ಡಾ . ಚೇತನ ಗುರುರಾಜು,
ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು
ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು
ನಾನು ಮಕ್ಕಳ ಜೊತೆಗೆ ಕೆಲಸ ಮಾಡುತ್ತಾ ಇರುವುದರಿಂದ, ಸಾಮಾಜಿಕ ಮಾಧ್ಯಮಗಳು ಮತ್ತು ಮಕ್ಕಳ ಕುರಿತು ಹಲವು ಆಯಾಮಗಳನ್ನು ಗುರುತಿಸಲು ಸಾಧ್ಯವಾಗುತ್ತಿದೆ. ವೈವಿಧ್ಯಮಯ ಸಾಮಾಜಿಕ ಮಾಧ್ಯಮಗಳು ಉಚ್ಛ್ರಾಯ ಸ್ಥಿತಿಯಲ್ಲಿ ಇರುವ ಕಾಲದಲ್ಲಿ ನಾವಿದ್ದೇವೆ.
ನಮ್ಮ ಆಸಕ್ತಿಗೆ ತಕ್ಕಂತಹ ಆಯ್ಕೆಗಳು ಇವೆ. ಇವು ಮಕ್ಕಳನ್ನೂ ಆಕರ್ಷಿಸುತ್ತಿವೆ. ಕೆಲವು ಸಾಮಾಜಕ ಮಾಧ್ಯಮಗಳಲ್ಲಿ ಕನಿಷ್ಠ ವಯಸ್ಸಿನ ಮಿತಿ ನಿಗದಿಮಾಡಿವೆ. ಆದರೂ ಮನೆಯ ಹಿರಿಯರ ಖಾತೆಗಳನ್ನು ಬಳಸಿ, ಹುಟ್ಟಿದ ದಿನಾಂಕವನ್ನು ಹೆಚ್ಚುವರಿಯಾಗಿ ನೀಡಿ ಮಕ್ಕಳು ಬಳಸುತ್ತಿರುವುದನ್ನು ನಾವು ನಮ್ಮ ಸುತ್ತಲೂ ಗಮನಿಸುತ್ತಿದ್ದೇವೆ. ಪೋಷಕರಿಗಿಂತ ಹೆಚ್ಚು ಅರಿವು ಮಕ್ಕಳಿಗೆ ಇರುತ್ತದೆ. ಸುಲಭವಾಗಿ ಸಿಗುತ್ತಿವೆ. ಮಕ್ಕಳು ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮುಂದೆ ಸಾಗುತ್ತಿದ್ದಾರೆ ವೇಗವಾಗಿ.
ಊಟ ಮಾಡಲು ನಿರಾಕರಿಸುವ ಮಗುವಿಗೆ ಹೆಚ್ಚು ತಿನ್ನುವಂತೆ ಮಾಡಲು ಯೂಟ್ಯೂಬ್ ಮೊರೆಹೋಗುವ ಪೋಷಕರು, ಮುಂದೆ ಮಗು ಓದಿನಲ್ಲಿ ಗಮನಕೊಡುತ್ತಿಲ್ಲ, ಆಟವಾಡಲು ಇಷ್ಟಪಡುತ್ತಿಲ್ಲ, ಜನರ ಜೊತೆಗೆ ಬೆರೆಯುತ್ತಿಲ್ಲ ಎಂದು ಗಾಬರಿಮಾಡಿಕೊಳ್ಳುತ್ತಾರೆ. ವರ್ಚುಯಲ್ ಜಗತ್ತು ಅವರನ್ನು ಈ ಯಾವುದನ್ನೂ ಮಾಡುವುದಕ್ಕೆ ಬಿಡುತ್ತಿಲ್ಲವೇನೋ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಸಾಕು ತರಗತಿಯ ಯಾವ ಮಗು ಹೆಚ್ಚು ಸಾಮಾಜಿಕ ಮಾಧ್ಯಮ ಬಳಸುತ್ತಿದೆ ಎಂದು ಶಿಕ್ಷಕರು ಆರಾಮವಾಗಿ ಹೇಳಿಬಿಡಬಹುದು.
ಬದಲಾವಣೆಗೆ ಹೊಂದಿಕೊಳ್ಳಬೇಕು, ಮಕ್ಕಳು ತಂತ್ರಜ್ಞಾನ ಬಳಸಿಕೊಂಡು ಕಲಿಯಬೇಕು ಎಂಬ ಯೋಚನೆಯೂ ಹಲವರಲ್ಲಿ ಇದೆ. ಆದರೆ ಎಷ್ಟು? ಯಾವ ಥರದ್ದು? ಮಾರ್ಗದರ್ಶನ ಮಾಡುವ ತಜ್ಞರು ಯಾರು? ಇದಕ್ಕೆ ಏನಾದರೂ ಸಂಶೋಧನೆಗಳು ಆಗಿವೆಯೇ? ನಮಗ್ಯಾರಿಗೂ ಗೊತ್ತಿಲ್ಲ.
ತಂತ್ರಜ್ಞಾನಕ್ಕೆ ಹೆಚ್ಚು ತೆರೆದುಕೊಂಡಿರುವ ಪೋಷಕರು ಮನೆಯಲ್ಲಿ ನಾಲ್ಕಾರು ಫೋನ್‌ಗಳು, ಒಂದೆರಡು ಪ್ಯಾಡ್‌ಗಳು, ಓದಲು ಕಿಂಡಲ್ ಗಳು, ಹೈ ರೆಸಲ್ಯೂಷನ್ ಟಿವಿ, ಕೆಲಸಕ್ಕೆ ಲ್ಯಾಪ್‌ಟಾಪ್‌ಗಳು. ಮಕ್ಕಳು ನೋಡಿದ ಕಡೆಯೆ ಗ್ಯಾಜೆಟ್‌ಗಳು. ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಬದುಕು ಮಾಡಿಕೊಳ್ಳಲು ಇಷ್ಟು ಸಾಕು. ನಾವೇ ಕಲಿಯುತ್ತಿದ್ದೇವೆ, ಆದ್ದರಿಂದ ಮಕ್ಕಳಿಗೆ ಏನನ್ನು ಹೇಳುವುದು?
ನಾವು ಯಾರ ಜೊತೆಗೊ ಫೋನ್ ಮಾಡಿ ಮಾತನಾಡಲೋ, ಸಂದೇಶ ಕಳುಹಿಸಲೋ ಕೈಗೆ ಫೋನ್ ತೆಗೆದುಕೊಳ್ಳುತ್ತೇವೆ. ಆ ಕೆಲಸ ಮುಗಿದ ತಕ್ಷಣ ನಾವು ಎಷ್ಟು ಜನ ಫೋನ್ ಕೆಳಗೆ ಇಡುತ್ತೇವೆ? ಬದಲಿಗೆ ನಾವು ಫೇಸ್‌ಬುಕ್, ವಾಟ್ಸಾಪ್, ಶಾರ್ಟ್ಸ್, ರೀಲ್ಸ್, ಇನ್ಸ್ಟಾಗ್ರಾಮ್ ಅಥವಾ ಇನ್ನ್ಯಾವುದರೊಳಗೋ ಅರಿವೇ ಇಲ್ಲದೆ ಬಿದ್ದುಹೋಗಿರುತ್ತೇವೆ. ಎದ್ದುಬರಲು ಗಂಟೆಗಟ್ಟಲೆ ಬೇಕು. ನಮ್ಮ ಪರಿಸ್ಥಿತಿ ಹೀಗಿರುವಾಗ, ಇನ್ನು ಕಣ್ಣು ಬಿಡುತ್ತಲೇ ತನ್ನ ಸುತ್ತಾ ಸಾಮಾಜಿಕ ಮಾಧ್ಯಮಗಳ ಜೋಗುಳನ್ನು ಕೇಳುತ್ತಿರುವ, ನೋಡುತ್ತಿರುವ ನಮ್ಮ ಮಕ್ಕಳು ಎಷ್ಟು ಬಳಸಬಹುದು? ಕಲ್ಪಿಸಿಕೊಳ್ಳಿ. ನನಗಂತೂ ಭಯವಾಗುತ್ತದೆ. ಇವುಗಳಿಂದ ನಮ್ಮ ಮಕ್ಕಳನ್ನು ಕಾಪಾಡುವುದು ಹೇಗೆ? ಇದಕ್ಕೆ ನಮಗೆ ಸರ್ಕಾರದ ಸಹಾಯಬೇಕು.
ನಮ್ಮ ದೇಶ ಕಳೆದ ೧೦ ವರ್ಷಗಳಿಂದ ಹೆಚ್ಚು ಸಾಮಾಜಿಕ ಮಾಧ್ಯಮಗಳಿಗೆ ತೆರೆದುಕೊಂಡಿದೆ. ಹಲವಾರು ವರ್ಷಗಳ ಹಿಂದೆಯೇ ಇಂಟರ್‌ನೆಟ್ ಕ್ರಾಂತಿಯಾಗಿ, ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿದ ಹಲವಾರು ದೇಶಗಳಿವೆ. ಅಲ್ಲಿ ಜನರು, ಸರ್ಕಾರ ಏನನ್ನು ಗಮನಿಸಿzರೆ, ಅವರ ಕಲಿಕೆಗಳು ಏನೇನು ಎಂಬುದನ್ನು ರಾಜಕೀಯವಿಲ್ಲದೆ ಶುದ್ಧ ಮನಸ್ಸಿನಿಂದ ನಾವು ಅರಿತು ಕೊಳ್ಳಬೇಕಿದೆ. ಇದಕ್ಕೆ ಸಂಶೋಧನೆ ನಡೆಸುವ ಸಂಸ್ಥೆಗಳ ಸಹಾಯಬೇಕಿದೆ. ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಅತಿ ಹೆಚ್ಚು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಮತ್ತು ಅದಕ್ಕಾಗಿ ಅಪಾರ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ನಿಜವಾದರೆ ನಮ್ಮ ಮಕ್ಕಳ ದಾರುಣ ಭವಿಷ್ಯವನ್ನು ನಾವು ಊಹಿಸಿಕೊಳ್ಳಬಹುದು. ಭಾರತದಲ್ಲಿ ಸುಮಾರು ಎಪ್ಪತ್ತು ಲಕ್ಷ ಜನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ ಒಂದೇ ಒಂದು ಸಾಮಾಜಿಕ ಮಾಧ್ಯಮದ ಒಡೆತನವನ್ನು ನಾವು ಹೊಂದಿಲ್ಲ. ನಿಯಂತ್ರಣ ಬೇರೆ ಇದೆ. ನಾವು ಬ್ರೇಕ್ ಕಿತ್ತುಹಾಕಿದ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ. ಮುಂದೆ ಕಣಿವೆಯೊ, ಸಮುದ್ರವೋ, ಬಟ್ಟಬಯಲೋ ಗೊತ್ತಿಲ್ಲ.
” ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಅತಿ ಹೆಚ್ಚು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಮತ್ತು ಅದಕ್ಕಾಗಿ ಅಪಾರ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿzರೆ. ಇದು ನಿಜವಾದರೆ ನಮ್ಮ ಮಕ್ಕಳ ದಾರುಣ ಭವಿಷ್ಯವನ್ನು ನಾವು ಊಹಿಸಿಕೊಳ್ಳಬಹುದು.”




