Mysore
22
light rain

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ಗ್ರಾಮಗಳ ಕೂಡುವಿಕೆಗೆ ಸಹಕಾರಿ ಕೂಡನಹಳ್ಳಿ ಸೇತುವೆ

ಎಂ.ಕೇಶವ

ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದ ಸಣ್ಣ ಸೇತುವೆ

ಪರವೂರಿಗೆ ತೆರಳಲು ಸುಮಾರು ೧೫ ಕಿ.ಮೀ. ಬಳಸುವುದು ತಪ್ಪಿದೆ

ನೂತನ ಸೇತುವೆ ನಿರ್ಮಾಣದ ಮೂಲಕ ಸಮಸ್ಯೆ ನಿವಾರಣೆ 

ಮೈಸೂರು: ಮಳೆಗಾಲ ಬಂತೆಂದರೆ ಪ್ರವಾಹ ಭೀತಿ… ಅನತಿ ದೂರದಲ್ಲಿರುವ ಕೆಲ ಗ್ರಾಮಗಳಿಗ ಸಂಪರ್ಕವೇ ಕಡಿದು ಹೋಗುವ ಆತಂಕ… ಸಣ್ಣದೊಂದು ಸೇತುವೆ ಇದ್ದರೂ ಅಂತಹ ಪ್ರಯೋಜನ ಇರಲಿಲ್ಲ. ಇದೀಗ ನೂತನ ಬೃಹತ್ ಸೇತುವೆ ನಿರ್ಮಾಣದ ಮೂಲಕ ಆ ಸಮಸ್ಯೆ ನಿವಾರಣೆಯಾಗಿದೆ.

ಮೈಸೂರು ತಾಲ್ಲೂಕಿನ ಕೂಡನಹಳ್ಳಿ ಗ್ರಾಮಸ್ಥರು, ಮಳೆ ಜೋರಾಗಿ ಬಂದು ಸಣ್ಣ ಸೇತುವೆ ಮುಳುಗಿದರೆ, ೧೫ ಕಿ.ಮೀ. ಬಳಸಿಕೊಂಡು ಬೇರೆ ಗ್ರಾಮಕ್ಕೆ ತೆರಳಬೇಕಾಗಿತ್ತು ಹಾಗೂ ವಾಪಸ್ ಆಗಬೇಕಿತ್ತು. ಆದರೆ ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆಯು, ಗ್ರಾಮಸ್ಥರಿಗೆ ಪ್ರವಾಹದ ಭೀತಿಯನ್ನು ತಡೆಯುವುದರ ಜೊತೆಯಲ್ಲಿ ಭಾರಿ ವಾಹನಗಳು ಕೂಡ ಸುಲಭವಾಗಿ ಸಂಚಾರ ಮಾಡಲು ಸಹಕಾರಿಯಾಗಿದೆ.

ಮುಂಗಾರು ಮಳೆ ಶುರುವಾದರೆ ಹತ್ತಾರು ಗ್ರಾಮಗಳ ಗ್ರಾಮಸ್ಥರು, ಜೀವ ಭಯದಿಂದ ಸಣ್ಣ ಸೇತುವೆಯಲ್ಲಿ ಸಂಚಾರ ಮಾಡಬೇಕಿತ್ತು. ಭಯದ ವಾತಾವರಣವನ್ನು ನೂತನ ಸೇತುವೆ ತಪ್ಪಿಸಿದೆ. ಮೈಸೂರು ತಾಲ್ಲೂಕಿನ ಕೂಡನಹಳ್ಳಿ ಗ್ರಾಮದಲ್ಲಿ ಸುಮಾರು ೫೦ ವರ್ಷಗಳಿಂದ ಸಣ್ಣ ಸೇತುವೆಯಲ್ಲಿಯೇ ಸಂಚಾರ ಮಾಡಬೇಕಿತ್ತು. ಮಳೆಗಾಲ ಬಂದರಂತೂ, ಈ ಗ್ರಾಮದಿಂದ ಬೇರೆ ಗ್ರಾಮಗಳಿಗೆ ಹೋಗಲು, ಬೇರೆ ಗ್ರಾಮಗಳಿಂದ ಇಲ್ಲಿಗೆ ಬರಲು ೧೫ ಕಿ.ಮೀ.ದೂರ ಪ್ರಯಾಣ ಮಾಡಬೇಕಾಗಿತ್ತು.

ಕೂಡನಹಳ್ಳಿಯಿಂದ ಕೋಚನಹಳ್ಳಿ, ಅಡನಹಳ್ಳಿ, ಕಡಕೊಳ, ಇಮ್ಮಾವು, ಹುಳಿಮಾವು, ಹುಳಿಮಾವುಹುಂಡಿ, ಅಡಹಳ್ಳಿ ಕೈಗಾರಿಕಾ ಪ್ರದೇಶ, ಕಡಕೊಳ ಕೈಗಾರಿಕಾ ಪ್ರದೇಶ, ಹೆಬ್ಯಾ, ಸುತ್ತಮುತ್ತಲಿನ ಪ್ರದೇಶಕ್ಕೆ ನಿತ್ಯ ಸಾವಿರಾರು ಜನರು, ಹೋಗಿ ಬರಲು ಈ ಸಣ್ಣ ಸೇತುವೆ ಆಧಾರವಾಗಿತ್ತು.

ಅಲ್ಲದೇ, ಮೈಸೂರು ನಗರದಿಂದ ೧೨ ಕಿ.ಮೀ. ದೂರದಲ್ಲಿರುವ ಕೂಡನಹಳ್ಳಿಗೆ, ಚಾಮುಂಡಿಬೆಟ್ಟದ ತಪ್ಪಲಿನ ನಿವಾಸಿಗಳು, ಹೊಸಹುಂಡಿ ಗ್ರಾಮ, ಬಂಡಿಪಾಳ್ಯ ಗ್ರಾಮ, ಚಿಕ್ಕಯ್ಯನಹುಂಡಿ ಗ್ರಾಮದವರು, ಮಾರಶೆಟ್ಟಿಹಳ್ಳಿ, ಉತ್ತನಹಳ್ಳಿ, ಸರಕಾರಿ ಉತ್ತನಹಳ್ಳಿ, ದೇವಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಣ್ಣ ಸೇತುವೆಯನ್ನು ಅವಲಂಬಿಸಿದ್ದರು. ಆದರೆ, ಎರಡು ತಿಂಗಳು ಮುಂಗಾರು ಮಳೆ ಹಿಡಿದರೆ, ಗ್ರಾಮಸ್ಥರು ಬಳಸಿಕೊಂಡು ಕೂಡನಹಳ್ಳಿಗೆ ಬರಬೇಕಿತ್ತು. ಇದರಿಂದ ೫೦ ವರ್ಷಗಳಿಂದ ಕೂಡನಹಳ್ಳಿಮ ಮಾರ್ಗವಾಗಿ ಬೇರೆ ಗ್ರಾಮಗಳಿಗೆ ತೆರಳಲು ಸಾಕಷ್ಟು ತೊಂದರೆಪಡುತ್ತಿದ್ದರು. ಆಟೋ, ಕಾರು, ಬೈಕ, ಎತ್ತಿನಗಾಡಿಗಳಲ್ಲಿ ಬಹಳ ಜಾಗರೂಕತೆಯಿಂದ ಹೋಗಬೇಕಿತ್ತು.

ಇದರಿಂದ ಬಹಳಷ್ಟು ಮನನೊಂದಿದ್ದ ಹಲವು ಗ್ರಾಮಸ್ಥರು, ವರುಣ ಕ್ಷೇತ್ರ ಪ್ರತಿನಿಽಸುತ್ತಿರುವ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಮನವಿಗೆ ಸ್ಪಂದಿಸಿದ ಯತೀಂದ್ರ ಅವರು, ವರುಣ ವಿಭಾಗದ ಲೋಕೋಪಯೋಗಿ ಇಂಜಿನಿಯರ್‌ಗಳನ್ನು ಕರೆಸಿ, ಸೇತುವೆ ನಿರ್ಮಾಣಕ್ಕೆ ಸೂಚನೆ ನೀಡಿದರು.

೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಕೂಡನಹಳ್ಳಿ ಗ್ರಾಮದಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ೨೫ ಅಡಿ ಉದ್ದ, ೨೦ ಅಡಿ ಅಗಲದ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶುರುವಾದ ಒಂದು ವರ್ಷದೊಳಗೆ ಮುಗಿಸಿದ್ದರಿಂದ ಹಲವು ಗ್ರಾಮಸ್ಥರಿಗೆ ನೆಮ್ಮದಿ ತಂದಿದೆ. ಈಗ ಕಾರು, ಬಸ, ಲಾರಿ ಬೃಹತ್ ಗಾತ್ರದ ವಾಹನಗಳು ಸುಲಭವಾಗಿ ಸಂಚಾರ ಮಾಡುತ್ತವೆ.

” ೫೦ ವರ್ಷಗಳಿಂದ ಇದ್ದ ಸಣ್ಣ ಸೇತುವೆಯಲ್ಲಿ ಎತ್ತಿನಗಾಡಿ, ಬೈಕ್, ಆಟೋಗಳಲ್ಲಿ ಮಾತ್ರ ಸಂಚಾರ ಮಾಡಬೇಕಿತ್ತು. ಕಾರು, ಬಸ್, ಲಾರಿಗಳು ಬರಬೇಕಾದರೆ ಬಳಸಿಕೊಂಡ ಬರಬೇಕಿತ್ತು. ಇದರ ಬಗ್ಗೆ ನಮ್ಮೂರಿನವರು ಯತೀಂದ್ರ ಸಿದ್ದರಾಮಯ್ಯರ ಗಮನಕ್ಕೆ ತಂದಾಗ, ನೂತನ ಸೇತುವೆ ನಿರ್ಮಾಣ ಮಾಡಿಸಿ, ಹತ್ತಾರು ಗ್ರಾಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.”

ಚಿನ್ನಸ್ವಾಮಿ, ಕೂಡನಹಳ್ಳಿ ನಿವಾಸಿ

” ಜೋರು ಮಳೆ ಬಂದು ಪ್ರವಾಹದ ಸ್ಥಿತಿ ನಿರ್ಮಾಣವಾದಾಗ, ಹತ್ತಾರು ಗ್ರಾಮಗಳಿಗೆ ಬಳಸಿಕೊಂಡು ಹೋಗಬೇಕಿತ್ತು. ವಾಹನಗಳು ಕೂಡ ಸಂಚಾರ ಮಾಡುವುದು ಕಷ್ಟವಾಗುತ್ತಿತ್ತು. ಆದರೀಗ ಎರಡು ತಿಂಗಳುಗಳ ಹಿಂದೆ ಸೇತುವೆ ಪೂರ್ಣಗೊಂಡಿದೆ. ಭಾರಿ ವಾಹನಗಳು ಸುಲಭವಾಗಿ ಸಂಚಾರ ಮಾಡುತ್ತಿವೆ. ಇದರಿಂದ ಗ್ರಾಮಗಳಿಗೆ ನೆಮ್ಮದಿ ತಂದಿದೆ.”

ಮಲ್ಲೇಶ, ಕೂಡನಹಳ್ಳಿ ನಿವಾಸಿ

” ೩ ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಮೊದಲು ಸಣ್ಣ ಸೇತುವೆ ಇತ್ತು. ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಆದರೀಗ ಬೃಹತ್ ವಾಹನಗಳು ಸುಲಭವಾಗಿ ಸಂಚಾರ ಮಾಡುತ್ತಿವೆ.ʼ

ಚಂದ್ರಮೋಹನ್, ಇಂಜಿನಿಯರ್

 

 

Tags:
error: Content is protected !!