Mysore
22
broken clouds
Light
Dark

ಮಧ್ಯಾಹ್ನ 3 30 ಕ್ಕೆ ನಟಿ ಲೀಲಾವತಿ ಅಂತ್ಯ ಸಂಸ್ಕಾರ

ಬೆಂಗಳೂರು : ವಯೋಸಹಜ ಕಾರಣದಿಂದ ನೆನ್ನೆ ಕೊನೆಯುಸಿರೆಳೆದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಸಂಸ್ಕಾರ ಇಂದು ಮದ್ಯಾಹ್ನ 3 30 ಕ್ಕೆ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದ ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಈ ವರೆಗೆ ಹಲವಾರು ಅಭಿಮಾನಿಗಳು, ಕಲಾವಿದರು, ತಂತ್ರಜ್ಞರು ಸೇರಿದಂತೆ ನೂರಾರು ಮಂದಿ ಅಗಲಿದ ತಾರೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

10 ಗಂಟೆಯ ನಂತರ ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಹಾಗೂ ನಟ ನಟಿಯರು ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದಾರೆ.

ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ಲೀಲಾವತಿ ನೆನ್ನೆ ಕೊನೆಯುಸಿರೆಳೆದ್ದಾರೆ. ಕನ್ನಡದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಇತರೆ ಭಾಷೆಗಳೂ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ್ದ ನಟಿ ಲೀಲಾವತಿ ಆರನೇ ವರ್ಷಕ್ಕೆ ತನ್ನ ಪೋಷಕರನ್ನು ಕಳೆದುಕೊಂಡಿದ್ದರು. ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿರುವ ಲೀಲಾವತಿ ತಮ್ಮ ಒಬ್ಬನೇ ಮಗ ವಿನೋದ್‌ರಾಜ್‌ಅವರನ್ನು ಅಗಲಿದ್ದಾರೆ.

ಚಂಚಲ ಕುಮಾರಿ ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದ ಲೀಲಾವತಿ ನಾಗ ಕನ್ನಿಕಾ, 1958ರ ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ಧರ್ಮ ವಿಜಯ ಹಾಗೂ ರಣಧೀರ ಕಂಠೀರವ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ಮಹಾಲಿಂಗ ಭಾಗವತರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿಯಲ್ಲಿಯೂ ಕೆಲಸ ಮಾಡಿದ್ದ ಲೀಲಾವತಿ 1960ರಲ್ಲಿ ತೆರೆಗೆ ಬಂದಿದ್ದ ರಾಣಿ ಹೊನ್ನಮ್ಮ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ