Mysore
25
overcast clouds
Light
Dark

ಅಪೂರ್ವ ಅನಾಥಾಶ್ರಮ

ಕೀರ್ತನಾ ಎಂ.
ಲತಾ ಮೂಡಿಗೇರಿಗೆ ಬಂದು ಆರು ತಿಂಗಳು ಸವೆಯುತ್ತಿತ್ತು. ಶಿಕ್ಷಕಿಯ ವೃತ್ತಿ ಮೇಲೆ ಅಲ್ಲಿಗೆ ಬಂದವಳು ಹಲವು ಬದಲಾವಣೆಯನ್ನು ಕಂಡರು ಅವಳ ಪಾಲಿಗೆ ಬದಲಾಗದೆ ಉಳಿದಿದ್ದು ತನ್ನ ಮನೆಯಿಂದ ಸ್ವಲ್ಪ ಮುಂದೆ ಇದ್ದ ತರಕಾರಿ ಅಂಗಡಿ, ಪ್ರತಿ ದಿನ ಬೆಳಿಗ್ಗೆ ಸರಿಯಾಗಿ ಎಂಟು ಗಂಟೆಗೆ ವಯಸ್ಸಾದ ಅಜ್ಜಿ ಜಯಮ್ಮ ಅಂಗಡಿ ತೆರೆದರೆ ಮಧ್ಯಾಹ್ನದವರೆಗೂ ಇರುತ್ತಾರೆ. ಮಧ್ಯಾಹ್ನದ ಮೇಲೆ ಅವರ ಗಂಡ ನಂಜುಂಡಪ್ಪ ಬಂದು ಅಂಗಡಿ ನೋಡಿಕೊಳ್ಳುತ್ತಾರೆ. ಲತಾ ತರಕಾರಿ ಬೇಕು ಎಂದಾಗೆಲ್ಲ ಅಲ್ಲಿಯೇ ಕೊಂಡು ತರುತ್ತಿದ್ದಳು. ಆದರೆ ಎಂದೂ ಹೆಚ್ಚಾಗಿ ಮಾತಾಡಿಸುತ್ತ ಇರಲಿಲ್ಲ.

ಅಂಗಡಿಯ ಹತ್ತಿರ ಬರುವಾಗ ಹಿಂದೆಯಿಂದ ವೇಗವಾಗಿ ಬಂದ ಬೈಕ್‌ ಸವಾರ ಗುಂಡಿಯಲ್ಲಿ ನಿಂತಿದ್ದ ನೀರನ್ನು ಅವಳ ಮೇಲೆ ಹಾರಿಸಿ ಹೋದ. ಅವಳ ಸೀರೆ ಪೂರ್ತಿ ಒದ್ದೆಯಾಗಲು ‘ಅಯ್ಯೋ ಬಾರಮ್ಮ ಇತ್ತ ಕಡೆ’ ಎಂದು ಓಡಿ ಬಂದ ಜಯಮ್ಮ ಅವಳನ್ನು ಅಂಗಡಿ ಒಳಗೆ ಕರೆದುಕೊಂಡರು.

ತಮ್ಮ ಬಳಿ ಇದ್ದ ಟವಲ್ ಅನ್ನು ಅವಳಿಗೆ ನೀಡಿ ಮುಖ ತೊಳೆಯಲು ನೀರು ಕೊಟ್ಟಿದ್ದು ಅಲ್ಲದೆ ತಮ್ಮದೇ ಶಾಲುವನ್ನು ಹೊದ್ದುಕೊಳ್ಳಲೂ ಕೊಟ್ಟರು. ‘ಥಾಂಕ್ಸ್ ಅಜ್ಜಿ…’ ಎಂದವಳಿಗೆ ಪ್ಲಾಸ್ಕ್ ನಿಂದ ಕಾಫಿ ಬಗ್ಗಿಸಿ ಕೊಟ್ಟರು. ‘ಕುಡಿ ತಾಯಿ. ಒಬ್ಬಳೇ ಇರುವುದೇನು?’ ಆದರದಿಂದ ಕೇಳಿದ ಜಯಮ್ಮನಿಗೆ ‘ಹೌದು ಅಜ್ಜಿ, ಅಮ್ಮ ಅಪ್ಪ ಊರಲ್ಲಿ ಇದ್ದಾರೆ. ನನಗೆ ಇಲ್ಲಿ ಕೆಲಸ, ನೀವು ಒಬ್ಬರೆ ಇರೋದ?ʼ

‘ಇಲ್ಲಮ್ಮ ಮಕ್ಕಳು ಇದ್ದಾರೆ ಮನೇಲಿ’ ಎಂದಾಗ ಇವಳಿಗೆ ಆಶ್ಚರ್ಯವಾಯಿತು. ಯಾರೂ ಇಲ್ಲ. ಹಾಗಾಗಿ ಪತಿ ಪತ್ನಿ ಅಂಗಡಿ ನೋಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದುಕೊಂಡಿದ್ದಳು ಲತಾ. ‘ಹೌದ! ಮಕ್ಕಳು ಇದ್ದು ನೀವೇಕೆ ಅಜ್ಜಿ ಈ ವಯಸ್ಸಲ್ಲಿ ಇಷ್ಟೊಂದು ಕಷ್ಟ ಪಡಬೇಕು. ಅವರು ನಿಮ್ಮನ್ನು ನೋಡಿಕೊಳ್ಳಲ್ವಾ?’ ಎಂದವಳ ಕಣ್ಣುಗಳು ನಂಜುಂಡಪ್ಪನನ್ನು ಹುಡುಕುತ್ತಿದ್ದವು.

‘ಯಾಕೆ ನೋಡಿಕೊಳ್ಳಲ್ಲ ನಾವು ಅಂದ್ರೆ ಅವರಿಗೆ ಪ್ರಾಣ. ನೋಡು ಇವ್ರು ಅವರಿಗೆಲ್ಲ ಕಾಫಿ ಕೊಟ್ಟು ಬರಲು ಹೋಗಿದ್ದಾರೆ’ ಎಂದರು ಜಯಮ್ಮ. ‘ಅಜ್ಜಿ ಏನ್ ಹೇಳ್ತಾ ಇದ್ದೀರಾ? ಅವರು ನಿಮ್ಮನ್ನು ನೋಡಿಕೊಂಡರೆ ನೀವೇಕೆ ಇಷ್ಟು ಕಷ್ಟಪಡಬೇಕು’ ಎಂದಳು.

‘ನಾವೆಲ್ಲಿ ಕಷ್ಟ ಪಡ್ತಾ ಇದ್ದೀವಮ್ಮ ನಮ್ಮ ಮಕ್ಕಳಿಗಾಗಿ ಎಲ್ಲಾನೂ ಅಷ್ಟೇ’ ಅವರ ಮಾತು ಲತಾಳನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿತು. “ನೀವು ಹೇಳೋದು ಅರ್ಥ ಆಗ್ತಿಲ್ಲ ಅಜ್ಜಿ” ಎಂದವಳ ಕೆನ್ನೆ ಸವರಿದವರು. ‘ಇರು ಇವತ್ತು ನನ್ನ ಮನೆಗೆ ಬರುವಿಯಂತೆ ಹೋಗಿ ಸ್ನಾನ ಮುಗಿಸಿ ಬಾ’ ಎಂದಾಗ ಆಗಲ್ಲ ಎನ್ನಲಾಗದೆ ಒಪ್ಪಿ ಮನೆಗೆ ಹೋಗಿ ಸ್ನಾನ ಮುಗಿಸಿ ಬಂದ ಲತಾಳನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು ಜಯಮ್ಮ ಮತ್ತು ನಂಜುಂಡಪ್ಪ.

ಮನೆಯ ಎದುರಿಗೆ ಬಂದಾಗ ಕಂಡಿದ್ದು ‘ಜಯಮ್ಮ ಅನಾಥಾಶ್ರಮ’ ಎಂಬ ಬೋರ್ಡ್‌! ‘ಇದು ನಿಮ್ಮ ಮನೇನ? ಇಲ್ಲೇ ನೀವು ಇರೋದ?ʼ ಅವಳು ಕೇಳಿ ಮುಗಿಸುವಾಗ ಒಳಗೆ ಸಾಗಿ ಆಗಿತ್ತು. ಸುಮಾರು ಇಪ್ಪತ್ತು ಅನಾಥ ಮಕ್ಕಳು ಅಲ್ಲಿದ್ದರು. ಜಯಮ್ಮ ನಂಜುಂಡಪ್ಪ ಆ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು. ಮದುವೆಯಾಗಿ ಇಪ್ಪತ್ತು ವರ್ಷ ಕಳೆದರೂ ಮಕ್ಕಳು ಆಗದೆ ಇದ್ದಾಗ ಬಂದ ಯೋಚನೆ ಇದು. ತಮ್ಮ ಮನೆಯನ್ನೇ ಆಶ್ರಮ ಮಾಡಿದರು. ಜಯಮ್ಮ ತನ್ನ ಶಿಕ್ಷಕಿ ವೃತ್ತಿಯಿಂದ ಬಂದ ಸಂಬಳವನ್ನು ನಂಜುಂಡಪ್ಪ ತನ್ನ ಬ್ಯಾಂಕ್‌ ವೃತ್ತಿಯಿಂದ ಬಂದ ಸಂಬಳವನ್ನು ಈ ಮಕ್ಕಳ ಭವಿಷ್ಯಕ್ಕೆ ಮೀಸಲಿಡುತ್ತ ಬಂದರು. ನಿವೃತ್ತಿ ತಗೆದುಕೊಂಡ ಮೇಲೆ ಒಂದಷ್ಟು ಹಣ ವಿನಿಯೋಗಿಸಿ ತರಕಾರಿ ಅಂಗಡಿ ಇಟ್ಟುಕೊಂಡರು. ಪಿಂಚಣಿ ಹಣ ಅಂಗಡಿಯ ಸಂಪಾದನೆ ಜೊತೆ ಆಶ್ರಮಕ್ಕೆ ಬರುವ ಒಂದಷ್ಟು ದೇಣಿಗೆ ಅಲ್ಲಿದ್ದ ಮಕ್ಕಳ ಬದುಕಿಗೆ ಸಾಕಾಗುತ್ತಿತ್ತು. ಅಲ್ಲಿ ಬೆಳೆದ ಮಕ್ಕಳು ಆಗಾಗ ಬಂದು ತಮ್ಮ ಕೈಯಲ್ಲಾಗುವ ಸಹಾಯ ಮಾಡಿ ಹೋಗುತ್ತಿದ್ದರು. ವಯಸ್ಸಾಗುತ್ತಿದೆ. ಯಾರು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಚಿಂತಿಸದೆ ಇಳಿ ವಯಸ್ಸಿನಲ್ಲೂ ಪುಟ್ಟ ಮಕ್ಕಳ ಭವಿಷ್ಯ ರೂಪಿಸುವ ಇವರ ಬದುಕಿನ ಮೇಲಿನ ಪ್ರೀತಿ ಅಪೂರ್ವ. keerthana.manju.guha6@gmail.com