ಮೈಸೂರು: ಅಡುಗೆ ಅನಿಲ ಸಂಕಷ್ಟವನ್ನು ಎದುರಿಸುತ್ತಿರುವ ಜನತೆಗೆ ರಾಜ್ಯ ಸರ್ಕಾರ ನೀರಿನ ದರ ಹೆಚ್ಚಳದ ಶಾಕ್ ನೀಡಿದೆ. ಏ.೧ರಿಂದ ಜಾರಿಗೆ ಬರುವಂತೆ ನಗರದಲ್ಲಿ ನೀರಿನ ದರ ಹಾಗೂ ಒಳಚರಂಡಿ ಶುಲ್ಕ ಹೆಚ್ಚಳವಾಗುತ್ತಿದೆ.
ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಗೃಹ ಬಳಕೆ ನೀರಿನ ದರ ಹಾಗೂ ಒಳ ಚರಂಡಿ ಶುಲ್ಕವನ್ನು ಪೌರಾಡಳಿತ ನಿರ್ದೇಶನಾಲಯದ ಆದೇಶದ ಮೇರೆಗೆ ನಗರ ಪಾಲಿಕೆಯು ಏ.೧ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಿದೆ. ಇದರ ಜೊತೆಗೆ ನೀರಿನ ಒಟ್ಟು ಮೊತ್ತದ ಶೇ.೪೦ರಷ್ಟು ಶುಲ್ಕವನ್ನು ಒಳ ಚರಂಡಿ ಶುಲ್ಕವನ್ನಾಗಿ ಪಾವತಿಸಬೇಕಿದೆ. ಈ ಮುನ್ನ ಒಳಚರಂಡಿ ಶುಲ್ಕ ಶೇ. ೩೦ರಷ್ಟಿತ್ತು. ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಲ್ಲಿ ನೀರಿನ ದರ ಏರಿಕೆಯು ಸಹಜವಾಗಿ ಅಕ್ರೋಶ ಮೂಡಿಸುತ್ತಿದೆ.
ಮೈಸೂರು ಸಂಸ್ಥಾನವು ಜನರಿಗೆ ಉಚಿತವಾಗಿ ನೀರು ನೀಡಬೇಕು ಎಂದು ವಾಣಿವಿಲಾಸ ನೀರು ಸರಬರಾಜು ಕೇಂದ್ರವನ್ನು ಆರಂಭಿಸಿತ್ತು. ಆದರೀಗ ಶುಲ್ಕದ ಹೆಸರಿನಲ್ಲಿ ಸರ್ಕಾರ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದೆ ಎಂದು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ.
ವಾಹನ ಉಪಕರದ ಬರೆ:
ಮೈಸೂರು: ನಗರದಲ್ಲಿ ಮೋಟಾರು ವಾಹನ ಉಪಕರ ಸಂಗ್ರಹ ಮಾಡಲು ನಗರಪಾಲಿಕೆ ತೀರ್ಮಾನಿಸಿದೆ. ಪ್ರಸಕ್ತ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ಪಾವತಿಯ ಜತೆಗೆ, ವಾಹನ ಉಪಕರವನ್ನೂ ಮಾಲೀಕರು ಪಾವತಿಸ ಬೇಕಾಗಿದೆ. ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಮನೆಗಳ ಆಸ್ತಿಯ ಗುರುತಿನ ಸಂಖ್ಯೆಯ ಆಧಾರದ ಮೇಲೆ ದ್ವಿಚಕ್ರವಾಹನಕ್ಕೆ ೧೦೦ ರೂ., ತ್ರಿಚಕ್ರವಾಹನಕ್ಕೆ ೨೦೦ ರೂ. ಹಾಗೂ ನಾಲ್ಕು ಚಕ್ರದ ವಾಹನಕ್ಕೆ ೫೦೦ರೂ. ಸಂಗ್ರಹ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.





