ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಭರ್ಜರಿ ಯಶಸ್ಸನ್ನ ಕಂಡಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಾಂತಾರ 1 ನೋಡಿ ಥ್ರಿಲ್ ಆಗಿದ್ದ ಸಿನಿ ರಸಿಕರು ಕಾಂತಾರ 2 ಗಾಗಿ ಕಾದು ಕುಳಿತಿದ್ದಾರೆ. ಹೀಗಿರುವಾಗ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಸುತ್ತಿರುವ, ಕಾಂತಾರ 2 ಸಿನಿಮಾ ಮುಹೂರ್ತ ಇದೆ ತಿಂಗಳ 27ಕ್ಕೆ ನಿಗದಿಯಾಗಿದೆ.
ಕಾಂತಾರ ಮೊದಲ ಭಾಗದಂತೆ ಎರಡನೇ ಭಾಗವು ಕೂಡ ಯಶಸ್ಸನ್ನು ಕಾಣಬೇಕೆಂದು ರಿಷಬ್ ಶೆಟ್ಟಿ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ಕುಟುಂಬಸ್ಥರೊಂದಿಗೆ ದೀಪಾವಳಿ ಆಚರಿಸಿದ್ದ ರಿಶಬ್ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ರಿಷಬ್ ಶೆಟ್ಟಿ ಎಂದಿನಂತೆ ಕಾಣಿಸಿರಲಿಲ್ಲ. ಬದಲಾಗಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಕಾಂತಾರ 2ಗಾಗಿ ರಿಷಬ್ ತಮ್ಮ ಗೆಟಪ್ ಬದಲಿಸಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಇದೀಗ ಅಭಿಮಾನಿಗಳ ಮಾತು ಸತ್ಯವಾಗಿದೆ. ಕಾಂತಾರ 2 ನಲ್ಲಿ ರಿಷಬ್ ಶೆಟ್ಟಿ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ಬಳಿಕ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ಹೊರಬರಲಿದೆ.
ಕರ್ನಾಟಕ ರಾಜ್ಯದ ಪ್ರಾದೇಶಿಕ ದೈವಾಚರಣೆಯ ಕುರಿತಾದ ಕಾಂತರಾ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗೆದ್ದು ಬೀಗಿತ್ತು. ಈ ಮೂಲಕ ರಿಕ್ಷಬ್ ಶೆಟ್ಟಿ ಅವರು ಯಶಸ್ಸಿನ ಉತ್ತುಂಗಕ್ಕೇರಿದರು. ಅದಷ್ಟೇ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.