ಬೆಂಗಳೂರು : ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-10 ಶೋನಲ್ಲಿ ತನಿಷಾ ಕುಪ್ಪಂಡ ಅವರು ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ, ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ತನಿಷಾ ಕುಪ್ಪಂಡ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಿಗ್ ಬಾಸ್ ನ ಸ್ಪರ್ಧಿ ವರ್ತೂರ್ ಸಂತೋಷ್ ಪ್ರಕರಣದ ನಂತರ ಈಗ ತನಿಷಾ ಅವರ ಹೇಳಿಕೆ ಬಗ್ಗೆ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ ?
ನವೆಂಬರ್ 8ರಂದು ಪ್ರಸಾರವಾದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ತನಿಷಾ ಕುಪ್ಪಂಡ ” ಏನೋ ಒಡ್ಡನ ತರ ಆಡ್ತಾ ಇದಿಯಾ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಆ ಸಮುದಾಯದ ಜನರ ಕೋಪಕ್ಕೆ ಕಾರಣವಾಗಿದ್ದು, ಪ್ರಕರಣ ದಾಖಲಿಸಲಾಗಿದೆ.