ಪುನೀತ್ ರಾಜ್‌ಕುಮಾರ್ ಇದ್ದಿದ್ದರೆ, ದೊಡ್ಡ ಸಂಭ್ರಮ ಮನೆ ಮಾಡಿರುತ್ತಿತ್ತು. ಮಾರ್ಚ್ ೧೭ಕ್ಕೆ ಅವರು ೫೦ ಮುಗಿಸಿ,೫೧ನೇ ವರ್ಷಕ್ಕೆಕಾಲಿಡುತ್ತಿದ್ದರು. ಪುನೀತ್ ಇಲ್ಲದ ಈ ಹೊತ್ತಿನಲ್ಲಿಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದ್ದಾರೆ.
ಈಗಾಗಲೇ ಪುನೀತ್ ಅವರ ೫೦ನೇ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಬೆಂಗಳೂರು ಕೇಂದ್ರ ಅಂಚೆ ಮಹಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿಅಪ್ಪು ಸ್ಮರಣಾರ್ಥವಿಶೇಷ ಪಿಕ್ಚರ್ ಪೋಸ್ಟ್‌ಕಾರ್ಡ್ ಬಿಡುಗಡೆ ಮಾಡಲಾಯಿತು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಪೋಸ್ ಕಾರ್ಡ್ ಬಿಡುಗಡೆ ಮಾಡಿದರು. ಪುನೀತ್ ಅವರ ಭಾವಚಿತ್ರ ಮತ್ತು ಅವರ ಸಿನಿಪಯಣವನ್ನು ಬಿಂಬಿಸುವ ಚಿತ್ರಗಳು ಈ ಪೋಸ್ಟ್‌ಕಾರ್ಡ್‌ನಲ್ಲಿವೆ.
ಇದಲ್ಲದೆ, ಹುಟ್ಟುಹಬ್ಬದ ಪ್ರಯುಕ್ತ ಇಂದು ಪುನೀತ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಕಳೆದ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಜಾಕಿ’ ಮರುಬಿಡುಗಡೆಯಾಗಿತ್ತು.ಈ ವರ್ಷ ‘ಅಪ್ಪು’ ಚಿತ್ರವನ್ನು ಮರುಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಆಗಲೇ ಮನವಿ ಸಲ್ಲಿಸಿದ್ದರು.
ಅದರಪ್ರಕಾರ, ಇಂದು ‘ಅಪ್ಪು’ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಸ್ವಾಗತ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಬೆಳಿಗ್ಗೆ ೬.೩೦ಕ್ಕೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಶುರುವಾಗಲಿದೆ.ಮಿಕ್ಕಂತೆ, ಪುನೀತ್ ಸ್ಮಾರಕದಲ್ಲಿ ಅಭಿಮಾನಿಗಳು ಎಂದಿನಂತೆ ಸೇರಲಿದ್ದಾರೆ. ಬೆಳಿಗ್ಗೆ ಕುಟುಂಬದವರು ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.