Mysore
21
overcast clouds

Social Media

ಗುರುವಾರ, 17 ಜುಲೈ 2025
Light
Dark

ನಟ ಪ್ರಕಾಶ್​ ರಾಜ್‌ಗೆ ಜೀವ ಬೆದರಿಕೆ: ಕನ್ನಡ ಯೂಟ್ಯೂಬ್​ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಂದ್ರಯಾನ, ಸನಾತನ ಧರ್ಮಗಳ ಬಗ್ಗೆ ಹೇಳಿಕೆ ನೀಡಿ, ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಅವರು ಯೂಟ್ಯೂಬ್​ ಚಾನೆಲ್ ಒಂದರ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಕಾಶ್ ರಾಜ್ (58) ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆಯೊಡ್ಡಿರುವ ವಿಡಿಯೊಗಳನ್ನು ಹರಿಬಿಟ್ಟಿರುವ ಯೂಟ್ಯೂಬ್‌ನ ‘ವಿಕ್ರಮ್ ಟಿ.ವಿ’ ಚಾನೆಲ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕಾಶ್ ರಾಜ್ ಅವರು ದೂರು ನೀಡಿದ್ದಾರೆ. ಅದನ್ನು ಆಧರಿಸಿ ವಿಕ್ರಮ್ ಟಿ.ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.

ನಟ ಹಾಗೂ ನಿರ್ದೇಶಕನಾಗಿರುವ ನಾನು, ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ವಿವಿಧ ವಿಷಯಗಳ ಚರ್ಚೆ–ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸೆ.14ರಂದು ವಿಕ್ರಮ್ ಟಿ.ವಿ. ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ಎರಡು ವಿಡಿಯೊ ವೀಕ್ಷಣೆ ಮಾಡಿದೆ. ಎರಡೂ ವಿಡಿಯೊದಲ್ಲಿ ನನ್ನ ಜೀವಕ್ಕೆ ಅಪಾಯವಾಗುವ ಸಂಗತಿಗಳಿದ್ದವು ಎಂದು ಪ್ರಕಾಶ್ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಬೆದರಿಕೆ ಹಾಕುವ ಸ್ಟಾಲಿನ್, ಪ್ರಕಾಶ್ ರಾಜ್‌ನಂಥವರನ್ನು ಮುಗಿಸಬೇಕೆ…? ಹಿಂದೂಗಳು ಮಾಡಬೇಕಾಗಿರುವುದು ಏನು…? ಸನಾತನ ಧರ್ಮ/ಹಿಂದೂಗಳೇ ಮಲಗೇ ಇರ್ತಿರಾ…? ಎಂಬಿತ್ಯಾದಿ ಶಬ್ದಗಳನ್ನು ಬಳಸಿ ವಿಡಿಯೊ ಮಾಡಲಾಗಿದೆ.

ಇದೇ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿಡಿಯೊದಲ್ಲಿರುವ ಅಂಶಗಳು ನನಗೆ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆಯೊಡ್ಡುವಂತಿವೆ. ಇಂಥ ವಿಡಿಯೊ ಮಾಡಿರುವ ವಿಕ್ರಮ್ ಟಿ.ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಟ ಪ್ರಕಾಶ್​ ರಾಜ್​ ದೂರಿನ ಆಧಾರದಲ್ಲಿ ಅಶೋಕನಗರ ಪೊಲೀಸರು ಜೀವ ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!