ರಣವೀರ್ ಸಿಂಗ್ ಅವರ ಸಿನಿಮಾಗಳು ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಆದರೆ, ಅವರು ವೈಯಕ್ತಿಕ ವಿಚಾರಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಅಪ್ಲೋಡ್ ಮಾಡಿದ್ದ ಬೆತ್ತಲೆ ಫೋಟೋ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಣವೀರ್ ಸಿಂಗ್ ಅವರು ಮುಂಬೈ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಆ ಫೋಟೋಗಳಿಂದ ಅಷ್ಟೊಂದು ಸಮಸ್ಯೆ ಉಂಟಾಗುತ್ತದೆ ಎಂಬುದು ಗೊತ್ತಿರಲಿಲ್ಲ ಎಂಬ ಮಾತನ್ನು ರಣವೀರ್ ಸಿಂಗ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಪೇಪರ್ ಮ್ಯಾಗಜಿನ್ಗಾಗಿ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಒಂದು ವರ್ಗದ ಜನರು ರಣವೀರ್ ಸಿಂಗ್ ಅವರನ್ನು ಹೊಗಳಿದರೆ ಮತ್ತೊಂದು ವರ್ಗದವರು ರಣವೀರ್ ಸಿಂಗ್ ಅವರನ್ನು ತೆಗಳಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು. ಆ ಬಳಿಕ ರಣವೀರ್ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಲಾಯಿತು.
ಆಗಸ್ಟ್ 22ರಂದು ರಣವೀರ್ ಸಿಂಗ್ ಅವರು ವಿಚಾರಣೆಗೆ ಹಾಜರಿ ಹಾಕಬೇಕಿತ್ತು. ಆದರೆ, ಬೇರೆಬೇರೆ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇರುವುದರಿಂದ 10 ದಿನಗಳ ಹೆಚ್ಚಿನ ಕಾಲಾವಕಾಶ ಕೇಳಿದ್ದರು. ಸೋಮವಾರ (ಆಗಸ್ಟ್ 29) ರಣವೀರ್ ಸಿಂಗ್ ಅವರು ವಿಚಾರಣೆ ಎದುರಿಸಿದ್ದಾರೆ.
ಮುಂಜಾನೆ 7 ಗಂಟೆಗೆ ರಣವೀರ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ‘ನಾನು ವಿವಾದಾತ್ಮಕ ಫೋಟೋಗಳನ್ನು ಅಪ್ಲೋಡ್ ಮಾಡಿಲ್ಲ. ಆ ಫೋಟೋಗಳು ಆ ರೀತಿಯ ಸಮಸ್ಯೆ ತರುತ್ತದೆ ಎಂದು ನಾನು ಯೋಚಿಸಿರಲಿಲ್ಲ’ ಎಂದು ರಣವೀರ್ ಸಿಂಗ್ ಅವರು ಪೊಲೀಸರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ರಣವೀರ್ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ರಣವೀರ್ ಸಿಂಗ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಣವೀರ್ ಸಿಂಗ್ ‘ಸರ್ಕಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರಕ್ಕೆ ನಾಯಕಿಯರು. ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ.