Mysore
32
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ಯೋಗ ಕ್ಷೇಮ : ಮಳೆಗಾಲದಲ್ಲಿ ಮೈ ಮರೆಯದಿರಿ

ರಾಜ್ಯದಲ್ಲಿ ಸತತವಾಗಿ ಮಳೆ ಸುರಿದು ಈಗಷ್ಟೇ ಕೊಂಚ ಬಿಡುವು ಕೊಟ್ಟಿದೆ. ಮೈಸೂರು ಸೀಮೆಯಲ್ಲಿ ನಿರಂತರವಾಗಿದ್ದ ಜಿಟಿಜಿಟಿ ಮಳೆಗೆ ಬ್ರೇಕ್ ಬಿದ್ದಿದೆ. ಆದರೆ ಈಗ ಡೆಂಗ್ಯೂ, ಚಿಕೂನ್ ಗೂನ್ಯ ರೀತಿಯ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ. ಇದರಿಂದ ಪಾರಾಗಬೇಕಾಗಿದ್ದು, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೀವನಶೈಲಿ ರೂಪಿಸಿಕೊಳ್ಳಬೇಕಾದ್ದು ಅನಿವಾರ್ಯ.

ಮೇ, ಜೂನ್, ಜುಲೈ ತಿಂಗಳುಗಳಲ್ಲಿ ಸಹಜವಾಗಿಯೇ ಸೊಳ್ಳೆಗಳ ಸಂತಾನೋತ್ಪತ್ತಿ ಪ್ರಮಾಣ ಅಧಿಕವಾಗಿರುತ್ತದೆ. ಸಾಂಕ್ರಾಮಿಕ ರೋಗವಾಹಕಗಳಾದ ಇವುಗಳಿಂದ ಪ್ರಾಣಕ್ಕೇ ಅಪಾಯ ತರಬಲ್ಲ ಡೆಂಗ್ಯೂ, ಚಿಕೂನ್ ಗೂನ್ಯಗಳಂತ ಕಾಯಿಲೆಗಳು ಹರಡುತ್ತವೆ. ಇವುಗಳಿಂದ ಪಾರಾಗಲು ಸೊಳ್ಳೆಗಳ ನಿಯಂತ್ರಣ, ಸುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಆದ್ಯತೆಯಾಗಬೇಕು. ಆಗ ಮಾತ್ರ ಡೆಂಗ್ಯೂ, ಚಿಕೂನ್ ಗೂನ್ಯಗಳಂತಹ ರೋಗಗಳಿಂದ ಪಾರಾಗಬಹುದು.

ಡೆಂಗ್ಯೂ ನಿರ್ಲಕ್ಷಿಸಿದರೆ ಅಪಾಯ

ಮಳೆಗಾಲದಲ್ಲಿ ಶೀತ, ಜ್ವರ ಸಾಮಾನ್ಯ. ಆದರೆ ಇದು ಡೆಂಗ್ಯೂ ಲಕ್ಷಣವೂ ಆಗಿರುತ್ತದೆ. ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು, ಡೆಂಗ್ಯೂ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷಧ ಪಡೆದುಕೊಂಡರೆ ಹೆಚ್ಚಿನ ಅಪಾಯ ಇಲ್ಲ. ಆದರೆ ತಡ ಮಾಡಿದರೆ ದೇಹದಲ್ಲಿನ ಬಿಳಿ ರಕ್ತಕಣಗಳ ಪ್ರಮಾಣ ಕಡಿಮೆ ಆಗಿ ಪ್ರಾಣಕ್ಕೆ ಅಪಾಯ ತರಬಲ್ಲದು.

ಡೆಂಗ್ಯೂ ಲಕ್ಷಣಗಳು

* ಮೈ,ಕೈ, ಸಂದುಗಳಲ್ಲಿ ತೀವ್ರ ನೋವು

* ಇದ್ದಕ್ಕಿದ್ದಂತೆ ಜ್ವರ ಹೆಚ್ಚಾಗುವುದು

* ವಾಂತಿ, ಭೇದಿ, ರಕ್ತಸ್ರಾವ

* ಒಸಡುಗಳಲ್ಲಿ ರಕ್ತಸ್ರಾವ
* ತಲೆ, ಸ್ನಾಯುಗಳಲ್ಲಿ ನೋವು

* ಚಳಿಯಾಗುವುದು, ಆಯಾಸ

* ಹಸಿವಾಗದೇ ಇರುವುದು

* ಚರ್ಮದ ಮೇಲೆ ದದ್ದುಗಳು ಏಳುವುದು

* ಕಣ್ಣುಗುಡ್ಡೆಗಳ ಹಿಂದೆ ಬಲವಾದ ನೋವು

ಹೇಗೆ ಹರಡುತ್ತದೆ ಡೆಂಗ್ಯೂ

ಇಡಿಸ್ ಎನ್ನುವ ಸೊಳ್ಳೆ ಕಚ್ಚುವುದರಿಂದ ಬರುವ ಡೆಂಗ್ಯೂ ಜ್ವರ ಎರಡನೇ ಮಹಾಯುದ್ಧದ ವೇಳೆಯಲ್ಲಿ ಭಾರತ ಸೇರಿ ಸುಮಾರು ೧೨೦ ದೇಶಗಳಲ್ಲಿ ಮೊದಲಿಗೆ ಕಾಣಿಸಿಕೊಂಡಿತು. ನಂತರ ಪ್ರತಿ ವರ್ಷ ಮಳೆಗಾಲದಲ್ಲಿಯೂ ಈ ರೋಗ ಕಾಣಿಸಿಕೊಳ್ಳುತ್ತಿದೆ. ಡೆಂಗ್ಯೂ ಜ್ವರವುಳ್ಳ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೆ ಕಚ್ಚಿದ ೪ರಿಂದ ೭ ದಿನಗಳಲ್ಲಿ ರೋಗದ ಲಕ್ಷಣಗಳು ಗೋಚರವಾಗುತ್ತವೆ.

ಚಿಕೂನ್ ಗೂನ್ಯವೂ ಅಪಾಯಕಾರಿ

ಡೆಂಗ್ಯೂ ರೀತಿಯ ರೋಗ ಲಕ್ಷಣಗಳೇ ಚಿಕೂನ್ ಗೂನ್ಯ ರೋಗಿಗಳಲ್ಲಿ ಕಂಡುಬರುತ್ತವೆ. ಆದರೆ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಇವೆರಡರ ನಡುವೆ ಇದ್ದು, ಚರ್ಮದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚಿಕೂನ್ ಗೂನ್ಯ ಎನ್ನುವ ವೈರಸ್‌ನಿಂದ ಈ ರೋಗ ಹರಡುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ ಇದೂ ಅಪಾಯಕಾರಿ ಆಗಬಲ್ಲದು.

ಡೆಂಗ್ಯೂ, ಚಿಕೂನ್ ಗೂನ್ಯ ನಿಯಂತ್ರಣ ಹೇಗೆ?

* ವಾಸ ಸ್ಥಾನದ ಸುತ್ತಮುತ್ತ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು

* ಸೊಳ್ಳೆ ಪರದೆಗಳ ಬಳಕೆ, ರಾಸಾಯನಿಯ ಬಳಕೆಯಿಂದ ಸೊಳ್ಳೆಗಳ ನಿಯಂತ್ರಣ

* ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಸೇವನೆ

* ಪೂರ್ತಿ ದೇಹ ಮುಚ್ಚುವಂತಹ ವಸ್ತ್ರಗಳ ಧಾರಣೆ, ಸೊಳ್ಳೆ ಕಚ್ಚಲು ಅವಕಾಶ ನೀಡದಿರುವುದು

* ಜ್ವರ, ತಲೆನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು

ಮೂರು ತಿಂಗಳ ಅಂಕಿ-ಅಂಶ

ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ೩,೩೭೮ ಡೆಂಗ್ಯೂ ಹಾಗೂ ೭೭೦ ಚಿಕೂನ್ ಗೂನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೩೬೭ ಡೆಂಗ್ಯೂ ಪ್ರಕರಣಗಳು ಮೈಸೂರು ಭಾಗದಲ್ಲಿಯೇ ಪತ್ತೆಯಾಗಿವೆ.

ಈ ಮೂರ್ನಾಲ್ಕು ತಿಂಗಳು ಎಚ್ಚರಿಕೆ ಇರಲಿ

ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಸ್.ಚಿದಂಬರ ಅವರು ಡೆಂಗ್ಯೂ, ಚಿಕೂನ್ ಗೂನ್ಯ ಕಾಯಿಲೆಗಳ ಬಗ್ಗೆ ಹೀಗೆ ಹೇಳುತ್ತಾರೆ.

ಯಾವುದೇ ವೈರಸ್‌ನಿಂದ ಬರುವ ಕಾಯಿಲೆಗಳಿಗೆ ಸೂಕ್ತ ಟ್ರೀಟ್‌ಮೆಂಟ್ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮಳೆಗಾಲದ ಮೂರ್ನಾಲ್ಕು ತಿಂಗಳುಗಳಲ್ಲಿ ಸಹಜವಾಗಿಯೇ ಡೆಂಗ್ಯೂ, ಚಿಕೂನ್ ಗೂನ್ಯ ಪ್ರಕರಣಗಳು ಹೆಚ್ಚಿರುತ್ತವೆ. ಈ ನಿಟ್ಟಿನಲ್ಲಿ ೨೦೧೬ರಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಇಡೀಸ್ ಸೊಳ್ಳೆ ಮನುಷ್ಯರನ್ನು ಬಿಟ್ಟು ಬೇರೆಯವರಿಗೆ ಕಚ್ಚುವುದಿಲ್ಲ. ಅದು ಸ್ವಲ್ಪ ನೀರಿನಲ್ಲಿಯೆ ಉತ್ಪತ್ತಿಯಾಗುತ್ತದೆ. ತನ್ನ ಸುತ್ತಲಿನ ೧೦೦ ಮೀ. ಅಂತರದಲ್ಲಿ ಇದರ ಓಡಾಟ ಇರುತ್ತದೆ. ಸೊಳ್ಳೆಗಳ ಉತ್ಪತ್ತಿಯನ್ನು ಕಡಿಮೆ ಮಾಡುವುದೇ ನಾವು ರೋಗದ ವಿರುದ್ಧ ಹೋರಾಡುವ ಪ್ರಮುಖ ಅಸ್ತ್ರ. ಇದಕ್ಕಾಗಿಯೇ ನಾವು ಲಾರ್ವಾ ಸರ್ವೆಯನ್ನು ಮಾಡಿ ಇಡೀಸ್ ಸೊಳ್ಳೆಗಳ ನಿಯಂತ್ರಣ ಮಾಡುತ್ತಿದ್ದೇವೆ.

ಸಾರ್ವಜನಿಕರು ೩ ದಿನಕ್ಕಿಂತ ಹೆಚ್ಚು ಸಮಯ ಜ್ವರ ಇದ್ದರೆ ತಕ್ಷಣ ಜಿಲ್ಲಾ ಆಸ್ಪತ್ರೆಗಳಿಗೆ ಬಂದು ರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ನಮಗೂ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ