Mysore
22
light rain

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ವಿರಾಜಪೇಟೆ ಪಟ್ಟಣ ಅಭಿವೃದ್ಧಿಗೆ ಬೇಕಿದೆ ವೇಗ

ಕಾಂಗೀರ ಬೋಪಣ್ಣ

ಸಮರ್ಪಕವಾಗಿ ಅನುದಾನ ಬಳಸಿಕೊಳ್ಳಲು ಸಾರ್ವಜನಿಕರ ಆಗ್ರಹ

ವಿರಾಜಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಬೇಕೆನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮುಖ್ಯ ರಸ್ತೆಯ ಅಗಲೀಕರಣದ ಮೂಲಕ ಸುಗಮ ವಾಹನ ಸಂಚಾರ, ಉತ್ತಮ ರಸ್ತೆ, ಪಾಳುಬಿದ್ದಿರುವ ಮಾರುಕಟ್ಟೆ ಸಂಕೀರ್ಣದ ಅಭಿವೃದ್ಧಿ, ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳು, ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ಹಾಗೂ ವಾರ್ಡ್‌ಗಳ ಸಮಗ್ರ ಅಭಿವೃದ್ಧಿ ಸೇರಿದಂತೆ ಹಲವು ನಿರೀಕ್ಷೆಗಳನ್ನು ಪಟ್ಟಣದ ಜನರು ಹೊಂದಿದ್ದರು. ಆದರೆ ಮೂರು ವರ್ಷ ಕಳೆದರೂ ಹಲವು ಕಾಮಗಾರಿಗಳು ಪೂರ್ಣಗೊಳ್ಳದೆ ಪಟ್ಟಣದ ಅಭಿವೃದ್ಧಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪಂಜರುಪೇಟೆಯ ಪಾದಚಾರಿ ಮಾರ್ಗವೂ ಸಮರ್ಪಕವಾಗಿಲ್ಲ. ಇರುವ ರಸ್ತೆಯೇ ಮತ್ತಷ್ಟು ಕಿರಿದಾಗಿರುವುದರಿಂದ ವಾಹನ ಸಂಚಾರದ ನಡುವೆ ಸಾರ್ವಜನಿಕರು ಸಂಚರಿಸುವಂತಾಗಿದೆ. ಮುಖ್ಯ ರಸ್ತೆಯ ಗಡಿಯಾರ ಕಂಬದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಇರುವ ಪಾದಚಾರಿ ಮಾರ್ಗದಲ್ಲಿ ಹಲವರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ ಗಡಿಯಾರ ಕಂಬದಿಂದ ದೊಡ್ಡಟ್ಟಿ ಚೌಕಿವರೆಗೆ ಸಮರ್ಪಕ ಪಾದಚಾರಿ ಮಾರ್ಗ ಇಲ್ಲದಿರು ವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಉತ್ತಮ ಸ್ಥಿತಿಯಲ್ಲಿದ್ದ ಪಟ್ಟಣದ ಹಲವು ರಸ್ತೆಗಳನ್ನು ನೀರಿನ ಕೊಳವೆ ಅಳವಡಿಕೆಗಾಗಿ ಅಗೆದು ಹಾಕಲಾಗಿದ್ದು, ತಿಂಗಳುಗಳು ಕಳೆದರೂ ಸಮರ್ಪಕವಾಗಿ ದುರಸ್ತಿ ಮಾಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಅಂಬೇಡ್ಕರ್ ಭವನ ರಸ್ತೆ, ಸುಣ್ಣದ ಬೀದಿ ರಸ್ತೆ, ಪಾದಚಾರಿ ಮಾರ್ಗಗಳು ಹಾಗೂ ವಿವಿಧ ವಾರ್ಡ್‌ಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗಳ ಬಗ್ಗೆಯೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಬಳಿಯ ಶಿಥಿಲಗೊಂಡಿರುವ ವಾಣಿಜ್ಯ ಮಳಿಗೆಗಳು ಹಾಗೂ ಮಾರುಕಟ್ಟೆ ಸಂಕೀರ್ಣದ ಕಟ್ಟಡದ ಸ್ಥಿತಿಯೂ ಶೋಚನೀಯವಾಗಿದೆ.

ದಶಕಗಳಿಂದ ಬಳಕೆಯಲ್ಲಿರುವ ಕಟ್ಟಡ ಕುಸಿದು ಬೀಳುವ ಹಂತದಲ್ಲಿದ್ದರೂ ಇದುವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಇದರ ನಡುವೆ ಸುಭದ್ರವಾಗಿರುವ ಪಾರಂಪರಿಕ ಪುರಸಭೆ ಕಟ್ಟಡವನ್ನು ಕೆಡವುವ ಬದಲು, ಪಟ್ಟಣಕ್ಕೆ ಆದಾಯ ತರು ವಂತಹ ಸುಸಜ್ಜಿತ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಗೋಣಿಕೊಪ್ಪ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳನ್ನುಒಳಗೊಂಡಿರುವ ವಿರಾಜಪೇಟೆಗೆ ಬರುವ ಗ್ರಾಹಕರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಗತ್ಯ ವಾಣಿಜ್ಯ ಮಳಿಗೆಗಳ ಕೊರತೆಯಿಂದ ಗೋಣಿಕೊಪ್ಪದತ್ತ ಮುಖ ಮಾಡುತ್ತಿದ್ದಾರೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಕೆಲ ವರ್ತಕರು ಬೆಳಿಗ್ಗೆ ತಮ್ಮ ವಾಹನಗಳನ್ನು ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಸಂಜೆವರೆಗೆ ಬಳಸಿಕೊಳ್ಳುತ್ತಿದ್ದಾರೆ. ಪಾದಚಾರಿ ಮಾರ್ಗಗಳಲ್ಲಿಯೇ ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

” ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಮುಖ್ಯ ರಸ್ತೆಯಲ್ಲಿ ಸಮರ್ಪಕ ಪಾದಚಾರಿ ಮಾರ್ಗವಿಲ್ಲದೆ ವಾಹನ ದಟ್ಟಣೆಯ ನಡುವೆ ಜನರು ಸಂಚರಿಸುವಂತಾಗಿದೆ. ಕೊಳಚೆ ನೀರು ಶುದ್ಧೀಕರಣಕ್ಕಾಗಿ ಬೇಟೋಳಿಯಲ್ಲಿ ಜಾಗ ಖರೀದಿಸಲು ೮೦ ಲಕ್ಷ ರೂ. ನೀಡಲಾಗಿದೆ. ಆದರೆ ಅದು ಪ್ರವಾಹ ಬರುವ ಸ್ಥಳವಾಗಿದೆ. ಕಳಪೆ ಕಾಮಗಾರಿ ನಡೆದರೆ ಮತ್ತೆ ಮತ್ತೆ ಹಣ ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು.”

-ಮಾಳೇಟಿರ ಕಾಳಯ್ಯ, ಸಾಮಾಜಿಕ ಕಾರ್ಯಕರ್ತ

” ಅನುದಾನ ಲಭ್ಯವಾದಂತೆ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ರಸ್ತೆ ಹಾಗೂ ಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ದೂರುಗಳು ಬಂದಲ್ಲಿ ಪರಿಶೀಲಿಸಿ, ಅಗತ್ಯವಿದ್ದರೆ ಚರಂಡಿಯನ್ನು ತೆರವುಗೊಳಿಸಿ ಮರು ಕಾಮಗಾರಿ ಮಾಡಲಾಗುತ್ತದೆ. ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ನೀರಿನ ಕೊಳವೆ ಅಳವಡಿಕೆಯಿಂದ ಹಾಳಾಗಿರುವ ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಉಳಿದ ಕಾಮಗಾರಿಗಳಿಗೆ ಶಾಸಕರು ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.”

-ಪಟ್ಟಚರುವಂಡ ನಾಚಪ್ಪ, ಪುರಸಭೆ ಮುಖ್ಯಾಧಿಕಾರಿ

 

 

Tags:
error: Content is protected !!