ಹೆಚ್.ಎಸ್. ದಿನೇಶ್‌ಕುಮಾರ್
ಚುನಾಯಿತ ಪ್ರತಿನಿಧಿಗಳಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು
ಮೈಸೂರು: ಜವಾಬ್ದಾರಿಯುತ ಹಾಗೂ ಜನರ ಪರ ಆಲೋಚಿಸುವ ಜನಪ್ರತಿನಿಧಿಗಳಿಲ್ಲದಿದ್ದಲ್ಲಿ ಏನೆಲ್ಲಾ ಆಗಬಹುದು ಎಂಬುದಕ್ಕೆ ನೀರಿನ ಕರ ಹೆಚ್ಚಳ ಒಂದು ಉದಾಹರಣೆ. ಮೈಸೂರು ಮಹಾ ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ ಪೌರಾಡಳಿತ ಇಲಾಖೆ ದಿಢೀರ್ ಎಂದು ನೀರಿನ ಕರ ಏರಿಕೆ ಮಾಡಿದೆ.
ಈಗಾಗಲೇ ಅಡುಗೆ ಅನಿಲ ಸಂಕಷ್ಟವನ್ನು ಎದುರಿಸುತ್ತಿರುವ ಜನತೆಗೆ ರಾಜ್ಯ ಸರ್ಕಾರ ಮಂಗಳವಾರ ನೀರಿನ ಕರ ಹೆಚ್ಚಳದ ಶಾಕ್ ನೀಡಿದೆ. ಏ.೧ರಿಂದ ಜಾರಿಗೆ ಬರುವಂತೆ ನಗರದಲ್ಲಿ ನೀರಿನ ಕರ ಹಾಗೂ ಒಳಚರಂಡಿ ಶುಲ್ಕ ಹೆಚ್ಚಳವಾಗುತ್ತಿದೆ.
ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ನೀರಿನಕರ ಏರಿಕೆಯು ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ಸಂಸ್ಥಾನವು ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಎಂದು ವಾಣಿವಿಲಾಸ ನೀರು ಸರಬರಾಜು ಕೇಂದ್ರವನ್ನು ಸ್ಥಾಪಿಸಿತ್ತು.
ಆದರೀಗ ಶುಲ್ಕದ ಹೆಸರಿನಲ್ಲಿ ಸರ್ಕಾರ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದೆ ಎಂದು ಸಾರ್ವಜನಿಕರು ಬೇಸರ ಹೊರಹಾಕುತ್ತಾರೆ. ಕುಡಿಯುವ ನೀರಿಗೆ ಪ್ರತೀ ತಿಂಗಳು ಸಾವಿರಾರು ರೂ. ತೆರುವುದು ಹೇಗೆ ಎಂಬುದು ಅವರ ಚಿಂತೆಯಾಗಿದೆ. ನಗರಪಾಲಿಕೆ ಸದಸ್ಯರ ಆಡಳಿತಾವಧಿ ಮುಗಿದು ಮೂರು ವರ್ಷಗಳಾದವು. ಸರ್ಕಾರ ಚುನಾವಣೆಯನ್ನೇ ನಡೆಸಿಲ್ಲ. ಸರ್ಕಾರಕ್ಕೆ ಇದರ ಅಗತ್ಯವೂ ಇಲ್ಲದಂತೆ ಕಾಣುತ್ತದೆ. ಹೀಗಾಗಿ ಯಾರ ವಿರೋಧವೂ ಇಲ್ಲದೆ ನೀರಿನ ಕರ ಶೇ.೨೫ರಷ್ಟು ಏರಿಕೆ ಮಾಡಲಾಗಿದೆ.
ಒಪ್ಪಿರಲಿಲ್ಲ: ೨೦೨೨ನೇ ಸಾಲಿನಲ್ಲಿ ಬಿಜೆಪಿಯ ಶಿವಕುಮಾರ್ ಅವರು ಮಹಾಪೌರರಾಗಿದ್ದಾಗ ಅಂದು ನಗರಪಾಲಿಕೆ ಆಯುಕ್ತರಾಗಿದ್ದ ಲಕ್ಷಿ ಕಾಂತರೆಡ್ಡಿ ಅವರು ನೀರಿನ ಕರ ಹೆಚ್ಚಳದ ಪ್ರಸ್ತಾವನೆ ಇಟ್ಟಿದ್ದರು.
ಈ ಬಗ್ಗೆ ಕೌನ್ಸಿಲ್‌ನಲ್ಲಿ ಸಾಕಷ್ಟು ಚರ್ಚೆಗಳಾಗಿ ನೀರಿನ ಕರವನ್ನು ಸಮರ್ಪಕವಾಗಿ ವಸೂಲುಮಾಡಿದಲ್ಲಿ ಕೋಟ್ಯಂತರ ರೂ. ಹರಿದುಬರುತ್ತದೆ. ಹೀಗಿರುವಾಗ ಅಧಿಕಾರಿಗಳು ಹಣ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಂದಿನ ನಗರಪಾಲಿಕೆ ಸದಸ್ಯರು ಹೇಳಿದ್ದರು. ಇದರಿಂದಾಗಿ ನೀರಿನ ದರ ಹೆಚ್ಚಳದ ಪ್ರಸ್ತಾವನೆಯನ್ನು ಸದಸ್ಯರುಗಳು ಪಕ್ಷಾತೀತವಾಗಿ ತಿರಸ್ಕರಿಸಿದ್ದರು. ಇದಕ್ಕೂ ಮುನ್ನ ನಾಲ್ಕು ಅಥವಾ ಐದು ವರ್ಷಗಳಿಗೆ ಒಮ್ಮೆ ಶೇ.೫ರಷ್ಟು ನೀರಿನ ಕರವನ್ನು ಮಾತ್ರ ಹೆಚ್ಚಳ ಮಾಡಲಾಗುತ್ತಿತ್ತು. ಅದರೀಗ ಯಾರನ್ನೂ ಕೇಳದೆ,ಯಾರೊಂದಿಗೂ ಚರ್ಚೆ ನಡೆಸದೆ ನೀರಿನ ಕರವನ್ನು ಏಕಾಏಕಿ ಏರಿಸಿರುವುದು ನಗರದ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಲ್ಲೂ ಬೇಸರ ಮೂಡುವಂತೆ ಮಾಡಿದೆ.
೨೧೦ ಕೋಟಿ ರೂ. ಬಾಕಿ: ಇದೇ ವೇಳೆ ನಗರದಾದ್ಯಂತ ನೀರಿನ ಬಿಲ್ ಬರೋಬ್ಬರಿ ೨೧೦ ಕೋಟಿ ರೂ. ಬಾಕಿ ಇದೆ. ಇದರ ವಸೂಲಾತಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಇದರ ನಡುವೆ ಪ್ರಸಕ್ತ ವರ್ಷ ೮೨ ಕೋಟಿ ರೂ. ನೀರಿನ ಕರ ವಸೂಲಾಗಿದೆ.
” ನೀರಿನ ಕರವು ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಕೌನ್ಸಿಲ್ ಸಭೆಗಳಲ್ಲಿ ಅಪರೂಪಕ್ಕೆ ನೀರಿನ ಕರವನ್ನು ಶೇ.೫ರಷ್ಟನ್ನು ಮಾತ್ರ ಹೆಚ್ಚಳ ಮಾಡಲಾಗುತ್ತಿತ್ತು. ಶೇ. ೬೦ ರಷ್ಟು ಮಂದಿ ನೀರಿನ ಬಿಲ್ ಅನ್ನು ಪ್ರಾಮಾಣಿಕವಾಗಿ ಕಟ್ಟುತ್ತಿದ್ದಾರೆ. ಅಂತಹವರಿಗೆ ಮತ್ತೆ ಹೊರೆ ಮಾಡಬಾರದು. ನೀರಿನ ಕರ ಪಾವತಿಸದವರನ್ನು ಪತ್ತೆ ಹಚ್ಚಿ ಹಣ ವಸೂಲು ಮಾಡಬೇಕು. ಹಳೆಯ ವಸೂಲಾತಿಗೂ ಕ್ರಮ ತೆಗೆದುಕೊಳ್ಳಬೇಕು.”
-ಎಸ್.ಬಿ.ಎಂ. ಮಂಜು, ನಗರಪಾಲಿಕೆ ಮಾಜಿ ಸದಸ್ಯರು
” ಮೂಲ ಸೌಕರ್ಯಗಳಲ್ಲಿ ನೀರು ಪ್ರಮುಖವಾದುದು. ನೀರನ್ನು ಉಚಿತವಾಗಿ ಸರಬರಾಜು ಮಾಡಬೇಕು ಎಂದು ಯಾರೂ ಬಯಸುವುದಿಲ್ಲ. ಆದರೆ, ನೀರಿನ ಕರವನ್ನು ಜನರಿಗೆ ಹೊರೆಯಾಗದ ರೀತಿಯಲ್ಲಿ ಸರ್ಕಾರ ನಿಗದಿಪಡಿಸಬೇಕು. ಕೆಲ ಬಡಾವಣೆಗಳಲ್ಲಿ ರಸ್ತೆ, ವಾಹನಗಳನ್ನು ತೊಳೆಯಲು, ಹಸುಗಳನ್ನು ತೊಳೆಯಲು ನೀರನ್ನು ಬಳಸುತ್ತಾರೆ. ಅಂಥವುಗಳನ್ನು ಪತ್ತೆಹಚ್ಚಿ ಹೆಚ್ಚಿನ ಹಣ ವಸೂಲು ಮಾಡಬೇಕು.”
-ರಂಜು ರಾಘವೇಂದ್ರ, ವಿಜಯನಗರ ನಿವಾಸಿ
” ರಾಜ್ಯ ಸರ್ಕಾರ ಹಣಕಾಸಿನ ಮುಗ್ಗಟ್ಟಿನಿಂದ ತತ್ತರಿಸುತ್ತಿದೆ. ಹಣ ಯಾವ ಮೂಲದಲ್ಲಿ ಸಿಗುತ್ತದೆ ಎಂಬ ಯೋಚನೆಯಲ್ಲಿಯೇ ಸರ್ಕಾರವಿದೆ. ಹೀಗಾಗಿ ಯಾರೊಂದಿಗೂ ಚರ್ಚಿಸದೆ ಏಕಾಏಕೀ ನೀರಿನ ಕರ ಏರಿಕೆ ಮಾಡಿದೆ. ನೂರು ವರ್ಷಗಳ ಹಿಂದೆಯೇ ಕೃಷ್ಣರಾಜ ಒಡೆಯರ್ ಅವರು ಜನರಿಗೆ ಉಚಿತವಾಗಿ ನೀರು ನೀಡಬೇಕು ಎಂದು ಆಲೋಚಿಸಿದ್ದರು. ಆದರೆ ಇಂದು ಕುಡಿಯುವ ನೀರಿನ ಹೆಸರಿನಲ್ಲಿ ಕೂಡ ಸರ್ಕಾರ ಲೂಟಿ ಮಾಡುತ್ತಿದೆ. ಇದಕ್ಕೆ ಜನರೇ ಉತ್ತರ ನೀಡಬೇಕು.”
-ಶಿವಕುಮಾರ್, ಮಾಜಿ ಮಹಾಪೌರರು
ಶೇ.೫೦ರಷ್ಟು ಮಂದಿ ಕರ ಪಾವತಿಸುತ್ತಿಲ್ಲ:
ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಹೇಳುವಂತೆ, ಇಂದಿಗೂ ಕೂಡ ಹಳೆಯ ಬಡಾವಣೆಗಳಲ್ಲಿ ನೀರಿನ ಕರ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇ.೫೦ ರಷ್ಟು ಮಂದಿ ಮಾತ್ರ ನೀರಿನ ಕರ ಪಾವತಿಸುತ್ತಿದ್ದಾರೆ ಎನ್ನುತ್ತಾರೆ.





