– ಎಂ.ಕೀರ್ತನಾ
ಕಾಲ ಎಷ್ಟೇ ಬದಲಾಗಬಹುದು. ಆದರೆ ಕೆಲವು ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. ಹಿರಿಯರನ್ನು ಗೌರವಿಸಬೇಕು. ಅವರು ಹೇಳಿದ್ದನ್ನೆಲ್ಲಾ
ಕೇಳಬೇಕು ಇತ್ಯಾದಿ. ಅವು ತಪ್ಪಲ್ಲ. ಎಲ್ಲವೂ ಸರಿಯೇ? ಸರಿಯಾದರೂ ಎಲ್ಲಿಯವರೆಗೆ?
ಈಗಿನ ಜನರೇಶನ್ ಹೈ ಸ್ಪೀಡ್ ಅಲ್ಲಿ ಓಡುತ್ತಿದೆ. ಹೆಣ್ಣು ಮಕ್ಕಳು ಮನೆ ಬಿಟ್ಟು ಅಲ್ಲ, ದೇಶವೇ ಬಿಟ್ಟು ಹೊರ ದೇಶಗಳಲ್ಲಿ ಒಬ್ಬಂಟಿಯಾಗಿ ದುಡಿದು ಬದುಕುವಷ್ಟು ಕಾಲ ಬದಲಾಗಿದೆ. ಈಗಿರುವಾಗ ನಾವು ಹಿರಿಯರು ಎಂದು ಕಿರಿಯರ ಮನಸ್ಥಿತಿಯನ್ನು ಅರಿಯದೆ ತಮ್ಮ ಆಲೋಚನೆಗಳನ್ನು ಅವರ ಮೇಲೆ ಏರುವುದು ಎಷ್ಟು ಸರಿ?
ಮೊದಲಿಗೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಕಿರಿಯರ ಅಥವಾ ಹಿರಿಯರ ತಪ್ಪಿದೆ ಎಂದಲ್ಲ. ನಾವು ಎಲ್ಲಿ ಎಡವುತ್ತಾ ಇದ್ದೇವೆ ಎನ್ನುವುದನ್ನು.
ಉದಾಹರಣೆಗೆ ಉನ್ನತ ವ್ಯಾಸಂಗಕ್ಕಾಗಿ ಬೇರೆ ಊರಿಗೆ ಹೋಗುವ ಹೆಣ್ಣು ಮಕ್ಕಳನ್ನು ಕಟ್ಟುಪಾಡು ನೆಪದಲ್ಲಿ ಮನೆಯಲ್ಲಿಯೇ ಇರಿಸುವುದು. ಅಥವಾ ಗಂಡು ಮಕ್ಕಳು ಓದದೇ ಇದ್ದರೂ ನಡೆಯುತ್ತದೆ ಏಕೆಂದರೆ ಅವನು ಗಂಡು ಎಂದು ವಾದಿಸುವುದು. ಇಂತಹ ವಿಚಾರಗಳು ಈಗಿನ ಯುವ ಪೀಳಿಗೆಗೆ ಸಲ್ಲದು.
ಹಾಗೆ ಹಿರಿಯರು, ವಯಸ್ಸಾದವರನ್ನು ಅನಾಥ ಆಶ್ರಮಗಳಲ್ಲಿ ಬಿಡಬೇಕೆನ್ನುವ ಕಿರಿಯರ ಆಲೋಚನೆಯೂ ತಪ್ಪು. ನಾವೀಗ ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ನಾವು ಕಂಡಿದನ್ನು, ಕಾಣುತ್ತಿರುವುದನ್ನು ನಮ್ಮ ಹಿರಿಯರು ಕಾಣದೆ ಇರಬಹುದು. ಹಾಗೆಯೇ ಅವರು ಕಂಡ ಪ್ರಪಂಚದ ಪರಿಚಯ ನಮಗಿಲ್ಲ ಎನ್ನುವುದು ಕೂಡ ವಾಸ್ತವ.
ಇನ್ನು ಕೆಲವೊಮ್ಮೆ ಹೀಗೂ ಆಗುತ್ತದೆ. ನಮ್ಮ ಮಾತು ಮಾತ್ರ ನಡೆಯಬೇಕು. ಅವರದೆಂತಹ ಕೆಲಸ ಇದ್ದರೂ ನಮ್ಮ ಸೇವೆ ಮಾಡಬೇಕು. ನಾವೇ ಸರಿ ಎನ್ನುವ ಹಿರಿಯರ ಮನೋಭಾವನೆ ಕಿರಿಯರಲ್ಲಿ ಕಿರಿಕಿರಿ ಉಂಟು ಮಾಡಿ, ಮನಸ್ತಾಪಕ್ಕೂ ಕಾರಣ ಆಗಬಹುದು. ಅದರಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಆದರೆ ಹಿರಿಯರು ಅವರನ್ನು ಅರ್ಥ ಮಾಡಿಕೊಳ್ಳದಿರುವುದರಿಂದ ಕಿರಿಯರು ಒತ್ತಡವನ್ನು ಅನುಭವಿಸುತ್ತಿದ್ದಾರೆ. ನಾವು ಇನ್ನಷ್ಟು ಒತ್ತಡ ಹೇರದೆ ಅವರಿಗೆ ಸಮಯ ಸಿಕ್ಕಾಗಲೇ ನಗುತ್ತಾ ಅವರೊಂದಿಗೆ ಕಾಲ ಕಳೆಯುವುದು ಉತ್ತಮ ಎಂದು ಅರಿಯಬೇಕು.
ಇನ್ನು ಕಿರಿಯರೂ ಕೂಡ ಹಿರಿಯರ ಮನಸ್ಸನ್ನು ಅರಿತು ಅಥವಾ ಅವರಿಗೆ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸಿ ಅರ್ಥವಾಗುವ ಸರಳ ಧಾಟಿಯಲ್ಲಿ ಹೇಳುವುದರಿಂದ ಯಾವ ಸಂಬಂಧವೂ ಹದಗೆಡುವುದಿಲ್ಲ. ಇದಕ್ಕೂ ಮೀರಿ ತಮ್ಮದೇ ಹಟ ಸಾಧಿಸುವವರೂ ಇರುತ್ತಾರೆ. ಅದಕ್ಕೆಲ್ಲ ಅವರದೇ ಧಾಟಿಯಲ್ಲಿ ಯೋಚಿಸಿ ಮುಂದೆ ಹೆಜ್ಜೆ ಇಡುವುದು ಉತ್ತಮ.
ಆಗ ಮಾತ್ರ ಹಳೆಯ ಬೇರು ಹೊಸ ಚಿಗುರು ಒಂದನ್ನೊಂದು ಜೋಪಾನ ಮಾಡುತ್ತಾ ಸಾಗಲು ಸಾಧ್ಯ.