ಸೌತ್ ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚಿಗಷ್ಟೆ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ತಂದೆ-ತಾಯಿಯಾಗಿದ್ದಾರೆ. ಮನೆಗೆ ಮುದ್ದಾದ ಮಕ್ಕಳು ಆಗಮಿಸಿದ ಸಂತಸವನ್ನು ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ಬಹಿರಂಗ ಪಡಿಸುತ್ತಿದ್ದಂತೆ ವಿವಾದ ಸುತ್ತಿಕೊಂಡಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದು ನಿಯಮಗಳ ಪ್ರಕಾರವೇ ಇದಿಯಾ ಎಂದು ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ಬಗ್ಗೆ ನಯನತಾರಾ ಪ್ರತಿಕ್ರಿಯೆ ನೀಡಿದ್ದಾರೆ. ಬಾಡಿಗೆ ತಾಯಿ ತನ್ನ ಸಂಬಂಧಿ, ನಾವು 6 ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿದ್ವಿ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮಿಳುನಾಡು ಆರೋಗ್ಯ ಇಲಾಖೆಗೆ ನೀಡಿದ ಅಫಿಡವಿಟ್‌ನಲ್ಲಿ ನಯನತಾರಾ ದಂಪತಿ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಮದುವೆಯಾದೆವು ಆದರೆ 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಆಗಿದ್ದೆವು ಎಂದು ಮದುವೆ ನೋಂದಣಿ ಸರ್ಕಿಫಿಕೇಟ್ ಅನ್ನು ಅಫಿಡವಿಟ್ ಜೊತೆಯೇ ನೀಡಿದ್ದಾರೆ. ಸ್ಟಾರ್ ಜೋಡಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ, ಕಳೆದ ವರ್ಷ ಡಿಸೆಂಬರ್‌ನಲ್ಲೇ ಬಾಡಿಗೆ ತಾಯ್ತನದ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೆವು ಎಂದು ಹೇಳಿದ್ದಾರೆ. ಬಾಡಿಗೆ ತಾಯಿ ನಯನತಾರಾ ಅವರ ಸಂಬಂಧಿ ಆಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಅವಳಿ ಮಕ್ಕಳು ಚೆನ್ನೈ ಆಸ್ಪತ್ರೆಯಲ್ಲಿ ಜನಿಸಿದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಬಾಡಿಗೆ ತಾಯ್ತನದ ನಿಯಮ
ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ವಯಸ್ಸು 21-35ರ ಅಂತರದಲ್ಲಿ ಇರಬೇಕು. ದಂಪತಿಗೆ ಹತ್ತರದ ಸಂಬಂಧಿ ಆಗಿರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ನಿಯಮವನ್ನು ಪಾಲಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ದಂಪತಿ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.