ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ ದಿಂದ ಒಕ್ಕಲೆಬ್ಬಿಸುವ ಭೀತಿ; ಶಾಶ್ವತ ಪರಿಹಾರಕ್ಕೆ ಒತ್ತಾಯ
ಕಾಂಗೀರ ಬೋಪಣ್ಣ
ವಿರಾಜಪೇಟೆ: ಇಲ್ಲಿನ ನೆಹರು ನಗರದ ಬೆಟ್ಟದ ನಿವಾಸಿಗಳಿಗೆ ಮೀಸಲು ಅರಣ್ಯ ಎಂಬ ತೂಗುಗತ್ತಿ ನೇತಾಡುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ನಿವಾಸಿಗಳಲ್ಲಿ ಒಕ್ಕಲೆಬ್ಬಿಸುವ ಭೀತಿಯುಂಟಾಗಿದೆ.
ಈ ವ್ಯಾಪ್ತಿಯ ೧೮. ೨೪ ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆ ಮೀಸಲು ಅರಣ್ಯ ಎಂದು ಘೋಷಿಸಿದ್ದು, ಮೈಸೂರಿನ ವಿಶೇಷ ಅರಣ್ಯ ವಿಭಾಗ ಇಲ್ಲಿನ ೯೫ ಜನರಿಗೆ ಜಾಗ ಖಾಲಿ ಮಾಡಲು ನೋಟಿಸ್ ಜಾರಿ ಮಾಡಿದೆ. ಈ ಕುರಿತು ಪುರಸಭೆಯ ಸದಸ್ಯರು ಮಾಸಿಕ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಜನರ ಹಿತ ಕಾಯುವ ಬಗ್ಗೆ ಚರ್ಚೆ ಮಾಡಿದ್ದಾರೆ. ಜಾಗ ತೆರವುಗೊಳಿಸದಂತೆ ಕ್ರಮ ಕೈಗೊಳ್ಳಲು ನಿರ್ಣಯ ಮಾಡಿದ್ದಾರೆ.
ದುರಂತ ಎಂದರೆ ಈ ಹಿಂದೆ ಮಗ್ಗುಲ ಗ್ರಾಮದಲ್ಲಿನ ಈ ನೆಹರುನಗರ ಬೆಟ್ಟ ಪ್ರದೇಶವೆಂದು ಗುರುತಿಸಿ ಕೊಂಡಿದ್ದರೂ ಪ. ಪಂ. ಆಡಳಿತದಲ್ಲಿತ್ತು. ಈಗ ಪುರಸಭೆ ವ್ಯಾಪ್ತಿಗೆ ಬಂದಿದೆ. ಹಿಂದೆ ೧೯೯೨ರ ರಾಜ್ಯ ಪತ್ರದಲ್ಲಿ ಇಲ್ಲಿನ ಸರ್ವೆ ಸಂ. ೩೦೧/೨೪ರಲ್ಲಿ ೧೮. ೨೪ ಹೆಕ್ಟೇರ್ ಅರಣ್ಯ ಪ್ರದೇಶವನ್ನಾಗಿ ಗುರುತಿಸಿ ಸ್ಥಳೀಯರಿಂದ ಅಹವಾಲು ಸ್ವೀಕರಿಸಲು ಮಡಿಕೇರಿಯಲ್ಲಿ ಟ್ರಿಬ್ಯುನಲ್ ಸ್ಥಾಪಿಸಿ ಇಲ್ಲಿಯ ತೀರ್ಪಿನ ಬಳಿಕ ಆಗಿನ ಮಡಿಕೇರಿ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆಗ ಕಾಂಗ್ರೆಸ್ ಆಡಳಿತವಿತ್ತು. ಯಾವ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ತೋರಿದ್ದರಿಂದ ಇಂದು ಜನ ಸಂಕಷ್ಟ ಅನುಭವಿಸುವಂತಾಗಿದೆ ಎಂಬುದು ಸ್ಥಳೀಯರ ಆರೋಪ.
ಅಂದಿನಿಂದ ಇಲ್ಲಿಯವರೆಗೆ ಬೆಟ್ಟದ ಜಾಗದಲ್ಲಿ ನೆಲೆನಿಂತವರಿಗೆ ಇದು ಅರಣ್ಯ ಪ್ರದೇಶ ಎಂಬ ಬಗ್ಗೆ ತಿಳಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಈ ಬಗ್ಗೆ ಹೋರಾಟವನ್ನೂ ಮಾಡಲಿಲ್ಲ. ವಿಷಯ ಮುಚ್ಚಿಟ್ಟು ರಾಜಕೀಯ ಲಾಭ ಮಾಡಿದ್ದರಿಂದಲೇ ಇಲ್ಲಿನ ನಿವಾಸಿಗಳಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಅದನ್ನು ಅರಣ್ಯ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಜನರಿಗೆ ಆತಂಕ ಬೇಡ. ನಾವು ಅವರಿಗೆ ಮೂಲ ಸೌಕರ್ಯ ನೀಡಿದ್ದೇವೆ ಎಂದೆಲ್ಲಾ ಪ. ಪಂ. ಮಾಸಿಕ ಸಭೆಯಲ್ಲಿ ಭರವಸೆ ನೀಡಲಾಯಿತು. ಆದರೆ ನಿರ್ಣಯವಾದರೆ ಸಾಲದು. ಶಾಸಕರು ಶೀಘ್ರವಾಗಿ ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳ, ಅರಣ್ಯ ಅಧಿಕಾರಿ ಗಳ ಸಭೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮೀಸಲು ಅರಣ್ಯವಾಗಿರುವುದರಿಂದ ತೆರವು ಅನಿವಾರ್ಯವಾದರೆ ಮೊದಲು ಅವರಿಗೆ ಪರ್ಯಾಯ ವ್ಯವಸ್ಥೆ ಆಗಬೇಕು. ಆದರೆ ಇಲ್ಲಿ ಪುನರ್ವಸತಿಯೇ ಗಗನ ಕುಸುಮ.
ಏಕೆಂದರೆ ಆರೇಳು ವರ್ಷವಾದರೂ ಮಲೆತಿರಿಕೆ ಬೆಟ್ಟ ದವರಿಗೆ ವಸತಿ ಕಲ್ಪಿಸಲು ಯಾರಿಗೂ ಸಾಧ್ಯವಾಗಿಲ್ಲ. ಆದರೂ ನೆಹರುನಗರ ವಿಚಾರದಲ್ಲಿ ಕಾನೂನು ತಜ್ಞರೂ ಆಗಿರುವ ಶಾಸಕರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸದಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ.
ಈ ಹಿಂದೆ ೧೯೯೨ರಲ್ಲಿ ಇದನ್ನು ಮೀಸಲು ಅರಣ್ಯವಾಗಿ ಘೋಷಿಸಲಾಗಿದೆ. ಆಗ ಮಾಧ್ಯಮ ಪ್ರಚಾರ ಇಲ್ಲದ ಕಾರಣ ಜನರ ಅರಿವಿಗೆ ಬಂದಿರಲಿಲ್ಲ. ಇಲ್ಲಿ ಸುಮಾರು ೭೦ ವರ್ಷದಿಂದ ಜನ ವಾಸಿಸುತ್ತಿದ್ದು, ಇಂದಿಗೂ ಬಹುತೇಕರು ಕೂಲಿ ಕಾರ್ಮಿಕರಾಗಿದ್ದಾರೆ. ಇಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಬೇಕಾದ ಅವಶ್ಯಕತೆ ಇದೆ.
ಮಹಮ್ಮದ್ ರಫಿ, ಪುರಸಭಾ ಸದಸ್ಯರು
ಇಲ್ಲಿನ ಬಹುತೇಕ ಕುಟುಂಬಗಳು ಬಡವರಾಗಿದ್ದು, ಇವರಿಗೆ ಇಲ್ಲಿ ಬಿಟ್ಟರೆ ಎಲ್ಲಿಯೂ ನೆಲೆ ಇಲ್ಲ. ಪುರಸಭೆ ಪ್ರತಿನಿಧಿಗಳ ಗಮನಕ್ಕೆ ತಾರದೆ ಇಲಾಖೆ ನೋಟಿಸ್ ನೀಡಿ ಜನರನ್ನು ಹೆದರಿಸುವುದು ಖಂಡನೀಯ. ಆದ್ದರಿಂದ ಮುಂದೆ ಶಾಸಕರು ಮಧ್ಯಪ್ರವೇಶ ಮಾಡಿ ಅರಣ್ಯಾಧಿಕಾರಿಗಳು, ಪುರಸಭೆ ಸದಸ್ಯರನ್ನು ಒಳಗೊಂಡ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ.
ಅಗಸ್ಟಿನ್ ಬೆನ್ನಿ, ಸ್ಥಳೀಯರು, ಪುರಸಭಾ ಸದಸ್ಯರು
ಕಳೆದ ಪುರಸಭೆ ಮಾಸಿಕ ಸಭೆಯಲ್ಲಿ ಸದಸ್ಯರು ವಿಚಾರ ಪ್ರಸ್ತಾಪಿಸಿದಾಗ ನಡೆದ ಚರ್ಚೆಯಲ್ಲಿ ಇಲ್ಲಿನ ನಿವಾಸಿಗಳನ್ನು ತೆರವುಗೊಳಿಸದಂತೆ ಹಾಗೂ ಮೀಸಲು ಅರಣ್ಯ ಆದೇಶ ರದ್ದು ಮಾಡುವಂತೆ ನಿರ್ಣಯ ಮಾಡಲಾಗಿದೆ. ಮೀಸಲು ಅರಣ್ಯವಾದರೂ ಈಗ ಅನೇಕ ವರ್ಷಗಳಿಂದ ಜನ ವಾಸವಾಗಿರುವ ಕಾರಣ ಅದನ್ನು ಕೈಬಿಡಬಹುದು. ಹೀಗೆ ಮಾಡಿರುವ ಉದಾಹರಣೆ ಇದೆ. ಶಾಸಕರ ಮೂಲಕ ಇಲಾಖೆಯ ಮೇಲಾಧಿಕಾರಿಗೆ ಮನವಿ ಸಲ್ಲಿಸಿ ಮೀಸಲು ರದ್ದು ಪಡಿಸುವಂತೆ ಕೋರಬಹುದು.
ಚಂದ್ರಕುಮಾರ್, ಪುರಸಭೆ ಮುಖ್ಯಧಿಕಾರಿ