Mysore
23
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಈ ಮನವೇಕೊ ಬಯಸಿದೇ ನಿನ್ನನ್ನೆ

ಗೋಪಾಲಸ್ವಾಮಿ ಬೆಟ್ಟದ ಕಡೆಗೆ ಪ್ರಯಾಣ

ಮನಸ್ಸು ಮತ್ತೆ ಮತ್ತೆ ನಿನ್ನನೇ ಬೇಡಿದೆ. ಎಷ್ಟು ಬೇಗ ನಿನ್ನೊಡಲ ಸೇರಿ ತಣ್ಣಗೆ ಮಲಗಲಿ ಎನ್ನಿಸುತ್ತಿದೆ. ಹೀಗೆಲ್ಲಾ ಹೇಳಿದ ತಕ್ಷಣ ವಿವಿಧ ಭಾವಗಳು ಮೂಡುವುದು ಸಹಜ. ಅದಕ್ಕೆ ಮೊದಲೇ ಬ್ರೇಕ್ ಹಾಕಬೇಕು ಎಂದೇ ನಾನು ಹೇಳುತ್ತಿರುವುದು ಚಾರಣದ ಬಗ್ಗೆ ಎಂದು ಖಚಿತಪಡಿಸುತ್ತೇನೆ.
ತಿಂಗಳಿಗೆ ಒಮ್ಮೆಯಾದರೂ ಗೆಳೆಯರೊಡನೆಯೊ, ಏಕಾಂಗಿಯಾಗಿಯೋ ಚಾರಣ ಹೋಗಬೇಕು, ಬೆಟ್ಟ ಹತ್ತಿ ಇಳಿಯಬೇಕು, ಗಾಳಿಗೆ ಮೈ ಒಡ್ಡಿ, ಹಸಿರ ರಾಶಿಯನ್ನು ಕಣ್ಣಿಗೆ ತುಂಬಬೇಕು. ಇಲ್ಲದೇ ಇದ್ದರೆ ಮನಸ್ಸು ಮತ್ತೆ ಮತ್ತೆ ತಿವಿಯುತ್ತಲೇ ಇರುತ್ತದೆ. ಜೇಬಿನ ತೂಕ, ಕಷ್ಟ, ನಷ್ಟಗಳ, ಕಮೀಟ್ ಮೆಂಟ್ ಗಳ ಗೊಡವೆ ಅದಕ್ಕೆ ಬೇಕಿಲ್ಲ. ಚಂದದ ಚಾರಣ ಒಂದು ದೊರೆತರೆ ಮುಂದಿನ ದಿನಗಳೆಲ್ಲಾ ಹರುಷಮಯ. ಇದೊಂದು ರೀತಿಯ ರೀಫ್ರೆಶ್ಮೆಂಟ್.

ಹಿಂದೆ ಹತ್ತಾರ ಬಾರಿ ವಿವಿಧ ಸ್ಥಳಗಳಿಗೆ ಚಾರಣ ಹೋಗಿದ್ದೇನೆ. ಒಮ್ಮೊಮ್ಮೆ ಒಬ್ಬನೇ, ಕೆಲವೊಮ್ಮೆ ಗೆಳೆಯರು, ಫ್ಯಾಮಿಲಿ ಜೊತೆಗೆ. ಒಂದೊಂದೂ ರೋಚಕ ಅನುಭವ. ಕೆಲವರಲ್ಲಿ ಕಹಿಯೂ ಇದೆ. ಆದರೆ ಒಟ್ಟಾಗಿ ಸೇರಿಸಿ ಅರೆದರೆ ಅದೊಂದು ರಸಪಾಕವೇ ಸೈ. ಅದಕ್ಕಾಗಿಯೇ ಬೆಟ್ಟ ಸುತ್ತುವುದು, ಕಾಡಲ್ಲಿ ಅಲೆಯುವುದು, ನೀರ ತಟದಲ್ಲಿ ಮೌನವಾಗಿ ಕೂತುಬಿಡುವುದು ನನಗೆ ಇಷ್ಟ. ಈ ಇಷ್ಟಕ್ಕಾಗಿಯೇ ಮನ ತುಡಿಯುವುದು. ಸಂತೋಷದ ಕಡೆಗೆ ಜೀವ ಜೀಕುವುದು ಎಂದರೆ ಇದೆನಾ? ಎಂದು ಹಲವಾರು ಬಾರಿ ಅನ್ನಿಸಿದೆ. ಅದು ನಿಜವೋ ಸುಳ್ಳೋ ಆದರೆ ನನ್ನ ಪಾಲಿಗೆ ಬರಿದಾದ ಬ್ಯಾಟರಿಗೆ ಕಾಡು, ಮೇಡು ಜಾರ್ಜಿಂಗ್ ಪಾಯಿಂಟ್.

ಈಗ ತಿಂಗಳು ತುಂಬುತ್ತಾ ಬಂದಿದೆ ಕಡೆಯ ಸಾವನದುರ್ಗದ ಚಾರಣಕ್ಕೆ‌. ಮುಂದೆ ಎಲ್ಲಿಗೆ ಹೋಗಬೇಕು ಎನ್ನುವ ಪಟ್ಟಿಯಲ್ಲಿ ನೂರಾರು ಸ್ಥಳಗಳಿವೆ. ಆದರೆ ಈ ಮಳೆಗಾಲದಲ್ಲಿ ಎಲ್ಲೆಲ್ಲೊ ಪ್ಲ್ಯಾನ್ ಬೇಡ ಎಂಬುದು ಕುಟುಂಬದವರ, ಸ್ನೇಹಿತರ ಸಲಹೆ. ಅದಕ್ಕಾಗಿಯೇ ನಾನು ಅಳೆದು ತೂಗಿ ಚಾಮರಾಜನಗರದ, ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮನಸ್ಸು ಮಾಡಿರುವೆ. ಅಲ್ಲಿ ಚಾರಣಕ್ಕೆ ಅವಕಾಶ ಇಲ್ಲ. ಸರ್ಕಾರಿ ಬಸ್ಸಿನಲ್ಲೇ ಬೆಟ್ಟಕ್ಕೆ ಹೋಗಬೇಕು ಎಂಬುದು ಗೊತ್ತಿದೆ. ಅದು ಸಣ್ಣ ಬೇಸರ. ಆದರೂ ಹೊಸ ಅನುಭವ ಇರಲಿ ಅಲ್ಲವೇ. ಬಸ್ಸಿನಲ್ಲಿಯೇ ಬೆಟ್ಟವೇರಿದರೂ ಬೆಟ್ಟದ ತುದಿಯಲ್ಲಿನ ತಂಪು, ಹಿತವಾದ ಗಾಳಿ, ಹಸಿರು ಹೊದ್ದ ಬೆಟ್ಟಗಳನ್ನು ಎಷ್ಟೊತ್ತಿಗೆ ನೋಡಲಿ ಎನ್ನುವ ತವಕ. ಅದೃಷ್ಟವಿದ್ದರೆ ಜಿಂಕೆ, ಆನೆಗಳ ಹಿಂಡು ಕಾಣುತ್ತವೆಯಂತೆ. ಆ ಅದೃಷ್ಟ ನನ್ನದಾಗಲಿ. ಹಿಮವನ್ನೇ ಹೊದ್ದಿರುವ ಗೋಪಾಲಸ್ವಾಮಿ ಮೈ ಮೇಲಿನ ಹಿಮ ನನ್ನನ್ನೂ ತುಸು ಸ್ಪರ್ಶಿಸಲಿ ಎನ್ನುವ ತುಡಿತ.

– ದೀಕ್ಷಿತ್ ಬಿ.ಎಸ್., ಎಸ್.ಬಿ.ಎಂ.ಲೇಔಟ್, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ