ಅಂಬೇಡ್ಕರ್ ಚಿಂತನೆಗಳನ್ನೇ ಸಿನಿಮಾ ಆಗಿಸುವ ಪಾ.ರಂಜೀತ್
“ನೀಲಂ” ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಿರುವ ಶೋಷಿತರ ನಾಯಕ.
“ನಿನ್ನದು ಅಧಿಕಾರ ಅಷ್ಟೇ ಇದ್ದು ಹೋಗುತ್ತೀಯಾ; ನನ್ನದು ಹಕ್ಕು ನಾನು ಇರುವವರೆಗೂ ಇದು ನನ್ನ ನೆಲ” ಈ ವಿಧದ ಸಂಭಾಷಣೆಗಳನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಹೇಳಿಸುವುದು ಸಾಮಾನ್ಯ ವಿಷಯವಲ್ಲ. ಅಂತಹ ಸಂಭಾಷಣೆಗಳು ಕೇಳಿ ಬರುವುದು ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜೀತ್ ಅವರ ಸಿನಿಮಾಗಳಲ್ಲಿ ಮಾತ್ರ.
ಹೌದು ತಮಿಳುನಾಡು ಹಾಗೂ ಭಾರತ ಚಿತ್ರರಂಗದಲ್ಲೇ ತನ್ನ ಸಿನಿಮಾ ನಿರ್ದೇಶನದ ಮೂಲಕ ಛಾಪು ಮೂಡಿಸಿರುವ ಪಾ.ರಂಜೀತ್ ಅವರು ತನ್ನಿಡಿ ದಲಿತ ಸಮುದಾಯದ ಛಲ, ಸ್ವಾಭಿಮಾನದ ಬದುಕು ಹಾಗೂ ಸಾಂಸ್ಕೃತಿಕ ಸಂರಚನೆಯ ವಾರಸುದಾರರಾಗಿ ಮೆರೆಯುತ್ತಿದ್ದಾರೆ ಆ ಪಯಣಕ್ಕೆ ೧೦ ವರ್ಷಗಳು ತುಂಬಿ ಬಂದಿದ್ದು ಭಾರತದ ಬಹುದೊಡ್ಡ ಜನವರ್ಗ ಈ ಸಂಭ್ರಮವನ್ನು ತೆರೆಮರೆಯಲ್ಲೇ ಆಚರಿಸುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ.
ಪಾ.ರಂಜೀತ್ ಅವರು ೧೯೮೨ ಡಿ.೮ ರಂದು ಚೆನ್ನೈನ ಕರಲಪಕ್ಕಂನ ದಲಿತ ಕುಟುಂಬದಲ್ಲಿ ಜನಿಸಿದರು. ಕರಲಪಕ್ಕಂ,ವೆಲಿಯೂರು, ಅವಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಚೆನ್ನೈನಲ್ಲಿ ಫೈನ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನಿಧಾನವಾಗಿ ಸಿನಿಮಾ ಕಡೆ ದೃಷ್ಟಿ ಹಾಯಿಸಿದರು. ಹಲವಾರು ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿದ ಪಾ.ರಂಜೀತ್ ಅವರು ಅಟ್ಹಕತ್ತಿ ಎಂಬ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಒಂದು ದಶಕಗಳಲ್ಲಿ ಕಾರ್ತೀಕ್ ನಟನೆಯ ಮದ್ರಾಸ್, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕಬಾಲಿ ಹಾಗೂ ಕಾಳ ಮತ್ತು ಸರಪಟ್ಟ ಪರಂಬರೈ ಎಂಬ ಬೆರಳೆಣಿಕೆ ಸಿನಿಮಾಗಳನ್ನು ನಿರ್ದೇಶಿಸಿ ಅತ್ಯುತ್ತಮ ನಿರ್ದೇಶಕ ಎಂಬ ಅನೇಕ ಪ್ರಶಸ್ತಿಗಳನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನಣೆ ಗಳಿಸಿದ್ದಾರೆ.
ಜಾತಿಯ ಕಾರಣಕ್ಕೆ ಯಾರ ಪ್ರತಿಭೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪೂರ್ತಿಯ ಮಾತನಾಡುವ ಪಾ.ರಂಜೀತ್ ಅವರು ಶೋಷಿತ ಜನಾಂಗದಿಂದಲೇ ಪುಟಿದೇಳಿ ಬಂದು ಶೋಷಿತರ ಬದುಕು ಮತ್ತು ಬವಣೆಯನ್ನು ಕಥೆಯಾಗಿಸುವುದು ಇದೆಯಲ್ಲಾ ಅದು ದ್ಯಾವನೂರು ಮಹಾದೇವ ಅವರು ಒಡಲಾಳ ಮತ್ತು ಕುಸುಮಬಾಲೆಯ ಮೂಲಕ ದಲಿತ ಲೋಕವನ್ನು ಹೊರಜಗತ್ತಿಗೆ ತೋರಿಸಿದಂತೆಯೇ ಇದೆ. ಆದರೆ ದಲಿತರ ಗೋಳಿನ ಕಥೆಯ ಬದಲು ಆಕ್ರೋಶದ ಕಥೆಯನ್ನು ಹೇಳುವ ಪಾ.ರಂಜೀತ್ ಅವರು ವರ್ಣಮಯವಾಗಿ ಸಿನಿಮಾ ತೋರಿಸಿ ರಂಜಿಸುವ ಬದಲು ದಲಿತರ ಹಕ್ಕು, ಅಧಿಕಾರ, ಅಸ್ಮಿತೆ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ತಮ್ಮ ಸಿನಿಮಾಗಳ ಕಥೆಯಾಗಿಸಿ ಇಡೀ ಜಗತ್ತೇ ಪಾ.ರಂಜೀತ್ ಸಿನಿಮಾದತ್ತಾ ನೋಡುವ ರೀತಿ ದೈತ್ಯವಾಗಿ ಬೆಳೆದಿದ್ದಾರೆ.
“ನೀಲಂ” ಕಲ್ಚರಲ್ ಮೂಲಕ ಕ್ರಾಂತಿ: ಅಮೆರಿಕದ ನಾಗರಿಕ ಹಕ್ಕುಗಳ ಯುಗದ ಕಪ್ಪು ಕಲಾವಿದರಿಂದ ಪ್ರೇರಿತರಾದ ರಂಜಿತ್ ಅವರು ತಮಿಳುನಾಡಿನಲ್ಲಿ ನೀಲಂ ಕಲ್ಚರಲ್ ಸಾಂಸ್ಕೃತಿಕ ಕೇಂದ್ರವನ್ನು ರಚಿಸಿದ್ದಾರೆ, ಇದು ದಲಿತ ಸಮುದಾಯವನ್ನು ಸಬಲೀಕರಣಗೊಳಿಸಲು ಉದ್ದೇಶಿಸಿದೆ. ಯುವ ದಲಿತ ಲೇಖಕರು ಮತ್ತು ಕವಿಗಳಿಗಾಗಿ ಪ್ರಕಾಶನ ಘಟಕವನ್ನು ಸ್ಥಾಪಿಸಿದ್ದಾರೆ, ಕ್ಯಾಸ್ಟ್ ಲೆಸ್ ಕಲೆಕ್ಟೀವ್ ಎಂಬ ಜಾತಿ ವಿರೋಧಿ ಬ್ಯಾಂಡ್ ಮತ್ತು ದಲಿತರ ಜೀವನ ಮತ್ತು ಆಹಾರವನ್ನು ಪ್ರದರ್ಶಿಸುವ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದಾರೆ. ನೀಲಂ ಪ್ರೊಡಕ್ಷನ್ಸ್ ಮೂಲಕ ಯುವ ನಿರ್ದೇಶಕರಿಗೆ ಅವಕಾಶ ನೀಡಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಹೋರಾಟವು ಪ್ರತಿ ದಲಿತರ ಜೀವನದ ಒಂದು ಭಾಗವಾಗಿದೆ, ನನ್ನ ಜೀವನವು ಪ್ರತಿರೋಧದ ಒಂದು ರೂಪವಾಗಿದೆ ಎಂದು ಹೇಳುವ ಪಾ.ರಂಜೀತ್ ಚಿತ್ರರಂಗದಲ್ಲಿ ದಶಕ ಪೂರೈಸುತ್ತಿದ್ದಂತೆ ಬ್ಯುಸಿಯಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಪ್ಪು ಇತಿಹಾಸದ ತಿಂಗಳ ಕಾರ್ಯಕ್ರಮ, ಏಪ್ರಿಲ್‌ನಲ್ಲಿ ನಡೆದ ಕಲಾ ಉತ್ಸವ ಹಾಗೂ ಕಳೆದ ತಿಂಗಳು ನಡೆದ ಕ್ಯಾನೆಸ್ ಚಲನಚಿತ್ರೋತ್ಸವಕ್ಕೆ ಪಾ.ರಂಜೀತ್ ಪಾದಾರ್ಪಣೆ ಮಾಡಿರುವುದು ಶೋಷಿತರ ಪಾಲಿನ ಸಂಭ್ರಮದ ವಿಚಾರವಾಗಿದೆ.