Light
Dark

ಕೊರಿಯೋಗ್ರಫರ್‌ ಕಮ್‌ ಹೀರೋ ಆಗುತ್ತಿರುವ ಜಾನಿ ಮಾಸ್ಟರ್‌ 

ಸಿನಿಮಾದಲ್ಲಿ ಹೀರೋ ಆಗಬೇಕು ಎಂಬ ಸೆಳೆತ ಎಂಥವರನ್ನೂ ಬಿಟ್ಟಿಲ್ಲ. ಈಗ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌  ಕೂಡ ಆ ಸೆಳೆತಕ್ಕೆ ಸಿಕ್ಕಿದ್ದಾರೆ. ಅನೇಕ​ ಸ್ಟಾರ್​ ನಟ-ನಟಿಯರಿಗೆ ಡ್ಯಾನ್ಸ್​ ಮಾಡಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಭರ್ಜರಿ ಫೇಮಸ್​ ಆದ ‘ರಾ ರಾ ರಕ್ಕಮ್ಮಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಇದೇ ಜಾನಿ ಮಾಸ್ಟರ್​. ಈಗ ಅವರು ತೆರೆಮೇಲೆ ಹೀರೋ ಆಗಿ ಮಿಂಚಲು ಸಿದ್ಧತೆ ಮಾಡಿಕೊಂಡಿರುವುದು ವಿಶೇಷ. ಸಿದ್ಧತೆ ಮಾತ್ರವಲ್ಲ, ಅವರ ಹೊಸ ಸಿನಿಮಾ ಸೆಟ್ಟೇರಿದೆ ಕೂಡ. ಈ ಚಿತ್ರಕ್ಕೆ ‘ಯಥಾ ರಾಜ ತಥಾ ಪ್ರಜಾ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಮೂಲಕ ಅವರ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ.

ಹೀರೋ ಆಗಿ ಬಡ್ತಿ ಪಡೆಯುತ್ತಿರುವ ಜಾನಿ ಮಾಸ್ಟರ್​ಗೆ ಅನೇಕರು ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ‘ಯಥಾ ರಾಜ ತಥಾ ಪ್ರಜಾ’ ಚಿತ್ರದ ಮುಹೂರ್ತ ನೆರವೇರಿತು. ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಬಾಮೈದ ಆಯುಷ್‌ ಶರ್ಮಾ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ನಿರ್ದೇಶಕ ಕರುಣಾ ಕುಮಾರ್‌ ಮೊದಲ ದೃಶ್ಯವನ್ನು ನಿರ್ದೇಶಿಸಿದ್ದಾರೆ.

ಈ ಸಿನಿಮಾದಲ್ಲಿ ಜಾನಿ ಮಾಸ್ಟರ್‌ ಜತೆಗೆ ‘ಸಿನಿಮಾ ಬಂಡಿ’ ಖ್ಯಾತಿಯ ನಟ ವಿಕಾಸ್‌ ಕೂಡ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಶ್ರಷ್ಟಿ ವರ್ಮಾ ನಾಯಕಿಯಾಗಿ ನಟಿಸಲಿದ್ದಾರೆ. ಶ್ರೀನಿವಾಸ ವಿಟ್ಟಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹರೇಶ್‌ ಪಟೇಲ್‌ ಬಂಡವಾಳ ಹೂಡುತ್ತಿದ್ದು, ಅವರಿಗೆ ನಿರ್ದೇಶಕರು ಕೂಡ ಸಾಥ್​ ನೀಡಿದ್ದಾರೆ. ಓಂ ಮೂವೀ ಕ್ರಿಯೇಶನ್ಸ್‌ ಮತ್ತು ಶ್ರೀಕೃಷ್ಣ ಮೂವೀ ಕ್ರಿಯೇಶನ್ಸ್‌ ಬ್ಯಾನರ್‌ ಮೂಲಕ ಈ ಸಿನಿಮಾ ಮೂಡಿಬರಲಿದೆ.

‘ಯಥಾ ರಾಜ ತಥಾ ಪ್ರಜಾ’ ಚಿತ್ರದ ಬಗ್ಗೆ ಜಾನಿ ಮಾಸ್ಟರ್‌ ಮಾತನಾಡಿದ್ದಾರೆ. ‘ಮೆಗಾಸ್ಟಾರ್‌ ಚಿರಂಜೀವಿ ಅವರ ಬರ್ತ್‌ಡೇ ದಿನದಂದೇ ನಮ್ಮ ಸಿನಿಮಾ ಮುಹೂರ್ತ ಕಂಡಿರುವುದು ಸಂತಸದ ಸಂಗತಿ. ಶ್ರೀನಿವಾಸ್‌ ಅವರು ಕಥೆ ಹೇಳಿದ ರೀತಿಯೇ ಚೆನ್ನಾಗಿತ್ತು. ವಿಕಾಸ್‌ ನಟಿಸಿರುವ ‘ಸಿನಿಮಾ ಬಂಡಿ’ ಚಿತ್ರ ನೋಡಿದ್ದೇನೆ. ಇದೀಗ ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿ ಇದೆ’ ಎಂದು ಅವರು ಹೇಳಿದ್ದಾರೆ.

ಈ ಸಿನಿಮಾಗೆ ರಾಧನಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪೊಲಿಟಿಕಲ್​ ಡ್ರಾಮಾ ಶೈಲಿಯ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿವೆ. ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಮೂಡಿಬರಲಿರುವ ‘ಯಥಾ ರಾಜ ತಥಾ ಪ್ರಜಾ’ ಚಿತ್ರಕ್ಕೆ ಸೆಪ್ಟೆಂಬರ್‌ 15ರಂದು ಚಿತ್ರೀಕರಣ ಶುರುವಾಗಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ