ಮಂಜುಕೋಟೆ
ಕೋಟೆ: ಪ್ರಥಮ ಬಾರಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ತಲಾ ೨ ಸ್ಥಾನಗಳು ಹಂಚಿಕೆ
ಎಚ್.ಡಿ.ಕೋಟೆ: ಏಳು ವರ್ಷಗಳ ನಂತರ ನಡೆಯಲಿರುವ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಎರಡು ಸ್ಥಾನಗಳು ದೊರೆಯುವ ಮೂಲಕ ಎಲ್ಲ ಸಮುದಾಯದವರೂ ವಿವಿಧ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಅವಕಾಶ ಸಿಕ್ಕಿದಂತಾಗಿದೆ.
ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದು, ಇದಕ್ಕೆ ಅನುಗುಣವಾಗಿ ಇದೇ ಪ್ರಥಮ ಬಾರಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ತಲಾ ೨ ಸ್ಥಾನಗಳನ್ನು ನೀಡುವ ಜೊತೆಗೆ ಮಹಿಳೆಯರಿಗೂ ಆದ್ಯತೆ ಸಿಕ್ಕಿದೆ. ಪರಿಶಿಷ್ಟ ಜಾತಿ ಸಮುದಾಯದವರಿಗೆ ಹೈರಿಗೆ ಮತ್ತು ಮುಳ್ಳೂರು ಕ್ಷೇತ್ರಗಳಲ್ಲಿ, ಪರಿಶಿಷ್ಟ ಪಂಗಡದವರಿಗೆ ಅಂತರಸಂತೆ ಮತ್ತು ಹಂಚೀಪುರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸ್ಪರ್ಧಿಸಲು ಅವಕಾಶ ದೊರಕಿದೆ. ಹಂಪಾಪುರ ಮತ್ತು ಅಣ್ಣೂರು ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೊರತುಪಡಿಸಿ ಎಲ್ಲಾ ಸಮುದಾಯಗಳ ಪುರುಷರು ಮತ್ತು ಮಹಿಳೆಯರು ಸ್ಪರ್ಧಿಸಬಹುದಾಗಿದೆ.
ಈ ಬಾರಿ ಸಾಮಾನ್ಯ ಮಹಿಳೆ ಮತ್ತು ಬಿಸಿಎಂ ಎ, ಬಿ ವರ್ಗದ ಮೀಸಲಾತಿಗಳು ದೊರಕದೆ ಇರುವುದರಿಂದ ಈ ಎರಡು ಕ್ಷೇತ್ರಗಳಲ್ಲಿ ವಿವಿಧ ಸಮುದಾಯಗಳ ಎಲ್ಲ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಪೈಪೋಟಿ ನಡೆಸಬೇಕಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯಲ್ಲಿ ಇಲ್ಲಿಯವರೆಗೆ ಒಂದು ಸ್ಥಾನ ದೊರಕುತ್ತಿತ್ತು. ಇದೇ ಮೊದಲ ಬಾರಿಗೆ ಎರಡು ಕ್ಷೇತ್ರಗಳಲ್ಲಿ ದೊರಕಿದೆ.ಕೆಲ ಸಮುದಾಯದವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಲ್ಲ ಎಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಮುಂದಿನ ದಿನಗಳಲ್ಲಿ ಬೇರೆ ತಾಲ್ಲೂಕಿನಿಂದ ಬರುವ ಆಕ್ಷೇಪಣೆಗಳಿಗೆ ಅನುಗುಣವಾಗಿ ಮೀಸಲಾತಿಗಳು ಬದಲಾದರೆ ಮತ್ತೆ ಯಾವ ಮೀಸಲಾತಿ ಘೋಷಣೆಯಾಗಲಿದೆ ಎಂಬುದು ಜನತೆ ಮತ್ತು ಮುಖಂಡರಲ್ಲಿ ಕುತೂಹಲ ಮೂಡಿಸಿದೆ. ಆದರೆ, ಇದೇ ಮೀಸಲಾತಿ ಅಂತಿಮ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಯಾವ ರೀತಿ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ: ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ




