ದಕ್ಷಿಣ ಕನ್ನಡ: ಕತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿ ಸ್ಥಳಕ್ಕೆ ನಟ ದರ್ಶನ್ ಭಾನುವಾರ (ಮಾ.೧೦) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರ ಅವರು, ಮಂಗಳೂರಿಗೆ ಸುಮಾರು ಬಾರಿ ಬಂದಿದ್ದೇನೆ. ಆದರೆ ಕತ್ತಾರಿಗೆ ಭೇಟಿ ನೀಡಲು ಆಗಿರಲಿಲ್ಲ. ಈ ಕ್ಷೇತ್ರದ ಬಗ್ಗೆ ಹಲವಾರು ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಹಾಗಾಗಿ ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇನೆ. ಆದರೆ ಇದ್ಯಾವುದಕ್ಕೂ ನಿರ್ದಿಷ್ಟ ಕಾರಣವಿಲ್ಲ ಎಂದು ನಟ ದರ್ಶನ್ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ನಿಮ್ಮ ಬೆಂಬಲವಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಹೆತ್ತ ತಾಯಿಯನ್ನು ಯಾರಾದರೂ ಬಿಟ್ಟು ಕೊಡಲಾಗುತ್ತದೆಯೇ?, ಮೊನ್ನೆವರೆಗೂ ಅವರ ಜೊತೆಯಲ್ಲಿದ್ದೆ ಈಗ ಕೈಬಿಟ್ಟರೇ ಆಗುತ್ತದೆಯೇ, ನಿಮ್ಮ ಮನೆಯಲ್ಲಿ ನಿಮ್ಮ ಅಮ್ಮನನ್ನು ಬಿಟ್ಟು ಬಿಡುತ್ತೀರಾ?, ಅಮ್ಮ ಯಾವತ್ತಿಗೂ ಅಮ್ಮನೇ ಸರ್ ಎಂದು ಮಾಧ್ಯಮಗಳ ಪ್ರಶ್ನೆಗೆ ನಟ ದರ್ಶನ್ ಉತ್ತರಿಸಿದರು.
ಹಾಸ್ಯ ನಟ ಚಿಕ್ಕಣ್ಣ, ಮಹಾಬಲ ಶೆಟ್ಟಿ, ಪ್ರಶಾಂತ್ ಮಾರ್ಲ, ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಂ ಶೆಟ್ಟಿ ನಟ ದರ್ಶನ್ ಜೊತೆಯಲ್ಲಿದ್ದರು.