪಡೆಯಬಹುದು.

ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೇಳಿ ಕೇಳಿ ವ್ಯವಸಾಯ ನಿಶ್ಚಿತ ಆದಾಯ ತರುವ ಕಾಯಕವಲ್ಲ. ವರ್ಷವಿಡೀ ದುಡಿದು ಬೆಳೆದ ಬೆಳೆ ಸರಿಯಾದ ರೀತಿಯಲ್ಲಿ ಇಳುವರಿ ಬಂದು, ಅದಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆತರೆ ರೈತರಿಗೆ ಅದೇ ದೊಡ್ಡ ಮೊತ್ತ. ಆದರೆ, ಹವಾಮಾನ ವೈಪರೀತ್ಯ ಮೊದಲಾದ ಕಾರಣಗಳಿಂದಾಗಿ ಬೆಳೆಗಳು ಹಾಳಾಗಬಹುದು? ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರದೇ ಇರಬಹುದು. ಹೀಗಾಗಿ ಆ ಬೆಳೆ ಬೆಳೆಯಲು ರೈತ ಹಾಕಿದ ಬಂಡವಾಳ, ಶ್ರಮ ಎಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆಸಿದಂತೆ ಆಗಲಿದೆ. ಇಂತಹ ಸಂದರ್ಭದಲ್ಲಿ ರೈತರ ಪಾಲಿಗೆ ಕೊಂಚ ನೆರವಾಗಬಲ್ಲದು ಬೆಳೆ ವಿಮೆ.

ಪ್ರಧಾನಮಂತ್ರಿ -ಸಲ್ ಬಿಮಾ ಯೋಜನೆ (ಪಿಎಂಎ-ಬಿವೈ)ಯಡಿ ನೋಂದಣಿ ಮಾಡಿಸಿ ವಿಮೆ ಕಂತು ಪಾವತಿಸಿದ್ದ ರೈತರಿಗೆ ಬೆಳೆ ಹಾನಿಗೀಡಾದ ಸಂದರ್ಭದಲ್ಲಿ ವಿಮೆ ಕಂಪೆನಿಯಿಂದ ಪರಿಹಾರ ಧನ ದೊರೆಯಲಿದೆ. 2016ರಲ್ಲಿ ಕೇಂದ್ರ ಸರ್ಕಾರ, ರೈತರ ಬೆಳೆಗಳಿಗೆ ವಿಮೆ ರಕ್ಷಣೆ ಒದಗಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಕಚೇರಿ ಇಲ್ಲವೇ ಸಾಮಾನ್ಯ ಸೇವಾ ಕೇಂದ್ರ ಮೊದಲಾದ ಆನ್‌ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆ ವಿಮೆ ಮಾಡಿಸಬಹುದು.

ಅಥವಾ ರೈತರು ಯಾವುದಾದರೂ ಬ್ಯಾಂಕ್ನಿಂದ ಬೆಳೆ ಸಾಲ ಪಡೆದುಕೊಂಡಿದ್ದರೆ ಸಹಜವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನ್ವಯವಾಗುತ್ತದೆ. ರೈತರಿಗೆ ಬೆಳೆ ಸಾಲ ನೀಡುವಾಗಲೇ ಬೆಳೆ ವಿಮೆಯ ಕಂತಿನ ಹಣವನ್ನು ಪಡೆದುಕೊಳ್ಳಲಾಗಿರುತ್ತದೆ. ಹೀಗಾಗಿ ಬೆಳೆಸಾಲ ಪಡೆದ ರೈತರು ಪ್ರತ್ಯೇಕವಾಗಿ ಬೆಳೆ ವಿಮೆ ಮಾಡಿಸಬೇಕಾದ ಅಗತ್ಯ ಇಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ಜಮೀನಿನ ಆರ್‌ಟಿಸಿ, ರೈತರ ಆಧಾರ್ ಅಥವಾ ಸರ್ಕಾರದ ಬೇರಾವುದೇ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆಯ ವಿವರಗಳ ಪ್ರತಿಯನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಬೆಳೆ ವಿಮೆ ಮೊತ್ತದ ಶೇ. 1.5 ರಿಂದ 5ರಷ್ಟು ಹಣವನ್ನು ರೈತರು ಭರಿಸಬೇಕಾಗುತ್ತದೆ.

ಕೃಷಿಕರಿಗೆ ವಾರದ ಸಲಹೆಗಳು: 

■ ಮುಂಗಾರು ಪೂರ್ವ ಮಳೆಯು ಉದ್ದು, ಹೆಸರು, ಅಲಸಂದೆ ಬಿತ್ತನೆಗೆ ಅನುಕೂಲ ಕರವಾಗಿದೆ. ಬೀಜ ಕೊಳೆಯುವುದನ್ನು ತಡೆಯಲು ಚೆನ್ನಾಗಿ ನೀರು ಹರಿಯುವ ಹೊಲಗಳಲ್ಲಿ ಬಿತ್ತನೆ ಮಾಡಿ

■ ರಾಗಿ ಬೆಳೆಗೆ ಮಳೆಯ ನಂತರ ಮೇಲು ಗೊಬ್ಬರವಾಗಿ ಸಾರಜನಕ ಹಾಕಿ

■ ತರಕಾರಿ ಬೆಳೆಗಳಲ್ಲಿ ಬೇರು ಕೊಳೆತವನ್ನು ತಪ್ಪಿಸಲು ಬಸಿಗಾಲುವೆ ಮಾಡಿ.ಮಳೆಯ ನಂತರ ಶಿಲೀಂಧ್ರ, ಕೀಟ ಸಮಸ್ಯೆಗಳಿವೆಯೇ ಎಂದು ಪರಿಶೀಲಿಸಿ ಅಗತ್ಯ ಶಿಲೀಂಧ್ರ,ಕೀಟನಾಶಕಗಳನ್ನು ಸಿಂಪಡಿಸಿ

■ ಟೊಮೆಟೋ ಹೂ ಬಿಡುವ ಹಂತದಲ್ಲಿದ್ದರೆ ಹೂ ಉದುರುವುದನ್ನು ತಡೆಯಲು ಬೊರಾಕ್ಸ್ ಸಿಂಪಡಿಸಿ, ಥ್ರಿಪ್ಸ್ ಮತ್ತು ಎಲೆ ಸುರುಳಿ ವೈರಸ್‌ಗಾಗಿ ಮೇಲ್ವಿಚಾರಣೆ ಮಾಡಿ

■ ಮೆಣಸಿನಕಾಯಿ ಬೆಳೆಗೆ ಹಣ್ಣುಗಳ ಜೋಡಣೆಗಾಗಿ ಪೊಟ್ಯಾಸಿಯಮ್ ಭರಿತ ರಸಗೊಬ್ಬರ ಹಾಕಿ. ಮಳೆಯ ನಂತರ ಹೀರುವ ಕೀಟಗಳು ಮತ್ತು ಹಣ್ಣಿನಕೊಳೆತ ತಡೆಯಲು ಮೇಲ್ವಿಚಾರಣೆ ಮಾಡಿ

■ ಮಾವಿನ ಹಣ್ಣಿನ ಬೆಳವಣಿಗೆಗೆ ಮತ್ತು ಸ್ಪಂಜಿನ ಅಂಗಾಂಶವನ್ನು ತಡೆಗಟ್ಟಲು ಪೊಟ್ಯಾಸಿಯಮ್ ನೈಟ್ರೇಟ್ ಸಿಂಪಡಿಸಿ

” ಪ್ರಧಾನಮಂತ್ರಿ -ಸಲ್ ಬಿಮಾ ಯೋಜನೆಗೆ ಪ್ರತ್ಯೇಕವಾಗಿ ರೂಪಿಸಲಾಗಿರುವ ವೆಬ್‌ಸೈಟ್‌ pmfby.gov.in  ಜೊತೆಗೆ ಕರ್ನಾಟಕದ ರೈತರಿಗಾಗಿ ರಾಜ್ಯ ಸರ್ಕಾರವೂ ಬೆಳೆವಿಮೆಗೆ ಪ್ರತ್ಯೇಕ ಪೋರ್ಟಲ್ ರೂಪಿಸಿದ್ದು ಡಿಡಿಡಿ. www. samrakshane.karnataka. gov.in/CropHome.aspx ಇಲ್ಲಿ ವರ್ಷ ಮತ್ತು ಯಾವ ಋತುವಿನ ಬೆಳೆಗೆ ವಿಮೆ ಎಂಬುದನ್ನು ಆಯ್ದುಕೊಂಡು  ಮುಂದುವರಿಯಬೇಕು.”

Tags:
error: Content is protected !!