ಪ್ರತಿನಿತ್ಯ ಮೇವು, ನೀರು ಅರಸಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು
ಮಂಜು ಕೋಟೆ
ಎಚ್. ಡಿ. ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ವನ್ಯಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿರನ್ನು ಆಕರ್ಷಿಸುತ್ತಿದೆ.
ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಬಿನಿ ಹಿನ್ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ಈ ನಡುವೆ ಮೇವು ಮತ್ತು ನೀರು ಅರಸಿ ಕಾಡಿನಲ್ಲಿರುವ ಆನೆಗಳು, ಜಿಂಕೆಗಳು, ಕಡವೆ ಇತರ ವನ್ಯಪ್ರಾಣಿಗಳು ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆ ಯಲ್ಲಿ ಹಿನ್ನೀರಿನ ಬಳಿಗೆ ಆಗಮಿಸುತ್ತಿವೆ. ನೀರು ನಾಯಿಗಳು ದಡದ ಬಳಿ ಬಂದು ಬಿಸಿಲು ಕಾಯುತ್ತಿರುತ್ತವೆ.
ಕಬಿನಿ ಹಿನ್ನೀರಿನ ಗುಂಡತ್ತೂರು ಮತ್ತು ಉದ್ದೂರು ಗೇಟ್ ಭಾಗದ ಆರಣ್ಯ ವ್ಯಾಪ್ತಿಯಲ್ಲಿ ಹಸಿರು ಹುಲ್ಲು ಮತ್ತು ಗಿಡಗಳು ಬೆಳೆದು ನಿಂತಿವೆ. ಇಲ್ಲಿ ತಂಪಾದ ವಾತಾವರಣ ಇರುವುದರಿಂದ ಗುಂಪು ಗುಂಪಾಗಿ ಆನೆಗಳು, ಜಿಂಕೆಗಳು, ಕಡವೆ, ಸಾಂಬಾ ಇನ್ನಿತರ ಪ್ರಾಣಿಗಳು ಮೇವು ತಿನ್ನಲು ಬರುತ್ತಿದ್ದು, ಕತ್ತಲಾಗುತ್ತಿ ದ್ದಂತೆ ಪಕ್ಕದ ಅರಣ್ಯದೊಳಗೆ ತೆರಳುತ್ತವೆ. ಇವುಗಳನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ನೂರಾರು ಜನರು ಸಂಜೆ ವೇಳೆ ಆಗಮಿ ಸುತ್ತಿದ್ದಾರೆ. ಕೆಲವರು ಬೋಟ್ ಮೂಲಕ ಹಿನ್ನೀರಿನಲ್ಲಿ ಹೋಗಿ ವೀಕ್ಷಿಸಿದರೆ, ಕೆಲ ವರು ದಡದಲ್ಲೇ ನಿಂತು ಪ್ರಾಣಿಗಳನ್ನು ನೋಡಿ ಖುಷಿಪಡುತ್ತಿದ್ದಾರೆ.
ಕಬಿನಿ ಹಿನ್ನೀರಿನ ಒಂದು ಭಾಗದ ಗುಂಡ್ರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮತ್ತು ಮತ್ತೊಂದು ಭಾಗವಾದ ಕಾಕನ ಕೋಟೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಳ್ಳುವು ದರಿಂದ ದೂರದಿಂದಲೇ ವೀಕ್ಷಿ ಸಬಹುದಾಗಿದೆ. ಆದರೆ ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್ ರೆಸಾರ್ಟ್‌ನ ಬೋಟ್‌ಗಳಲ್ಲಿ ಮಾತ್ರ ವನ್ಯಪ್ರಾಣಿಗಳ ಹತ್ತಿರವೇ ಹೋಗಿ ವೀಕ್ಷಿಸಬಹುದಾಗಿದೆ. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಕಾಡಿನಲ್ಲಿ ಕೆರೆಕಟ್ಟೆಗಳು ತುಂಬಿ ಗಿಡಮರಗಳೆಲ್ಲ ಹಸಿರಾಗುತ್ತಿದ್ದಂತೆ ವನ್ಯಪ್ರಾಣಿಗಳು ಕಾಡಿನೊಳಗೆ ಆಹಾರ ಅರಸಿ ಹೋಗಲಿವೆ. ಅಲ್ಲಿಯವರೆಗೆ ವನ್ಯಪ್ರಾಣಿ ಗಳನ್ನು ಹಿನ್ನೀರಿನ ಬಳಿ ನೋಡಿ ಸಂತಸಪಡಬಹುದಾಗಿದೆ.
ಈ ವರ್ಷ ವನ್ಯ ಪ್ರಾಣಿಗಳು ಕಬಿನಿ ಹಿನ್ನೀರಿನ ದಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಬೋಟ್‌ಗಳಲ್ಲಿ ತೆರಳಿ ಪ್ರಾಣಿಗಳನ್ನು ವೀಕ್ಷಿಸುತ್ತಿದ್ದಾರೆ. ನಾವು ಬೆಳಿಗ್ಗೆ ೬ ರಿಂದ ಸಂಜೆ ೬ ರವರೆಗೆ ಕಬಿನಿ ಹಿನ್ನೀರಿನಲ್ಲಿ ಕೆಲ ಪ್ರದೇಶದಲ್ಲಿ ಬೋಟ್‌ನಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಅರಣ್ಯ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಮಗೆ ಪ್ರವೇಶವಿಲ್ಲ. -ಪ್ರಕಾಶ್ ಗುಂಡತ್ತೂರು, ಬೋಟ್ ಮಾಲೀಕರು, ಪ್ರವಾಸೋದ್ಯಮ ಇಲಾಖೆ
ಕಬಿನಿ ಹಿನ್ನೀರಿನ ಬಳಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಆನೆಗಳು, ಜಿಂಕೆ, ಕಡವೆ, ಸಾಂಬಾರ್, ಕಾಡೆಮ್ಮೆ ಇನ್ನಿತರ ವನ್ಯಪ್ರಾಣಿಗಳು ಹಸಿರು ಮೇವು ತಿನ್ನಲು ಹಾಗೂ ನೀರು ಕುಡಿಯಲು ತಮಿಳುನಾಡು, ಕೇರಳ ಭಾಗದ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ವ್ಯಾಪ್ತಿಯಿಂದ ಬರುತ್ತವೆ. ಮಳೆ ಪ್ರಾರಂಭವಾಗು ತ್ತಿದ್ದಂತೆ ಮತ್ತೆ ಅವುಗಳ ಸ್ಥಳಗಳಿಗೆ ಹೋಗುತ್ತವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಪ್ರಾಣಿಗಳು ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ. -ಸಿದ್ದರಾಜು, ಅರಣ್ಯ ಅಧಿಕಾರಿ, ದಮ್ಮನಕಟ್ಟೆ





