ಬೆಂಗಳೂರು: ಕನ್ನಡ ಚಿತ್ರರಂಗದ ನಟ ರಿಷಬ್ ಶೆಟ್ಟಿ ಅವರಿಗೆ ಇತ್ತೀಚೆಗೆ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಘೋಷಣೆ ಆಗಿತ್ತು. ಅವರಿಗೆ ‘ಅತ್ಯಂತ ಭರವಸೆಯ ನಟ’ ಅವಾರ್ಡ್ ಸಿಕ್ಕಿತ್ತು. ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಇದರ ಫೋಟೋಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಗೌರವ ಸ್ವೀಕರಿಸಿದ ರಿಷಬ್ಗೆ ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಿಷಬ್ ಮಾತ್ರವಲ್ಲದೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ರಿಷಬ್ ಶೆಟ್ಟಿ ಅವರು ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿದ್ದು ವಿಶೇಷವಾಗಿತ್ತು. ಈ ಮೊದಲು ಅನೇಕ ಕಾರ್ಯಕ್ರಮಗಳಿಗೆ ಅವರು ಇದೇ ರೀತಿ ಟ್ರೆಡಿಷನಲ್ ಲುಕ್ನಲ್ಲಿ ತೆರಳಿದ್ದರು. ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದರು. ನಮ್ಮ ಸಂಸ್ಕೃತಿಯನ್ನು ಎಲ್ಲ ಕಡೆಗಳಲ್ಲಿ ಪಸರಿಸುವ ಕೆಲಸ ಮಾಡುತ್ತಿರುವ ರಿಷಬ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪ್ರಶಸ್ತಿಯನ್ನು ಅವರು ದೈವ ನರ್ತಕರು, ನಮ್ಮನ್ನು ಅಗಲಿದ ಪುನೀತ್ ರಾಜ್ಕುಮಾರ್ ಹಾಗೂ ಎಸ್.ಕೆ ಭಗವಾನ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಅನುಪಮ್ ಖೇರ್ ಹಾಗೂ ವರುಣ್ ಧವನ್ ಅವರು ರೆಡ್ ಕಾರ್ಪೆಟ್ ಮೇಲೆ ಮುಖಾಮುಖಿ ಆದರು. ಪರಸ್ಪರ ಅಪ್ಪಿಕೊಂಡು ವಿಶ್ ತಿಳಿಸಿದರು. ದುಲ್ಖರ್ ಸಲ್ಮಾನ್ ಕೂಡ ಎಲ್ಲರ ಗಮನ ಸೆಳೆದರು. ರೇಖಾ, ಆಲಿಯಾ ಭಟ್ ಸೇರಿ ಇನ್ನೂ ಅನೇಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಲಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.