‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಈ ಬದಲಾವಣೆಯ ಪರ್ವ ಕ್ರೀಡಾ ಲೋಕವನ್ನೂ ಬಿಟ್ಟಿಲ್ಲ. ಅದರಲ್ಲೂ ಭಾರತೀಯ ಕ್ರೀಡಾ ಕ್ಷೇತ್ರದ ಉಳಿದೆಲ್ಲಾ ಕ್ರೀಡೆಗಳಿಗಿಂತ ಕ್ರೀಡಾ ಪ್ರೇಮಿಗಳನ್ನು ಹೆಚ್ಚು ಆವರಿಸಿರುವ ಹಾಗೂ ಸದಾಕಾಲವೂ ಸೆಳೆಯುವ ಕ್ರಿಕೆಟ್‌ನಲ್ಲೂ ಬದಲಾವಣೆಯ ಗಾಳಿಬೀಸಿದೆ.
ಒಂದು ಕಾಲದಲ್ಲಿ ಟೆಸ್ಟ್ ಹಾಗೂ ಏಕದಿನ ಮಾದರಿಗಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಇವತ್ತು ತನ್ನ ಬೌಂಡರಿ ದಾಟಿ ಬೆಳೆದಿದೆ. ಕ್ರಿಕೆಟ್‌ನ ಈ ಬೆಳವಣಿಗೆಯ ನಾಗಾಲೋಟ ವನ್ನು ಕಂಡು ಕ್ರಿಕೆಟ್ ತಜ್ಞರೇ ನಿಬ್ಬೆರಗಾಗಿದ್ದಾರೆ. ಅದರಲ್ಲೂ ಇಂದಿನ ಫಾಸ್ಟ್ ಫುಡ್ ಜಗತ್ತಿಗೆ ಹೇಳಿ ಮಾಡಿಸಿದಂತಿರುವ ‘ಟಿ-೨೦ ಕ್ರಿಕೆಟ್’ ಹುಟ್ಟಿದ ಮೇಲಂತೂ ಕ್ರಿಕೆಟ್ ಜಗತ್ತಿನ ಆಯಾಮವೇ ಬದಲಾಗಿ ಹೋಗಿದೆ. ಇವತ್ತಿನ ಆಧುನಿಕ ಯುಗಕ್ಕೆ ತಕ್ಕಂತೆ ಬದಲಾವಣೆ ಕಂಡಿರುವ ಕ್ರಿಕೆಟ್ ಇಂದು ಕೇವಲ ಕ್ರೀಡೆಯಾಗಿ ಉಳಿಯದೆ ಹಣದ ಹೊಳೆಯನ್ನೇ ಹರಿಸುವ ಕೋಟ್ಯಂತರ ರೂ.ಗಳ ವಹಿವಾಟು ನಡೆಯುವ ಬಹುದೊಡ್ಡ ಉದ್ಯಮವಾಗಿಯೂ ಪರಿವರ್ತನೆಯಾಗಿದೆ.
ಕ್ರಿಕೆಟ್ ಜಗತ್ತಿನಲ್ಲಿ ಆಗಿರುವ ಈ ಮಹತ್ವದ ಬದಲಾವಣೆ ದಶಕಗಳ ಹಿಂದೆ ಪ್ರತಿಭೆ ಇದ್ದರೂ ವೇದಿಕೆ ದೊರೆಯದೆ ತೆರೆಮರೆಯಲ್ಲೇ ಕಮರಿ ಹೋಗುತ್ತಿದ್ದ ಅದೆಷ್ಟೋ ಪ್ರತಿಭೆಗಳ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದರೆ, ಮತ್ತೊಂದೆಡೆ ಅನೇಕ ಉದ್ಯಮಿಗಳು, ಹಲವು ಕಂಪೆನಿಗಳಿಗೆ ಬಂಡವಾಳ ಹೂಡಿಕೆಯ ವೇದಿಕೆಯಾಗಿದೆ ಹಾಗೂ ನಿಗದಿತ ಮಿತಿ ಇಲ್ಲದೆ ಲಾಭ ತಂದುಕೊಡುವ ಉದ್ಯಮವಾಗಿದೆ. ಈ ಎಲ್ಲ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಹಾಗೂ ಕ್ರಿಕೆಟಿಗರನ್ನು ನೋಡುವ ದೃಷ್ಟಿಕೋನವೂ ಸಂಪೂರ್ಣವಾಗಿ ಬದಲಾಗಿಹೋಗಿದೆ.
ಫ್ರಾಂಚೈಸಿ ಕ್ರಿಕೆಟ್ ಅಬ್ಬರ: ಹಿಂದೆಲ್ಲಾ ಬೆರಳೆಣಿಕೆಯಷ್ಟು ಕ್ರಿಕೆಟ್ ಟೂರ್ನಿಗಳು ಮಾತ್ರವೇ ನಡೆಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷದ ಬಹುಪಾಲು ಸಂದರ್ಭಗಳಲ್ಲಿ ಒಂದಿಲ್ಲೊಂದು ಕ್ರಿಕೆಟ್ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ಕೇವಲ ಅಂತಾರಾಷ್ಟ್ರೀಯ ಪಂದ್ಯಾವಳಿಗಳಷ್ಟೇ ಅಲ್ಲದೇ, ಹಲವಾರು ಮಾದರಿಗಳಲ್ಲಿ ಟೂರ್ನಿಗಳು ಒಂದಿಲ್ಲೊಂದು ಕಡೆಗಳಲ್ಲಿ ವರ್ಷವಿಡಿ ನಡೆಯುತ್ತಿರುತ್ತವೆ. ಅದರಲ್ಲೂ ಕ್ರಿಕೆಟ್ ನೊಂದಿಗೆ ಬಿಡಿಸಲಾಗದ ನಂಟು ಹೊಂದಿರುವ ಭಾರತದಲ್ಲೂ ಹತ್ತಾರು ಫ್ರಾಂಚೈಸಿ ಕ್ರಿಕೆಟ್ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ. ಫ್ರಾಂಚೈಸಿ ಕ್ರಿಕೆಟ್‌ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್‌ಪಿಎಲ್), ಬೆಂಗಾಲ್ ಪ್ರೊ ಟಿ-೨೦ ಲೀಗ್, ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ಹೀಗೆ ಇನ್ನೂ ಹಲವಾರು ಕಡೆಗಳಲ್ಲಿ ಫ್ರಾಂಚೈಸಿ ಕ್ರಿಕೆಟ್ ಪಂದ್ಯಾವಳಿಗಳು ಬೇರೆ ಬೇರೆ ಹೆಸರುಗಳೊಂದಿಗೆ ನಿರಂತರವಾಗಿ ನಡೆಯುತ್ತಿದ್ದು, ಕ್ರಿಕೆಟ್ ಫ್ಯಾನ್ಸ್ ಗಳಿಗೆ ಮನರಂಜನೆ ನೀಡುತ್ತಿವೆ.
ಯುವ ಕ್ರಿಕೆಟಿಗರಿಗೆ ವೇದಿಕೆ: ಒಂದು ಕಾಲದಲ್ಲಿ ಕ್ರಿಕೆಟರ್ ಆಗಬೇಕೆಂದರೆ ಅದಕ್ಕಾಗಿ ಸಾಕಷ್ಟು ಕಸರತ್ತು, ಪರಿಶ್ರಮ, ನಿರಂತರ ಅಭ್ಯಾಸ ಹೀಗೆ ಎಲ್ಲದರ ಅಗತ್ಯತೆ ಹೆಚ್ಚಾಗಿತ್ತು. ಈ ಎಲ್ಲದರ ಜೊತೆಗೆ ಅದೃಷ್ಟ ಕೈಹಿಡಿದರೆ ಮಾತ್ರವೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಕ್ರಿಕೆಟರ್ ಆಗಿ ಮಿಂಚಬಹುದಾಗಿತ್ತು. ಆದರೆ ಇಂದು ಕ್ರಿಕೆಟ್‌ನ ಸ್ವರೂಪ ಬದಲಾದ ಪರಿಣಾಮ, ಕ್ರಿಕೆಟರ್ ಆಗಲು ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಯಾವ ಹರಸಾಹಸದ ಅಗತ್ಯವೂ ಇಲ್ಲ. ಬದಲಾಗಿ ಯುವ ಕ್ರಿಕೆಟರ್‌ಗಳ ಟ್ಯಾಲೆಂಟ್ ಪ್ರದರ್ಶನಕ್ಕೆ ವೇದಿಕೆ ಆಗಿರುವ ಫ್ರಾಂಚೈಸಿ ಲೀಗ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ, ಯುವ ಕ್ರಿಕೆಟಿಗರ ಅದೃಷ್ಟವೇ ಬದಲಾಗುತ್ತದೆ. ಈ ಕಾರಣದಿಂದಲೇ ಅದೆಷ್ಟೋ ಯುವ ಕ್ರಿಕೆಟರ್‌ಗಳು ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ಕನಸಿಗಿಂತಲೂ ಮುಖ್ಯವಾಗಿ ಫ್ರಾಂಚೈಸಿ ಕ್ರಿಕೆಟ್ ಆಡಬೇಕೆಂಬ ಗುರಿ ಹೊಂದಿದ್ದಾರೆ.
ಎಲೆಮರೆಯಿಂದ ತೆರೆಗೆ ಎಂಟ್ರಿ: ‘ಜೆಂಟಲ್‌ಮೆನ್ಸ್’ ಗೇಮ್ ಎಂದೇ ಖ್ಯಾತಿ ಪಡೆದಿದ್ದ ಕ್ರಿಕೆಟ್ ಜಗತ್ತು ಬದಲಾದ ಸ್ವರೂಪಗಳಿಂದಾಗಿ ಮನರಂಜನೆಯ ವೇದಿಕೆಯಾಗಿ ಬದಲಾಗುತ್ತಾ ಬಂದಿದೆ. ಹಿಂದೆಲ್ಲಾ ದೇಸಿಯ ಕ್ರಿಕೆಟ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಸಿಗಬೇಕಾದರೆ ವರ್ಷಗಟ್ಟಲೇ ಕಾಯಬೇಕಿತ್ತು. ಆದರೆ ಇಂದಿನ ಲೀಗ್ ಅಥವಾ ಫ್ರಾಂಚೈಸಿ ಕ್ರಿಕೆಟ್ ಶುರುವಾದಾಗಿನಿಂದ ಅದೆಷ್ಟೋ ಯುವ ಕ್ರಿಕೆಟಿಗರು ದಿನಬೆಳಗಾಗುವುದರಲ್ಲಿ ಕ್ರಿಕೆಟ್ ಲೋಕದ ಧ್ರುವ ತಾರೆಗಳಾಗಿ ಮಿಂಚಿದ್ದು, ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಆ ಮೂಲಕ ಕ್ರಿಕೆಟ್ ಲೋಕದಲ್ಲಿನ ಭವಿಷ್ಯದ ಸ್ಟಾರ್‌ಗಳಾಗಿ ಮಿಂಚುವ ಭರವಸೆ ಮೂಡಿಸಿದ್ದಾರೆ.
ಬಂದವರಿಗಿಂತ ಹೋದವರೇ ಹೆಚ್ಚು: ಜಾಗತಿಕ ಕ್ರಿಕೆಟ್‌ನಲ್ಲಿನ ಮಹತ್ವದ ಬದಲಾವಣೆಯಿಂದಾಗಿ ತೆರೆಮರೆಯಲ್ಲಿದ್ದ ಎಷ್ಟೋ ಯುವ ಪ್ರತಿಭೆಗಳು ರಾತ್ರೋರಾತ್ರಿ ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದರೆ, ಇನ್ನೂ ಅದೆಷ್ಟೋ ಆಟಗಾರರು ಬಂದಷ್ಟೇ ವೇಗದಲ್ಲಿ ತೆರೆಮರೆಗೆ ಸರಿದಿದ್ದಾರೆ. ಅದರಲ್ಲೂ ಭಾರತದಲ್ಲಿ ದೊಡ್ಡ ಯಶಸ್ಸು ಕಂಡಿರುವ ಐಪಿಎಲ್ ಪಂದ್ಯಾವಳಿ ಸಾಕಷ್ಟು ಸ್ಟಾರ್ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರನ್ನು ಕೊಡುಗೆಯಾಗಿ ನೀಡಿದೆ. ಇನ್ನೂ ಐಪಿಎಲ್ ಮೂಲಕವೇ ಭಾರೀ ಸದ್ದು ಮಾಡಿದ್ದ ಎಷ್ಟೋ ಆಟಗಾರರು ಭವಿಷ್ಯದ ತಾರೆಗಳಾಗಿ ಮಿಂಚದೆ, ಐಪಿಎಲ್ ವೇದಿಕೆಯಲ್ಲೇ ಮಿಂಚಿ, ಇದೇ ವೇದಿಕೆಯಮೂಲಕವೇ ತೆರೆಮರೆಗೆ ಸೇರಿದ್ದಾರೆ.
ಬೆಟ್ಟಿಂಗ್‌ಗೆ ಕಡಿವಾಣ ಬೇಕಿದೆ: ಬಿಡುವಿಲ್ಲದೇ ನಿರಂತರವಾಗಿ ನಡೆಯುತ್ತಿರುವ ಹಾಗೂ ಭರಪೂರ ಮನರಂಜನೆ ನೀಡುತ್ತಿರುವ ಕ್ರಿಕೆಟ್ ಟೂರ್ನಿಗಳು ಯುವಜನರನ್ನು ಆಕರ್ಷಿಸುತ್ತಿವೆ. ಒಂದೆಡೆ ಕ್ರಿಕೆಟ್ ಜಗತ್ತಿಗೆ ಎಂಟ್ರಿಕೊಡುತ್ತಿರುವ ಯುವ ಆಟಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚಿಸಿಕೊಳ್ಳುವ ಯುವಜನರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಕೇವಲ ಕ್ರಿಕೆಟ್ ಮೇಲಿನ ಪ್ರೀತಿ, ಕ್ರಿಕೆಟಿಗರ ಮೇಲಿನ ಅಭಿಮಾನವಷ್ಟೇ ಅಲ್ಲದೇ, ಇಂದು ಕ್ರಿಕೆಟ್ ಹೆಸರಿನಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ಭೂತ ಕೂಡ ಯುವ ಜನರನ್ನು ಕ್ರಿಕೆಟ್‌ನತ್ತ ದೊಡ್ಡಮಟ್ಟದಲ್ಲಿ ಆಕರ್ಷಿಸುತ್ತಿದೆ. ಹೀಗೆ ಕ್ರಿಕೆಟ್ ಬೆಟ್ಟಿಂಗ್ ಬಲೆಗೆ ಬಿದ್ದು ಹಣಗಳಿಸಿದವರ ಸಂಖ್ಯೆ ಕಡಿಮೆ ಇದ್ದರೆ, ಹಣ ಕಳೆದುಕೊಂಡು, ಬದುಕು, ಜೀವನವನ್ನೇ ಕಳೆದುಕೊಂಡವರು ಹೆಚ್ಚಾಗಿದ್ದಾರೆ. ಇಂತಹ ಕ್ರಿಕೆಟ್ ಬೆಟ್ಟಿಂಗ್‌ನ ಜಾಲಕ್ಕೆ ಬೀಳದಂತೆ ಅರಿವು, ಜಾಗೃತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದರೂ, ನಿರೀಕ್ಷೆಯಂತೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಸಮನ್ವಯತೆ ಹೆಚ್ಚಿಸಿದ ಕ್ರಿಕೆಟ್: ಕ್ರೀಡೆಗಳು ಸಮನ್ವಯತೆ, ಸಾಮರಸ್ಯಕ್ಕೆ ವೇದಿಕೆ ಆಗಲಿವೆ ಎಂಬ ಮಾತಿದೆ. ಇದಕ್ಕೆ ಪೂರಕವೆಂಬಂತೆ ಕ್ರಿಕೆಟ್ ಇಂದು ಸಾಮರಸ್ಯದ ವೇದಿಕೆಯಾಗಿದೆ. ಎರಡು ದೇಶಗಳ ನಡುವಿನ ವೈರುತ್ವ ಹೋಗಲಾಡಿಸಿ ಸ್ನೇಹ, ಪ್ರೀತಿಯ ವೇದಿಕೆಯಾಗಿರುವ ಕ್ರಿಕೆಟ್, ದೇಶ-ವಿದೇಶಗಳ ಆಟಗಾರರ ನಡುವಿನ ಸ್ನೇಹದ ಕೊಂಡಿಯಾಗಿದೆ. ಅದರಲ್ಲೂ ಫ್ರಾಂಚೈಸಿ ಕ್ರಿಕೆಟ್ ಆರಂಭವಾದ ನಂತರದಲ್ಲಿ ಹಲವು ರಾಷ್ಟ್ರಗಳ ಆಟಗಾರರು ಒಂದೇ ತಂಡದಲ್ಲಿ ಆಡುವುದರಿಂದ ಆಟಗಾರರ ನಡುವಿನ ಹೊಂದಾಣಿಕೆ, ಸ್ನೇಹ, ಪ್ರೀತಿ ಎಲ್ಲವೂ ವೃದ್ಧಿಯಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಕ್ರಿಕೆಟ್ ಅಂಗಳದಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಡೆಸುತ್ತಾ, ವೈರುತ್ವ ಸಾಽಸುತ್ತಾ ಬಂದಿದ್ದ ಕ್ರಿಕೆಟಿಗರು ಇಂದು, ಕ್ರಿಕೆಟ್ ಮೈದಾನದಲ್ಲಿ ಆಟದ ಜೊತೆಗೆ ಸ್ನೇಹದ ಸಂದೇಶವನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಹೀಗೆ ಆಟದಲ್ಲಿ ಮಾತ್ರವಲ್ಲದೇ ಎಲ್ಲ ಆಯಾಮಗಳಲ್ಲೂ ಭಾರೀ ಬದಲಾವಣೆ ಕಂಡಿರುವ ಕ್ರಿಕೆಟ್ ಜಗತ್ತು, ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಒಂದಿಲ್ಲೊಂದು ಬದಲಾವಣೆ, ಹೊಸತನದಿಂದ ಆಕರ್ಷಿಸುತ್ತಿರುವ ಕ್ರಿಕೆಟ್ ಇಂದು ಕೇವಲ ಆಟವಾಗಿ ಮಾತ್ರವಲ್ಲದೇ ಭಾವನಾತ್ಮಕ ಬಾಂಧವ್ಯವನ್ನೂ ಬೆಸೆದುಕೊಂಡಿದೆ. ಉಳಿದೆಲ್ಲಾ ಕ್ರೀಡೆಗಳಿಗಿಂತಲೂ ಹೆಚ್ಚಿನ ಜನಪ್ರಿಯತೆ, ಬೆಂಬಲ ದೊರೆಯುತ್ತಿರುವ ಕ್ರಿಕೆಟ್ ಕ್ರೀಡಾ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದೆ.
– ಸಿ. ದಿನೇಶ್





