ಶುಕ್ರವಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ವಿಜಯ ನಗರದ ೨ ನೇ ಹಂತದ ೬೦೦ ಚದರಡಿಯ (೨೦೩೦), ಖಾಲಿ ನಿವೇಶನವು ೨ ಕೋಟಿ ರೂ. ಬೃಹತ್ ಮೊತ್ತಕ್ಕೆ ಹರಾಜು ಆಗಿರುವುದು ಮೈಸೂರಿನ ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ಇದರ ಬೆಲೆ, ಒಂದು ಅಡಿಗೆ ರೂ. ೩೪ ಸಾವಿರ ರೂ.ಗಳಾಗಿದೆ.
ಮೈಸೂರಿನ ಹೃದಯ ಭಾಗದಲ್ಲಿರುವ ಅಶೋಕ ರಸ್ತೆ, ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯಲ್ಲೂ ನಿವೇಶನಗಳಿಗೆ ಇಷ್ಟು ದುಬಾರಿ ಬೆಲೆ ಇಲ್ಲದಿರುವಾಗ, ಮೈಸೂರಿನಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಈ ನಿವೇಶನಕ್ಕೇಕೆ ಇಷ್ಟೊಂದು ದುಬಾರಿ ಬೆಲೆ ಎಂದು ಸಾರ್ವಜನಿಕರು ಹುಬ್ಬೇರಿಸುತ್ತಿದ್ದಾರೆ. ಈ ನಿವೇಶನದಲ್ಲೇನಾದರೂ ಚಿನ್ನದ ನಿಕ್ಷೇಪ ಇದೆಯಾ? ಈ ನಿವೇಶನ ಕೊಂಡುಕೊಂಡಿರುವ ವ್ಯಕ್ತಿಯ ಹಣದ ಮೂಲ ಯಾವುದು? ತಮ್ಮಲ್ಲಿರುವ ಕಪ್ಪು ಹಣವನ್ನು ವೈಟ್ ಮಾಡಲು ಈ ರೀತಿ ಮಾಡಿರಬಹುದೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದಕ್ಕೆ ತೆರಿಗೆ ಇಲಾಖೆ ಅಧಿಕಾರಿಗಳೇ ಸ್ಪಷ್ಟನೆ ನೀಡಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





