ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪದ್ದತಿಯ ಮೂಲಕ ಹೊಸ ಬಾಳಿಗೆ ಕಾಲಿಟ್ಟ ನಟಿ ಪೂಜಾ ಗಾಂಧಿ ಅವರು ಇದೀಗ ಕುವೆಂಪು ಅವರ ಹುಟ್ಟೂರಿನಲ್ಲಿರುವ ಕವಿ ಶೈಲಕ್ಕೆ ಪತಿ ವಿಜಯ್ ಘೋರ್ಪಡೆಯವರ ಜೊತೆ ಭೇಟಿ ನೀಡಿದ್ದಾರೆ.
ಈ ಫೊಟೋವನ್ನು ನಟಿ ಪೂಜಾ ಗಾಂಧಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕವಿಶೈಲ ಎಂದು ಬರೆದುಕೊಂಡಿದ್ದಾರೆ. ಮಳೆ ಹುಡುಗಿಯ ಕನ್ನಡ ಪ್ರೇಮಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದ್ದು, ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಉತ್ತರ ಪ್ರದೇಶ ಮೂಲದವರಾದ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಮಾತೃ ಭಾಷೆ ಹಿಂದಿ ಆದರೂ ಕೂಡ ಅವರು ಕನ್ನಡ ಭಾಷೆಯ ಮೇಲೆ ಪೂಜಾ ಗಾಂಧಿ ಅವರು ಅಪಾರವಾದ ಒಲವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಇರುವ ಪರ ಭಾಷಿಕರೂ ಕೂಡ ಕನ್ನಡವನ್ನು ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟ ಮುಂಗಾರುಮಳೆ ಸಿನಿಮಾ ಮೂಲಕ ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪೂಜಾ ಗಾಂಧಿ ಅವರು ನವೆಂಬರ್ 23 ರಂದು ಬೆಂಗಳೂರಿನ ಯಲಹಂಕದಲ್ಲಿ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಪದ್ದತಿಯ ಮೂಲಕ ಉದ್ಯಮಿ ವಿಜಯ್ ಘೋರ್ಪಡೆ ಅವರ ಕೈ ಹಿಡಿದು ಹೊಸ ಜೀವನಕ್ಕೆ ಕಾಲಿರಿಸಿದ್ದರು. ಸ್ಯಾಂಡಲ್ವುಡ್ ನ ಹಲವಾರು ನಟ ನಟಿಯರು ಮದುವೆಯಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭ ಕೋರಿದ್ದರು.
ವಿಶೇಷವೆಂದರೆ ನಟಿ ಪೂಜಾ ಗಾಂಧಿ ಅವರು ತಮ್ಮ ಕೈಯ್ಯಾರೆ ಅಚ್ಚ ಕನ್ನಡದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಬರೆದು ಆತ್ಮೀಯವಾಗಿ ಮದುವೆಗೆ ಆಹ್ವಾನಿಸಿದ್ದರು.