Mysore
25
overcast clouds
Light
Dark

ಕೃಷಿ ಕಾಯಕದಲ್ಲಿ ಹಾದನೂರಿನ ಪ್ರಕಾಶ್

ಓದಿದ್ದು ಬಿಎ ಪದವಿಯಾಗಿದ್ದರೂ ಕೃಷಿಯ ಮೇಲಿನ ವ್ಯಾಮೋಹದಿಂದ ಹುಟ್ಟೂರಿನಲ್ಲಿಯೇ ಉಳಿದು, ಬೇಸಾಯವನ್ನೇ ಉದ್ಯೋಗವಾಗಿಸಿಕೊಂಡು ಅದರಲ್ಲಿಯೇ ಉತ್ತಮ ಲಾಭ ಗಳಿಸುತ್ತ ಬದುಕುಕಟ್ಟಿಕೊಂಡು ಸಾಧಕ ಕೃಷಿಕ ಅನಿಸಿಕೊಂಡಿದ್ದಾರೆ ಹಾದನೂರು ಗ್ರಾಮದ ರೈತ ಪ್ರಕಾಶ್.

ಸರಗೂರು ತಾಲ್ಲೂಕಿನ ಹಾದನೂರು ಗ್ರಾಮದ ರೈತ ಪ್ರಕಾಶ್ ವಿದ್ಯಾವಂತರಾಗಿದ್ದರೂ ನಗರಗಳತ್ತ ಹೋಗಿ ಉದ್ಯೋಗ ಹುಡುಕದೇ ತಮಗಿದ್ದ ಜಮೀನಿನಲ್ಲಿಯೇ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಾ ಮಾದರಿ ರೈತ ಎನಿಸಿಕೊಂಡಿದ್ದಾರೆ. ಹಾದನೂರು ಗ್ರಾಮವು ಕಾಡಂಚಿನ ಪ್ರದೇಶವಾದ್ದರಿಂದ ಇಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳ ಶೇ.50ರಷ್ಟು ಕಾಡುಪ್ರಾಣಿಗಳೇ ನಾಶ ಮಾಡಿಬಿಡುತ್ತವೆ. ಇವುಗಳನ್ನೆಲ್ಲ ಎದುರಿಸಿ ನಾವು ಬೆಳೆ ಬೆಳೆಯಬೇಕು. ಆಧುನಿಕ ಶೈಲಿಯಲ್ಲಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಎಲ್ಲವೂ ಸಾಧ್ಯ ಎನ್ನುತ್ತಾರೆ ರೈತ ಪ್ರಕಾಶ್.

ಪ್ರಕಾಶ್ ತಮ್ಮ 4 ಎಕರೆ 30 ಗುಂಟೆ ಜಮೀನಿನಲ್ಲಿ ಹತ್ತಿ ಬೆಳೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಮೆಣಸಿನಕಾಯಿ ಹಾಗೂ ರಾಗಿ ಬೆಳೆದಿದ್ದಾರೆ. ಕಳೆದ ಬಾರಿ ಮಳೆ ಕಡಿಮೆಯಾಗಿದ್ದರಿಂದ ಹತ್ತಿ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲದೆ ನಮ್ಮ ಜಮೀನು ಕಾಡಿನ ಅಂಚಿನಲ್ಲಿಯೇ ಇರುವುದರಿಂದ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಹತ್ತಿ ಮತ್ತು ಮೆಣಸಿನಕಾಯಿ ಹಾಗೂ ರಾಗಿಯನ್ನು ಬೆಳೆಯನ್ನು ಬೆಳೆಯುತ್ತಿದ್ದೇನೆ ಇದರಿಂದ ನನಗೆ ಲಾಭವಾಗಿದೆ ಎನ್ನುತ್ತಾರೆ ಪ್ರಕಾಶ್.

ಪ್ರಕಾಶ್ ಬಿ.ಎ. ವ್ಯಾಸಂಗ ಮಾಡಿದ್ದರೂ ಇತರೆ ಉದ್ಯೋಗಗಳಿಗೆ ಹೋಗದೆ, ತಮ್ಮ ತಂದೆಯ ಹಾದಿಯಲ್ಲಿ ಸಾಗಿದರು. ಅವರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಕೃಷಿಯ ಬಗ್ಗೆ ಒಲವು ತೋರಿದರು. ಬಳಿಕ ತಂದೆಯ ನಂತರ ಈಗ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಉತ್ತಮ ಬದುಕುಕಟ್ಟಿಕೊಂಡಿದ್ದಾರೆ. ಆ ಮೂಲಕ ಕೃಷಿ ಬಿಟ್ಟು ನಗರಗಳತ್ತ ಮುಖ ಮಾಡುವ ಯುವಕರಿಗೆ ಮಾದರಿಯಾಗಿದ್ದಾರೆ. ಜಮೀನಿನಲ್ಲಿಯೇ ಕೊಳವೆ ಬಾವಿ ಇರುವುದರಿಂದ ಇವರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಆಧುನಿಕ ಶೈಲಿಯ ವ್ಯವಸಾಯ ಮಾಡುತ್ತಿದ್ದಾರೆ.

ಪತ್ನಿ, ತಾಯಿ, ತಮ್ಮ ಹಾಗೂ ತಮ್ಮನ ಹೆಂಡತಿಯೂ ಇವರೊಂದಿಗೆ ದುಡಿಯುವುದರಿಂದ ಒಟ್ಟಾಗಿ ದುಡಿದು ಉತ್ತಮ ಬದುಕು ನಡೆಸುತ್ತಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಈ ಬಾರಿಯೂ ಹತ್ತಿ, ಮೆಣಸಿನ ಕಾಯಿಯ ಜೊತೆಗೆ ಬಾಳೆ ಬೆಳೆಯನ್ನು ಬೆಳೆದಿದ್ದಾರೆ. ಈ ಬಾರಿಯೂ ಉತ್ತಮ ಫಲ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ ಪ್ರಕಾಶ್. ಪ್ರಕಾಶ್‌ರವರಿಗೆ ಕೃಷಿಯೊಂದಿಗೆ ರಾಜಕೀಯದಲ್ಲಿಯೂ ಒಲವು ಇದ್ದು, 2 ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಾರಿಯೂ ಹಾದನೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿರುವ ಇವರು, ಗ್ರಾಮದ ಸೇವೆಯೊಂದಿಗೆ ಕೃಷಿಯಲ್ಲಿಯೂ ಶ್ರಮಿಸಿ ಉತ್ತಮ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಇದರೊಂದಿಗೆ ನಮ್ಮದು ಕಾಡಂಚಿನ ಗ್ರಾಮವಾದ್ದರಿಂದ ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಅವುಗಳಿಂದ ತಪ್ಪಿಸಿಕೊಂಡು ಕೃಷಿ ಮಾಡಬೇಕು. ಮಳೆ ಕಡಿಮೆ ಇದ್ದರಿಂದ ನಮ್ಮಲ್ಲಿ ಹತ್ತಿ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಹೀಗಾಗಿ ಕೃಷಿ ಇಲಾಖೆಯೂ ರೈತರಿಗೆ ಹತ್ತಿ ಬೆಳೆಯುವ ಬಗ್ಗೆ ತರಬೇತಿ ನೀಡುವುದರೊಂದಿಗೆ ಪ್ರೋತ್ಸಾಹ ನೀಡಬೇಕು. ಪ್ರತಿ ತಾಲ್ಲೂಕಿನಲ್ಲಿ ಹತ್ತಿ ಮಾರುಕಟ್ಟೆ ಪ್ರಾರಂಭಿಸಬೇಕು. ಇದರಿಂದ ಮಧ್ಯ ವರ್ತಿಗಳ ಹಾವಳಿ ತಪ್ಪುತ್ತದೆ. -ಹಾದನೂರು ಪ್ರಕಾಶ್