Mysore
27
overcast clouds

Social Media

ಸೋಮವಾರ, 26 ಅಕ್ಟೋಬರ್ 2026
Light
Dark

 ಉತ್ತರ ಕೊಡಗಿನ ಕಾಫಿ ತೋಟಗಳಲ್ಲಿ ಬಿಳಿಕಾಂಡಕೊರಕ ಕಾಟ

ಲಕ್ಷ್ಮೀಕಾಂತ್ ಕೊಮಾರಪ್ಪ

ಅರೇಬಿಕಾ ಕಾಫಿ ತಳಿಯನ್ನೇ ಹೆಚ್ಚಾಗಿ ಕಾಡುತ್ತಿರುವ ರೋಗ

ಫಸಲು ನೀಡುವ ಗಿಡಗಳೇ ನಾಶ, ಬೆಳೆಗಾರರಿಗೆ ಆರ್ಥಿಕ ಸಂಕಷ್ಟ 

ಸೋಮವಾರಪೇಟೆ: ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಉತ್ತರ ಕೊಡಗಿನ ಭಾಗದ ಕಾಫಿ ಬೆಳೆಗಾರರಿಗೆ ಇತ್ತೀಚೆಗೆ ಬಿಳಿ ಕಾಂಡಕೊರಕ ಕೀಟ ಬಾಧೆ ಕಾಡುತ್ತಿದೆ. ಫಸಲಿಗೆ ಬಂದಂತಹ ಗಿಡಗಳು ಕೀಟಬಾಧೆಗೆ ತುತ್ತಾಗುತ್ತಿದ್ದು, ಬೆಳೆಗಾರರು ಪ್ರತಿ ವರ್ಷವೂ ಫಸಲಿನೊಂದಿಗೆ ಗಿಡಗಳನ್ನು ಕಳೆದುಕೊಳ್ಳಬೇಕಾದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಪ್ರಸಕ್ತ ವರ್ಷ ಮಳೆ ಇಲ್ಲದೆ ಬಿಸಿಲಿನ ಶಾಖಕ್ಕೆ ಕಾಫಿ ತೋಟದಲ್ಲಿ ಅರೇಬಿಕಾ ತಳಿಗಳಿಗೆ ಬಿಳಿ ಕಾಂಡಕೊರಕ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ. ರೋಗ ಪೀಡಿತವಾಗಿರುವ ಕಾಫಿ ಗಿಡಗಳನ್ನು ಬುಡ ಸಹಿತ ಕಿತ್ತು ಬೆಂಕಿ ಹಚ್ಚಲಾಗುತ್ತಿದೆ.

ರೋಗ ಪೀಡಿತ ಅರೇಬಿಕಾ ಕಾಫಿ ಗಿಡಗಳನ್ನು ಕೆಲವರು ತೆರವುಗೊಳಿಸಿ ತೋಟದ ಸಮೀಪವೇ ಹಾಕುತ್ತಿದ್ದಾರೆ. ಇಂತಹ ಗಿಡಗಳ ಬುಡದಿಂದ ಹೊರಬರುವ ಕಾಂಡಕೊರಕ ಕೀಟಗಳು ಮತ್ತೆ ತೋಟದೊಳಗಿನ ಗಿಡಗಳನ್ನು ಸೇರುತ್ತಿವೆ. ರೋಗಪೀಡಿತ ಕಾಫಿ ಗಿಡಗಳನ್ನು ಕಿತ್ತ ತಕ್ಷಣ ಸುಡಬೇಕು. ಇಲ್ಲವೇ ದೂರದ ಪ್ರದೇಶಕ್ಕೆ ಸಾಗಿಸಬೇಕು ಎಂದು ಕಾಫಿ ಮಂಡಳಿ ಅಽಕಾರಿಗಳು ಸಲಹೆ ನೀಡಿದ್ದಾರೆ.

ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕೂತಿ ಕಿರಗಂದೂರು, ತಾಕೇರಿ, ಹಾನಗಲ್ಲು, ಐಗೂರು, ಚೌಡ್ಲು, ದೊಡ್ಡಮಳೆ ವ್ಯಾಪ್ತಿಯಲ್ಲಿ ಎಕರೆಗೆ ೩೦ರಿಂದ ೫೦ ಗಿಡಗಳು ಬೋರರ್ ಹುಳುಗಳಿಂದ ನಾಶವಾಗುತ್ತಿವೆ. ಶನಿವಾರಸಂತೆ, ಸೋಮವಾರಪೇಟೆ, ಗಣಗೂರು, ಆಲೂರು, ಸಿದ್ದಾಪುರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಗಿಡಗಳು ಕಾಂಡಕೊರಕ (ಬೋರರ್) ಹಾವಳಿಗೆ ಒಳಾಗಾಗುತ್ತಿವೆ.

ಬಿಸಿಲಿನ ವಾತಾವರಣದಲ್ಲಿ ಕಾಂಡಕೊರಕ ಕೀಟಗಳ ವೃದ್ಧಿ: ಬಿಸಿಲಿನ ವಾತಾವರಣದಲ್ಲಿ ಕಾಂಡಕೊರಕ ಕೀಟಗಳ ಸಂತಾನೋತ್ಪತ್ತಿಯು ಹೆಚ್ಚಾಗುತ್ತದೆ. ಈ ಕೀಟಗಳ ಹಾವಳಿಗೆ ತುತ್ತಾದ ಕಾಫಿಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಡೀ ತೋಟವೇ ನಾಶವಾಗುತ್ತದೆ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಅರೇಬಿಕಾ ತಳಿಗಳಿಗೆ ಕೀಟ ಬಾಧೆ: ಅರೇಬಿಕಾ ತೋಟಗಳಲ್ಲಿ ಮಾತ್ರ ಬಿಳಿ ಕಾಂಡಕೊರಕ ಹಾವಳಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು ೨೮,೫೪೦ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ೨೨,೯೪೦ ಹೆಕ್ಟೇರ್ ನಲ್ಲಿ ಅರೇಬಿಕಾ, ೫,೬೦೦ ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಅರೇಬಿಕಾ ತಳಿಯನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ಕೀಟಬಾಧೆ ಹೆಚ್ಚಾಗಿದೆ.

ಕಾಂಡ ಕೊರಕ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ: 

ಸೋಮವಾರಪೇಟೆ: ಕಾಂಡಕೊರಕ ಹಾವಳಿ ನಿಯಂತ್ರಣಕ್ಕೆ ಕಾಫಿ ತೋಟದಲ್ಲಿ ನೆರಳು ಕಾಪಾಡಿಕೊಳ್ಳಬೇಕು. ಅರೇಬಿಕಾ ಕಾಫಿ ತೋಟದಲ್ಲಿ ಶೇ.೬೦ರಷ್ಟು ನೆರಳು, ರೋಬಸ್ಟಾ ತೋಟದಲ್ಲಿ ಶೇ.೪೦ರಷ್ಟು ನೆರಳು ಇರಬೇಕು ಎಂದು ಚೆಟ್ಟಳ್ಳಿಯ ಕಾಫಿ ವಿಸ್ತರಣಾ ಅಧಿಕಾರಿ ಲಕ್ಷ್ಮೀಕಾಂತ್ ಸಲಹೆ ನೀಡಿದ್ದಾರೆ.

ತೋಟವು ತಂಪಾಗಿ ಇದ್ದರೆ ಕಾಂಡಕೊರಕ ಹುಳಗಳ ಸಂತಾನೋತ್ಪತ್ತಿ ಹಾಗೂ ಮೊಟ್ಟೆ ಇಡಲು ಸಾಧ್ಯವಾಗುವುದಿಲ್ಲ. ಬಿಳಿ ಕಾಂಡಕೊರಕ ಪೀಡಿತ ಕಾಫಿ ಗಿಡಗಳನ್ನು ಕಿತ್ತ ಕೂಡಲೇ ಸುಡಬೇಕು. ತೋಟದ ಬೀದಿಯಲ್ಲಿ ಸಂಗ್ರಹ ಮಾಡಬಾರದು. ಅಕ್ಟೋಬರ್ ಸಮಯದಲ್ಲಿ ೨೦೦ ಲೀ. (ಒಂದು ಬ್ಯಾರಲ್) ನೀರಿಗೆ ೨೦ ಕೆ.ಜಿ. ಸ್ಪ್ರೇ ಸುಣ್ಣವನ್ನು ಕರಗಿಸಿ, ಅದಕ್ಕೆ ೨೦೦ ಮಿ.ಲೀ. ಡಿಡಿಎಲ್ ಫೆವಿಕಾಲ್ ಹಾಗೂ ೨೦೦ ಮಿ.ಲೀ. ಸೂಪರ್ ಸ್ಪ್ರೆಡರ್ ಸೇರಿಸಬೇಕು. ಈ ದ್ರಾವಣವನ್ನು ಸರಿಯಾದ ಪ್ರಮಾಣದಲ್ಲಿ ತಯಾರಿಸಿ, ಕಾಫಿ ಗಿಡಗಳ ಮುಖ್ಯ ಕಾಂಡ ಮತ್ತು ದಪ್ಪ ಕೊಂಬೆಗಳಿಗೆ ಸಮರ್ಪಕವಾಗಿ ಲೇಪಿಸುವುದರಿಂದ ಹುಳಗಳನ್ನು ಹತೋಟಿಗೆ ತರಬಹುದು.

ಇದರೊಂದಿಗೆ ರಿಬ್ಬನ್ ಆಕಾರದ ಕಾಟನ್ ಬಟ್ಟೆಯನ್ನು ಗಿಡದ ಬುಡಕ್ಕೆ ಸುತ್ತಿ ಪ್ಯಾಂತೊಯೇಟ್ ಎಂಬ ಕೀಟನಾಶಕವನ್ನು ಸಿಂಪಡಿಸಬೇಕು. ಅಥವಾ ಕಾಫಿ ಫಸಲು ಕುಯ್ಲು ಮಾಡಿದ ನಂತರ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಒಂದು ಬ್ಯಾರಲ್ ನೀರಿನೊಂದಿಗೆ ಪ್ಯಾಂತೋಯೇಟ್ ಶೇ.೫೦ ಇಸಿ ಎಂಬ ಕೀಟನಾಶಕವನ್ನು ಹಾಕಿ ಕಾಫಿ ಗಿಡಗಳಿಗೆ ಸಿಂಪಡಿಸಬೇಕು. ಇದರಿಂದ ಕಾಫಿ ಗಿಡಗಳನ್ನು ಉಳಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

” ಬಿಳಿ ಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ ಫಸಲು ಕೊಡುತ್ತಿದ್ದ ಹತ್ತು ವರ್ಷಗಳಷ್ಟು ಹಳೆಯದಾದ ಗಿಡಗಳು ಸಾಯುತ್ತಿವೆ. ಇದರಿಂದ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ ಐದು ವರ್ಷಗಳು ಬೇಕಾಗುತ್ತವೆ. ಫಸಲಿಗೆ ಬಂದಿರುವ ಕಾಫಿ ಗಿಡಗಳು ನಾಶವಾಗುತ್ತಿರುವುದರಿಂದ ಕಾಫಿ ತೋಟದ ನಿರ್ವಹಣೆ ಅಸಾಧ್ಯವಾಗಿದೆ”

-ರತನ್ ಗೌಡ,  ಕಾಫಿ ಬೆಳೆಗಾರರು, ಶುಂಠಿ ಗ್ರಾಮ 

 

 

Tags:
error: Content is protected !!