ಪುನೀತ್ ರಾಜ್‌ಕುಮಾರ್ ಭರ್ಜರಿ ನೃತ್ಯ ಮಾಡಿರುವ ಸಿನಿಮಾ
ಪುನೀತ್ ರಾಜ್‌ಕುಮಾರ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ‘ಲಕ್ಕಿಮ್ಯಾನ್’ ಚಿತ್ರ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಮೂಗೂರು ಸುಂದರಂ ಅವರ ಮೊಮ್ಮಗ ನಾಗೇಂದ್ರ ಪ್ರಸಾದ್ ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನಕ್ಕೆ ಇಳಿದಿರುವುದು ಚಿತ್ರದ ಮತ್ತೊಂದು ವಿಶೇಷ.
ಮೊನ್ನೆ ಮೊನ್ನೆ ಪುನೀತ್‌ರಾಜ್‌ಕುಮಾರ್ ಮತ್ತು ಪ್ರಭುದೇವ ಅವರು ಒಟ್ಟಿಗೆ ಡ್ಯಾನ್ಸ್ ಮಾಡಿರುವ ಹಾಡೊಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ. ಸೆ. ೯ರಂದು ತೆರೆಗೆ ಬರಲು ಸಿದ್ಧತೆ ನಡೆಸಿರುವ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ, ಸಂಗೀತ ಶೃಂಗೇರಿ, ರೋಶಿಣಿ ನಾಯಕಿಯರು.
ತಮಿಳಿನ ‘ಓ ಮೈ ಕಡವಳೇ’ (ಓ ನನ್ನ ದೇವರೆ) ಚಿತ್ರದ ರೀಮೇಕ್ ಆದ ‘ಲಕ್ಕಿ ಮ್ಯಾನ್’ ಹಲವು ಆಯಾಮಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಒಂದು ಕಡೆ ಪುನೀತ್ ರಾಜ್‌ಕುಮಾರ್, ಪ್ರಭುದೇವ ಒಟ್ಟಿಗೆ ಕಾಣಿಸಿಕೊಂಡಿರುವುದು, ಡಾರ್ಲಿಂಗ್ ಕೃಷ್ಣ ಅವರ ಮೇಲಿನ ನಿರೀಕ್ಷೆ, ನಾಗೇಂದ್ರ ಪ್ರಸಾದ್ ಅವರ ಕನ್ನಡದ ಚೊಚ್ಚಲ ನಿರ್ದೇಶನ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿದ್ದ ದೊಡ್ಡ ತಾರಾಬಳಗವೇ ಪುನೀತ್ ಅವರ ಸ್ಮರಣೆಯಲ್ಲಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್, ಅಪ್ಪು ಅಭಿನಯದ ಈ ಚಿತ್ರವನ್ನು ಅಪ್ಪಿಕೊಳ್ಳುವ ಅವಕಾಶ ಒಮ್ಮೆ ಮಾತ್ರ ಇದೆ, ಎಲ್ಲರೂ ಅಪ್ಪಿಕೊಳ್ಳಿ ಎಂದು ಕರೆ ನೀಡಿದರು. ಅಪ್ಪು ಅವರ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ತಮಗೆ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದರು ನಾಯಕ ಡಾಲಿರ್ಂಗ್ ಕೃಷ್ಣ.
ಸುಂದರ್ ರಾಜ್, ಸಾಧುಕೋಕಿಲ, ರಂಗಾಯಣ ರಘು, ನಾಗಭೂಷಣ, ಮಾಳವಿಕ ಅವಿನಾಶ್, ಸುಧಾ ಬೆಳವಾಡಿ ಸೇರಿ ಹಲವರ ತಾರಾಗಣ ಚಿತ್ರದಲ್ಲಿದೆ.