ಮೈಸೂರು ತಾಲ್ಲೂಕು ವರುಣ ಹೋಬಳಿ ದುದ್ದಗೆರೆ ಗ್ರಾಮದ ಆಟೋ ನಾಗರಾಜ್ ಎಂದೇ ಪ್ರಸಿದ್ಧಿ ಆಗಿರುವ ನಾಗರಾಜ್‌ರವರ ಕೃಷಿ ಪ್ರೀತಿ, ಅವರ ತರಕಾರಿ ಬೆಳೆಗಳ ಅನುಭವವನ್ನು ಕೇಳಿದ್ರೆ, ನೋಡಿದ್ರೆ ಅಚ್ಚರಿ ಉಂಟಾಗುತ್ತದೆ. ಅವರ ಜಮೀನಿಗೆ ಹೋಗಿ ಬೆಳೆದ ಪಡುವಲ, ಸೋರೆಕಾಯಿ, ಟೊಮ್ಯಾಟೋ ಇತ್ಯಾದಿ ಬೆಳೆಗಳನ್ನು ನೋಡಿದ್ರೆ, ಇಸ್ರೇಲ್‌ನವರು ಇಲ್ಲಿ ಬಂದು ಬೆಳೆದಿದ್ದಾರೆ ಎನ್ನುವ ಕಲ್ಪನೆ ಕಾಡುತ್ತೆ.
ಅಷ್ಟು ಅದ್ಭುತವಾಗಿ ಎಲ್ಲಾ ಬೆಳೆಗಳನ್ನು ಬೆಳೆಯುತ್ತಾ ಇದ್ದಾರೆ ಆಟೋ ನಾಗರಾಜ್. ಅವರನ್ನು ಒಂದೇ ಮಾತಿನಲ್ಲಿ ತರಕಾರಿ ರಾಜ ಎಂದು ನೇರವಾಗಿ ಕರೆಯಬಹುದು. ‘ನನಗೆ ಆರೋಗ್ಯ ಸರಿ ಇಲ್ಲದೆ ಮನೆಯಲ್ಲಿ ಮಲಗಿದ್ರೂ ದಿನಕ್ಕೆ ಎರಡು ಬಾರಿ ಆದ್ರೂ, ಜಮೀನಿನಲ್ಲಿ ಬೆಳೆಗಳನ್ನು ನೋಡಿಕೊಂಡು ಬರುತ್ತೇನೆ. ಅವು ಕೂಡ ತಮ್ಮ ಮಾಲೀಕ ಬಂದ ಎಂದು ಪ್ರೀತಿಯಿಂದ ಮಾತಾಡಿಸುತ್ತವೆ. ನಾನು ಕೂಡ ಅವುಗಳನ್ನು ಅದೇ ಪ್ರೀತಿಯಿಂದ ನೋಡುತ್ತೇನೆ ಎಂದು ನೇರವಾಗಿ ತಮ್ಮ ಕೃಷಿ ಪ್ರೀತಿ ವ್ಯಕ್ತಪಡಿಸುತ್ತಾರೆ.
ತಲೆತಲಾಂತರದಿಂದ ಹಿರಿಯರು ರೂಢಿಸಿಕೊಂಡು ಬಂದಿದ್ದ ಕೃಷಿ ಕಾಯಕವನ್ನೇ ನಂಬಿಕೊಂಡು ಬಂದಿದ್ದ ನಾಗರಾಜ್‌ಗೆ ಒಂದೆಡೆ ಸಂಸಾರದ ಭಾರ ಹೊರುವ ಸಂದಿಗ್ಧತೆ ಕಾಡಿದ್ರೆ, ಇನ್ನೊಂದೆಡೆ ಮಳೆಯನ್ನೇ ನಂಬಿ ಕೃಷಿ ಮಾಡಲು ಹೊರಟಿದ್ದವನಿಗೆ ಬರ ಬಿದ್ದ ಭೂಮಿಯಲ್ಲಿ ನೀರಿನ ಕೊರತೆ, ಕೃಷಿಯಿಂದ ಲಾಭವಿಲ್ಲ ಎಂಬ ತರ್ಕ ಎದುರಾಗಿ ಊರು ಬಿಟ್ಟು ಪಟ್ಟಣ ಸೇರಿದ್ದಾಯಿತು. ಅಲ್ಲಿ ಗಾರೆ ಹೊತ್ತರು. ಮುಂದೆ ಗಾರೆ ಕೆಲಸ ಕಲಿತು, ಅನುಭವಗಳಿಸಿ ಮೇಸ್ತ್ರಿಯಾದರು. ಕಟ್ಟಡ ನಿರ್ಮಾಣದ ಗುತ್ತಿಗೆದಾರರೂ ಆದರು. ಆದರೂ ನಿರೀಕ್ಷಿತ ಫಲ ಕಾಣಲಿಲ್ಲ.
ಸಂಸಾರದ ನೊಗ ಹೊರುವುದೇ ಕಷ್ಟವಾದಾಗ ತೆಂಗಿನಕಾಯಿ ವ್ಯಾಪಾರ ಶುರು ಮಾಡಿದರು. ವ್ಯವಹಾರಿಕ ಅನುಭವ ಸಾಲದಾಗಿ ಅದರಲ್ಲೂ ಕೈ ಸುಟ್ಟುಕೊಂಡರು. ಮರಳಿ ಊರಿಗೆ ಬಂದು ರೇಷ್ಮೆ ಕೃಷಿ ಕೈಗೊಂಡರು. ಕೈ ಹಿಡಿದು ನಡೆಸೀತು ಎಂಬ ಆಶಾಭಾವನೆಯಿಂದ ಕೈಗೊಂಡ ರೇಷ್ಮೆ ಕೃಷಿಯಿಂದಲೂ ನಷ್ಟ ಅನುಭವಿಸಿದ್ರು.
ಇದಾವುದರ ಸಹವಾಸವೇ ಬೇಡವೆಂದು ಕೊಂಡು ಆಟೋ ಓಡಿಸುವ ಕಾಯಕವನ್ನು ಕೈಗೊಂಡರು. ರೈತರು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಆರಂಭಿಸಿದರು. ಹೀಗೆ ಹತ್ತಾರು ಉದ್ಯೋಗಗಳನ್ನು ಕೈಗೊಂಡರೂ ಹಗಲು ರಾತ್ರಿ ದುಡಿದರೂ ದಿನದ ಸಂಪಾದನೆ ೫೦೦ ರೂ.ಮೀರುತ್ತಿರಲಿಲ್ಲ. ತುಂಬು ಸಂಸಾರದ ತಾಪತ್ರಯಗಳನ್ನು ನಿವಾರಿಸುವುದು ಸಾಧ್ಯವಾಗಲಿಲ್ಲ. ತರಕಾರಿ ಮಂಡಿಯಲ್ಲಿ ರೈತರು ತಮ್ಮ ತರಕಾರಿಗಳನ್ನು ಮಾರಿ ಝಣ ಝಣ ಕಂಡು ಎಣಿಸುವುದನ್ನು ಕಂಡಾಗಲೇ ನಾಗರಾಜರಿಗೆ ಜ್ಞಾನೋದಯವಾದದ್ದು. ತನ್ನದೆಂದು ಇರುವ ಕೃಷಿ ಭೂಮಿಯನ್ನು ಪಾಳು ಬಿಟ್ಟು ಇತರರು ಕೃಷಿ ಬೆಳೆಗಳನ್ನು ಸಾಗಿಸುವ ಬದಲು ನನ್ನ ಭೂಮಿಯಲ್ಲಿ ಇಂತಹ ತರಕಾರಿ ಬೆಳೆಗಳನ್ನು ನಾನೇ ಬೆಳೆದು ಒಂದು ದಿನ ನಾನೂ ಸಾಹುಕಾರನಾಗಲು ಸಾಧ್ಯವಿಲ್ಲವೇ ಎಂದು ಯೋಚಿಸಿ ಅತ್ತ ಮುಖ ಮಾಡಿದ ನಾಗರಾಜ್‌ರಿಗೆ ತರಕಾರಿ ಬೆಳೆ ಚಿನ್ನದ ಮೊಟ್ಟೆಯಾಗಿ ಪರಿಣಮಿಸಿತು.
ಅಂದು ಅಸಡ್ಡೆ ತೋರಿದ್ದ ಪಾಳು ಬಿದ್ದ ಭೂಮಿಯನ್ನು ಮತ್ತೆ ಹದಗೊಳಿಸಿದ ಫಲವಾಗಿ ನಾಗರಾಜ್ ಇದೀಗ ಲಕ್ಷಾಧಿಪತಿಯಾಗಿ ತನ್ನನ್ನೇ ನಂಬಿದ ಮಡದಿಗೆ ಆದರ್ಶ ಪತಿ, ಮಕ್ಕಳಿಗೆ ಅನುಕರಣೀಯ ತಂದೆ. ಹೊಲದಲ್ಲಿ ಜೊತೆ ನೀಡುವ ಕೂಲಿಕಾರರಿಗೆ ನೆಚ್ಚಿನ ಒಡೆಯರಾಗಿದ್ದಾರೆ.
ಕೃಷಿಕನಿಗೆ ಸಮಯ ಪ್ರಜ್ಞೆ ಇರಬೇಕಾ ದುದು ಅತ್ಯಗತ್ಯ ಎನ್ನುವ ನಾಗರಾಜ್ ತನ್ನ ಎಲ್ಲಾ ಕೃಷಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತಾರೆ. ನಾಟಿ,ಗೊಬ್ಬರ, ನೀರು ನೀಡುವುದು ಹೀಗೆ ಇಲ್ಲಿ ಎಲ್ಲವೂ ಆಯಾ ಋತು, ಕಾಲಮಾನಗಳಿಗೆ ಸರಿಯಾಗಿ ನಡೆಯುತ್ತದೆ. ನಾಟಿಯಿಂದ ಕಟಾವಿನವರೆಗೆ ಎಲ್ಲಾ ಲೆಕ್ಕಪತ್ರಗಳು ಇವರ ಬಳಿ ಇವೆ. ಪ್ರತಿಯೊಂದು ಕೃಷಿಯ ಬಗ್ಗೆ ಬೇರೆ ಬೇರೆ ಬೆಳೆಗಾರರಿಂದ ಕೇಳಿ ತಿಳಿದುಕೊಂಡ ಮಾಹಿತಿಗಳನ್ನು ಬರಹ ರೂಪಕ್ಕಿಳಿಸಿದ್ದಾರೆ. ರೋಗ ಲಕ್ಷಣಗಳು, ಪರಿಹಾರ, ಅಧಿಕ ಇಳುವರಿ ಪಡೆಯಲು ಕ್ರಮಗಳು, ಜೊತೆಗೆ ತನ್ನ ತೋಟದಲ್ಲಿ ಎಷ್ಟು ಮಂದಿ, ಎಷ್ಟು ದಿನ ದುಡಿದಿದ್ದಾರೆ! ಯಾವ ಬಾಳೆ ಯಾವ ದಿನ ಗೊನೆ ಹಾಕಿದೆ? ಗೊನೆ ಎಷ್ಟು ಕೆ.ಜಿ ತೂಗಿದೆ ಮುಂತಾದ ಮಾಹಿತಿ ಇವರ ಬಳಿಯಿವೆ.
ಇರುವ ಮೂರೂವರೆ ಎಕರೆ ಭೂಮಿಯಲ್ಲಿ ಲಕ್ಷ ಲಕ್ಷ ರೂ. ಆದಾಯ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಮೈ ಮುರಿಯ ದುಡಿತದೊಂದಿಗೆ ತಂತ್ರಜ್ಞಾನ, ಯಂತ್ರಗಳ ಬಳಕೆ, ಕೃಷಿ ಬಗ್ಗೆ ಆಸಕ್ತಿ ಇವರಿಗೆ. ನಾಗರಾಜ್‌ರ ಭೇಟಿಗೆ ಮೊ.೯೯೦೧೨ ೬೧೫೦೫ ಅನ್ನು ಸಂಪರ್ಕಿಸಿ.
” ತೋಟಗಾರಿಕಾ ಇಲಾಖೆಯು ‘ಆಟೋ ನಾಗರಾಜ್’ ಕುರಿತು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದೆ. ರೈತರಿಗೆಇದನ್ನೇ ತೋರಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜಿಸುತ್ತಿದೆ. ೪ನೇ ತರಗತಿ ಓದಿರುವ ನಾಗರಾಜ್ ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೈತರಿಗೆ ತಮ್ಮ ಹೊಲದಲ್ಲಿ ಕೃಷಿ ಪಾಠ ಹೇಳುತ್ತಾರೆ. ನೂರಾರು ರೈತರು ಇವರ ಹೊಲಕ್ಕೆ ಬಂದು ನಾಗರಾಜುರವರ ಕೃಷಿ ನೋಡಿ ಸ್ಪೂರ್ತಿ ಪಡೆದಿದ್ದಾರೆ. ಮನೆಯಲ್ಲಿ ಸಾಕಷ್ಟು ಜಮೀನಿದ್ದರೂ ಕೃಷಿ ಕಾಯಕಕ್ಕೆ ಗುಡ್ ಬೈ ಹೇಳಿ ನಗರ ಸೇರುವ ಯುವಕರ ಪಾಲಿಗೆ ಆಟೋ ನಾಗರಾಜ್‌ರವರ ಯಶೋಗಾಥೆ ಒಂದು ಅನುಕರಣೀಯ ಉದಾಹರಣೆ.”
ಡಿ.ಎನ್. ಹರ್ಷ





