ರಾತ್ರಿ ಪಾಳಿಯಲ್ಲಿ ನರ್ಸ್‌ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ
• ಸಿದ್ದೇಗೌಡ ಕೊಡಿಯಾಲ
ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ತಮ್ಮ ಗ್ರಾಮವಾದ ಅರಕೆರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 24*7 ಹೆರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ, ಈ ಸೇವೆ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.
ವಾಸ್ತವದಲ್ಲಿ ಈ ಆರೋಗ್ಯ ಕೇಂದ್ರದಲ್ಲಿ ವೈದ್ಯರ ವಸತಿ ಗೃಹವಿದ್ದರೂ ಸಂಜೆ 5 ಗಂಟೆಯ ನಂತರ ವೈದ್ಯರು ಹಾಗೂ ಹಿರಿಯ ಶುಶೂ ಷಕಿಯರೇ ಲಭ್ಯವಿರುವುದಿಲ್ಲ. ಒಬ್ಬರು ಶುಶೂಷಕಿ ಮಾತ್ರ ಇದ್ದು ತುರ್ತು ಚಿಕಿತ್ಸೆ, ಹೆರಿಗೆಗೆ ಬರುವ ಮಹಿಳೆಯರು ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ದೂರದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.
ಈ ಸಮುದಾಯ ಆರೋಗ್ಯ ಕೇಂದ್ರವಿರುವ ಅರಕೆರೆ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಸುತ್ತಮುತ್ತಲ ಗ್ರಾಮಗಳಾದ ಬಳ್ಳೇಕೆರೆ, ನೇರಲಕೆರೆ, ಶಾಂತಿಕೊಪ್ಪಲು, ಒಡೆಯಾಂಡಹಳ್ಳಿ, ಗೊಬ್ಬರಗಾಲ, ಚಿಂದೇಗೌಡನ ಕೊಪ್ಪಲು ಗ್ರಾಮಗಳು ಈ ವ್ಯಾಪ್ತಿಗೆ ಬರುತ್ತವೆ. ಈ ಗ್ರಾಮಗಳ ಜನರು ಚಿಕಿತ್ಸೆ ಪಡೆದುಕೊಳ್ಳಲು ಅರಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆದರೆ ದಿನದ 24ಗಂಟೆ ಹೆರಿಗೆ ಸೌಲಭ್ಯ ಎಂದು ನಾಮಫಲಕ ಹಾಕಲಾಗಿದ್ದರೂ ಈ ಕೇಂದ್ರ ಸಂಜೆಯಾಗುತ್ತಲೇ ಬಿಕೋ ಎನ್ನುತ್ತದೆ.
ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದರೂ 18 ಕಿ.ಮೀ.ದೂರದಲ್ಲಿರುವ ಮಂಡ್ಯ ಜಿಲ್ಲಾ ಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಆರೋಗ್ಯ ಕೇಂದ್ರವು ಶಾಸಕರ ನಿವಾಸದ ಕೂಗಳತೆ ದೂರದಲ್ಲಿದ್ದರೂ ಆರೋಗ್ಯ ಕೇಂದ್ರದಲ್ಲಿ ನಿರೀಕ್ಷಿತ ಸೌಲಭ್ಯ ಸಿಗುತ್ತಿಲ್ಲ.
ಮೊನ್ನೆ ವೃದ್ಧರೊಬ್ಬರ ತಲೆಗೆ ಪೆಟ್ಟುಬಿದ್ದು, ತುರ್ತು ಚಿಕಿತ್ಸೆಗೆ ಕರೆತಂದಾಗ ವೈದ್ಯರಿಲ್ಲದೆ ಪರದಾಡಬೇಕಾಯಿತು. ಆದರಿಂದ ಶಾಸಕರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಜನತೆ ಮನವಿ ಮಾಡಿದ್ದಾರೆ.
ಈ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದೆ. ಆದರೆ ವೈದ್ಯರು, ನರ್ಸ್‌ಗಳ ಕೊರತೆ ಎದ್ದುಕಾಣುತ್ತದೆ. ರಾತ್ರಿ ವೇಳೆ ಜನರು ತುರ್ತು ಚಿಕಿತ್ಸೆಗೆ ಬಂದರೆ, ಇಲ್ಲಿ ವೈದ್ಯರಿಲ್ಲದ ಕಾರಣ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಎಡತಾಕಬೇಕಿದೆ. ಆದ್ದರಿಂದ ಶಾಸಕರು ರಾತ್ರಿ ವೇಳೆ ವೈದ್ಯರು ಮತ್ತು ನರ್ಸ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಿದರೆ ಅರಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆಗೆ ಅನುಕೂಲವಾಗುತ್ತದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.





