ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ಶನಿವಾರ (ಅ. 15) ಹೊಸ ದಾಖಲೆ ಸೃಷ್ಟಿ ಮಾಡಿದೆ. ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ.
ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ‘ಕಾಂತಾರ’ ಚಿತ್ರದ ಕನ್ನಡ ಅವತರಣಿಕೆಯು ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14,15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು.
ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂ. ಸಂಗ್ರಹಿಸಿದೆ. ಹಿಂದಿ ಅವತರಣಿಕೆಯು ಶುಕ್ರವಾರವಷ್ಟೇ (ಅ. 14) ಬಿಡುಗಡೆಯಾಗಿತ್ತು. ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ, ಎರಡನೆಯ ದಿನ ದ್ವಿಗುಣ ಕಲೆಕ್ಷನ್ ಆಗಿರುವುದು ವಿಶೇಷ. ಇನ್ನು, ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ 12 ಕೋಟಿ ರೂ. ಗಳಿಕೆ ಆಗಿದೆ. ಒಟ್ಟಾರೆ, ಶನಿವಾರವೊಂದೇ ‘ಕಾಂತಾರ‘ ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ 15 ಕೋಟಿ ರೂ. ಗಳಿಕೆ ಕಂಡಿದೆ. ‘ಕಾಂತಾರ’ ಚಿತ್ರದ ಕನ್ನಡ ಅವತರಿಣಿಕೆಯು ಸೆ. 30ರಂದು ಬಿಡುಗಡೆಯಾಗಿದ್ದು, ಶನಿವಾರಕ್ಕೆ 16 ದಿನಗಳಾಗಿವೆ. 16ನೇ ದಿನ ನಾಲ್ಕು ಭಾಷೆಗಳಿಂದ 15 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ.
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.