Mysore
25
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು!

ದಾ. ರಾ. ಮಹೇಶ್

ವೀರನಹೊಸಹಳ್ಳಿ: ಮೂರು ದಿನಗಳಿಂದ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಓಡಿಸಲು ಹೋದ ಜನರ ಗುಂಪನ್ನೇ ಆನೆಗಳು ಅಟ್ಟಾಡಿಸಿರುವ ಘಟನೆ ಗುರುವಾರ ನಡೆದಿದೆ. ನಾಗರಹೊಳೆ ರಾಷ್ಟೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ನಾಗಪುರ, ಭರತವಾಡಿ ಗ್ರಾಮಗಳ ರೈತರ ತೋಟಗಳಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ಓಡಿಸಲು ಅರಣ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಮುಂದಾದಾಗ ಕಾಡಾನೆಗಳು ಅವರನ್ನೇ ಹಿಮ್ಮೆಟ್ಟಿಸಿವೆ.

ಈ ವೇಳೆ ದೊಡ್ಡ ಹೆಜ್ಜೂರು ಗ್ರಾಮದ ರಥರ ವೆಂಕಟೇಶ್ ಅವರ ತೋಟದಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್, ಜೋಳದ -ಸಲನ್ನು ನಾಶಗೊಳಿಸಿವೆ. ಕೇರಳ ಮೂಲದ ವ್ಯಕಿಯೊಬ್ಬರು ಗುತ್ತಿಗೆ ಮಾಡುತ್ತಿದ್ದ ಜಮೀನು, ಭರತವಾಡಿಯ ಇಂದ್ರೇಶ್ ಇನ್ನಿತರ ರೈತರ -ಸಲನ್ನು ತುಳಿದು ನಾಶಪಡಿಸಿವೆ. ಬುಧವಾರ ರಾತ್ರಿಯೇ ಧಾಂದಲೆ ನಡೆಸಿದ್ದವು. ಗುರುವಾರವೂ ಸುಮಾರು ಎಂಟು ಎಕರೆ ಪ್ರದೇಶದಲ್ಲಿದ್ದ ಜೋಳದ -ಸಲು, ತೆಂಗಿನ ಮರಗಳನ್ನು ಉರುಳಿಸಿದ್ದಲ್ಲದೆ, ನೀರಾವರಿ ಪೈಪ್ ಗಳನ್ನು ತುಳಿದು ನಾಶ ಮಾಡಿವೆ. ಕಾಡಿನ ಬದಿಯಲ್ಲಿ ತೋಟದ ಸುತ್ತಲೂ ಹಾಕಿದ್ದ ತಂತಿ ಬೇಲಿಯನ್ನು ಕಿತ್ತು ಹಾಕಿವೆ. ನಾಗರಹೊಳೆ-ಹುಣಸೂರು ಮುಖ್ಯ ರಸ್ತೆಯಿಂದ ಸುಮಾರು ೨೫೦ ಮೀ. ದೂರದಲ್ಲಿ ಕಾಡಾನೆಗಳಿರುವ ಬಗ್ಗೆ ಮಾಹಿತಿ ಇತ್ತು.

ಸ್ಥಳೀಯರು ಗುರುವಾರ ಬೆಳಿಗ್ಗೆ ೮ ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಬೀಡುಬಿಟ್ಟಿದ್ದ ಸ್ಥಳಕ್ಕೆ ಹೋಗಿ ಸಿಡಿಮದ್ದು ಸಿಡಿಸಲಾಯಿತು. ಆದರೂ ಆನೆಗಳ ಹಿಂಡು ಯಾವುದೇ ಸದ್ದಿಗೂ ಜಗ್ಗಲಿಲ್ಲ. ಸುಮಾರು ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಆನೆಗಳು ಕದಡಲಿಲ್ಲ. ಸಿಡಿಮದ್ದಿನ ಶಬ್ದಕ್ಕೆ ಳಿಡುತ್ತಾ ಜನರ ಗುಂಪನ್ನು ಹಿಮ್ಮೆಟ್ಟಿಸಲು ಮುಂದಾದವು. ಈ ವೇಳೆ ಜೆಸಿಬಿ ಹಾಗೂ ಟ್ರಾಕ್ಟರ್‌ಗಳನ್ನು ಬಳಸಿ ಓಡಿಸಲು ಮುಂದಾದಾಗ ಗುಂಪಿನಲ್ಲಿ ಇದ್ದ ಸಲಗ ಒಂದು ಟ್ರಾಕ್ಟರ್‌ಗೆ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ನಜ್ಜುಗುಜ್ಜಾಗಿದೆ.

ಚಾಲಕ ವೆಂಕಟೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವೇಳೆ ಅಕ್ಕಪಕ್ಕದವರು ಕೂಗುತ್ತಿದ್ದ ಶಬ್ದಕ್ಕೆ ಆನೆಗಳು ಮುಂದಿನ ಜಮೀನುಗಳಿಗೆ ನುಗ್ಗಿವೆ. ಕಾಡಾನೆ ಹಿಂಡು ಅಟ್ಟಿಸಲು ಹೋದ ಅರಣ್ಯ ಅಧಿಕಾರಿ ಚಂದ್ರೇಶ್ ಮತ್ತು ತಂಡದವರನ್ನು ಆನೆ ಅಟ್ಟಿಸಿಕೊಂಡು ಬಂದಿವೆ.

ಕಾರ್ಯಾಚರಣೆಗಿಳಿದ ಭೀಮ, ಗಣೇಶ ಆನೆಗಳು: ಗುರುವಾರ ಬೆಳಿಗ್ಗೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಮತ್ತಿಗೂಡು ಸಾಕಾನೆ ಶಿಬಿರದ ಭೀಮ ಹಾಗೂ ಎಚ್. ಡಿ. ಕೋಟೆಯ ಬಳ್ಳೆ ಶಿಬಿರದ ಗಣೇಶ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಆದರೆ ಜನಸಂದಣಿ ಹೆಚ್ಚಾಗಿದ್ದರಿಂದ ರಾತ್ರಿ ಸಮಯದಲ್ಲಿ ಆನೆಯ ಹಿಂಡನ್ನು ಕಾಡಿಗೆ ಅಟ್ಟುತೇವೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಹೇಳಿದರು.

ಆನೆ ನೋಡಲು ಮುಗಿಬಿದ್ದ ಜನರು: ದಸರಾದಿಂದ ಬಂದ ಸಾಕಾನೆಗಳು ವಿಶ್ರಾಂತಿ ಮೂಡ್‌ನಲ್ಲಿ ಇದ್ದವು. ಆದರೆ ಆನೆಗಳನ್ನು ಕಾರ್ಯಾಚರಣೆಗೆ ತಂದಿದ್ದರಿಂದ ಜನರು ಮುಗಿಬಿದ್ದು ಆನೆಗಳನ್ನು ನೋಡಲು ಮುಂದಾದರು. ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಪೋಟೋ-ವಿಡಿಯೋ ಕ್ಲಿಕ್ಕಿಸಲು ಮುಂದಾದಾಗ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು.

ಅಕ್ಕಪಕ್ಕದ ಗ್ರಾಮದಲ್ಲೂ ದಾಳಿ: ಮುದಗ ನೂರು, ವೀರನಹೊಸಹಳ್ಳಿ, ಭರತವಾಡಿ ಗ್ರಾಮಗಳ ರೈತರ ಭತ್ತದ ಗದ್ದೆಗೆ ಗಳಿಗೆ ನುಗ್ಗಿದ ಆನೆಗಳ ಹಿಂಡು ತುಳಿದು ಪೈರುಗಳನ್ನು ನಾಶ ಪಡಿಸಿವೆ. ಕಾರ್ಯಾಚರಣೆ ವೇಳೆ ಆನೆಗಳ ಹಿಂಡು ನಮ್ಮನ್ನು ಅಟ್ಟಿಸಿಕೊಂಡು ಬಂದಿವೆ. ಅರಣ್ಯ ಅಧಿಕಾರಿಗಳ ಬಳಿ ಇರುವ ಬಂದೂಕುಗಳು ಅಷ್ಟು ಗುಣಮಟ್ಟದ್ದಾಗಿಲ್ಲ. ಈ ರೀತಿ ಆದರೆ ಫಸಲಿನ ಜತೆಗೆ ಜನರು ಪ್ರಾಣ ಕಳೆದು ಕೊಳ್ಳಬೇಕಾಗುತ್ತದೆ ಆದ್ದರಿಂದ ಸರ್ಕಾರ ಗುಣಮಟ್ಟದ ಆಧುನಿಕ ಉಪಕರಣಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಂಡು ಆನೆ ಕಾಡಿಗೆ ಅಟ್ಟಿಸುವ ಕೆಲಸ ಆಗುತ್ತಿದೆ. ಜನರ ಸಹಕಾರ ಬೇಕಿದೆ. ಇಂದು ನಡೆಸಿದ ಕಾರ್ಯಾ ಚರಣೆ ಯಶಸ್ಸು ಕಂಡಿಲ್ಲ. ಆನೆಗಳ ಹಿಂಡನ್ನು ಕಾಡಿಗಟ್ಟುವ ಪ್ರಯತ್ನ ಮಾಡುತ್ತೇವೆ. -ಅಭಿಷೇಕ್, ವಲಯ ಅರಣ್ಯಧಿಕಾರಿ

ಕಾಡಾನೆ ಹಿಂಡು ದಾಳಿ ನಡೆಸಿದ ಪರಿಣಾಮ ಜಮೀನಿನಲ್ಲಿ ಬೆಳೆದಿದ್ದ ಫಸಲು ನಾಶವಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ದಿನನಿತ್ಯ ಭಯ ಕಾಡುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. -ವೆಂಕಟೇಶ್, ರೈತ

Tags: