Mysore
14
broken clouds

Social Media

ಶನಿವಾರ, 31 ಜನವರಿ 2026
Light
Dark

ವಿಡಿಯೋ, ಪಿಡಿಎಫ್ ಭಾಷಾಂತರಿಸುವ ‘ಕ್ವಿಕ್ ಆಪ್’ 

ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಆಲೋಚನೆ ಗಳಲ್ಲಿಯೂ ಹೊಸ ಹೊಳಹುಗಳು ಮೂಡುತ್ತಿವೆ. ಇದಲ್ಲದೇ ಯಾವುದೋ ಭಾಷೆ, ದೇಶದ ವಿಚಾರಗಳನ್ನು ಕುಳಿತಲ್ಲೇ ತಿಳಿದುಕೊಳ್ಳುವ ಸಾಮರ್ಥ್ಯದ ತಂತ್ರಜ್ಞಾನದ ಸಂಶೋಧನೆಯೂ ನಡೆದಿದೆ. ಅದಕ್ಕೂ ಮಿಗಿಲಾಗಿ ಬೇರೊಂದು ಭಾಷೆಯ ವಿಡಿಯೋ, ಪಿಡಿಎಫ್ ಫೈಲ್‌ಗಳನ್ನು ಒಮ್ಮೆಲೇ ನಮಗೆ ಬೇಕಾದ ಭಾಷೆಯಲ್ಲಿ ಕ್ಷಣಾರ್ಧದಲ್ಲಿ ಧ್ವನಿ ಮತ್ತು ಬರಹದ ರೂಪದಲ್ಲಿ ಅನುವಾದಿಸಿ ನೋಡಬಹುದಾದ, ಕೇಳಬಹುದಾದ ತಂತ್ರಜ್ಞಾನದ ಆವಿಷ್ಕಾರವನ್ನು ಮೈಸೂರಿನ ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಅರವಿಂದ ಎಸ್.ಗುಡಿ, ಡಿ.ಎಸ್.ಬಿಂದುಶ್ರೀ, ಕೆ.ಚೇತನ್, ಎಂ.ಆರ್.ಹರ್ಷ, ಎಸ್.ಮಂಜುನಾಥ್ ಹಾಗೂ ವಿಭಾಗದ ಪ್ರಾಧ್ಯಾಪಕರಾದ ರುಮಾನ ಅಂಜುಂ ಅವರು ಸೇರಿ ಕೃತಕ ಬುದ್ಧಿಮತ್ತೆ ಆಧಾರಿತ ‘ಕ್ವಿಕ್ ಆಪ್’ ಅನ್ನು ಆವಿಷ್ಕರಿಸಿದ್ದಾರೆ.

ಈ ಆವಿಷ್ಕಾರದ ಮಾದರಿಯು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಕೊಡಿಕಾನ್ ೪.೦(ಕೆಒಡಿಐಕೆಒಎನ್) ಸ್ಪರ್ಧೆಯಲ್ಲಿ ಅತ್ಯುತ್ತಮ ೧೦ ಮಾದರಿಗಳಲ್ಲಿ ಒಂದಾಗಿ ಆಯ್ಕೆಯಾಗಿದೆ ಹಾಗೂ ಬೆಂಗಳೂರು ಆರ್‌ವಿ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ಐಇಇಇ-ಸಸ್ಟೈನ್‌ಫಿಯೆಸ್ಟಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನಗಳಿಸಿದೆ.

ಇದನ್ನು ಓದಿ: ಹೊಸದಿಕ್ಕಿನತ್ತ ಚಲಿಸುತ್ತಿದೆ ರಾಜ್ಯ ರಾಜಕಾರಣ

ಕ್ವಿಕ್‌ಆಪ್ ಸುತ್ತಮುತ್ತ: ಇವತ್ತಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಹಲವು ಬಗೆಯ ಕಲಿಕೆಗೆ, ವಿಷಯ ಗ್ರಹಿಕೆಗಾಗಿ ಹಲವಾರು ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳು, ಗೂಗಲ್‌ನಂತಹ ಅಪ್ಲಿಕೇಷನ್‌ಗಳಲ್ಲಿ ಜನರು ಮಾಹಿತಿ ಹುಡುಕಾಟ ನಡೆಸುತ್ತಾರೆ. ಕೆಲವು ಮಾಹಿತಿಗಳು ಯಾವುದೋ ಭಾಷೆಯ ವೆಬ್‌ಸೈಟ್‌ಗಳಲ್ಲಿ ಅಥವಾ ವಿಡಿಯೋ ಮೂಲಕ ದೊರೆತರೆ, ಆ ಭಾಷೆ ಗೊತ್ತಿಲ್ಲದವರು, ತಮಗೆ ಅರ್ಥವಾಗುವ ಭಾಷೆಯಲ್ಲಿಯೇ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಈ ಕ್ವಿಕ್ ಆಪ್ ಆವಿಷ್ಕಾರವು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.

ಇದರ ಕಾರ್ಯ ಹೇಗೆ?: ಕ್ವಿಕ್ ಆಪ್ ತಂತ್ರಜ್ಞಾನವು, ಒಂದು ವೆಬ್‌ಸೈಟ್ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದನ್ನು ಪೂರ್ಣ ಪ್ರಮಾಣದ ಆಪ್ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ಪಿಡಿಎ- ಹಾಗೂ ಯಾವುದೇ ವಿಡಿಯೋ ಫೈಲ್‌ಗಳನ್ನು ವೆಬ್ ಸೈಟ್‌ಗೆ ಅಪ್‌ಲೋಡ್ ಮಾಡಿ ಸಾರಂಶ (ಸಮ್ಮರೈಸ್) ಎಂದು ಕ್ಲಿಕ್ ಮಾಡಿದರೆ ವೆಬ್‌ಸೈಟ್ ವಿಡಿಯೋ ಅಥವಾ ಪಿಡಿಎ-ಅನ್ನು ರ‍್ಯಾಗ್(ರಿಟ್ರಿವಲ್ ಆರ್ ಗ್ಯೂಮೆಂಟೆಂಡ್ ಜನರೇಷನ್) ಎಂಬ ಎಐ ಬಳಸಿಕೊಂಡು ಅದರ ಮುಖಾಂತರ ಭಾಷಾಂತರ ಮಾಡಲಾಗುತ್ತದೆ. ಬಹುಭಾಷೆಯನ್ನು ಒಳಗೊಂಡಿದ್ದು, ಒಂದು ಯುಟ್ಯೂಬ್, ವೆಬ್‌ಸೈಟ್ ಇನ್ನಿತರ ವಿಡಿಯೋ ಲಿಂಕ್ ನಕಲು ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ, ನಮಗೆ ಬೇಕಾದ ಭಾಷೆ ಆಯ್ಕೆ ಮಾಡಿದರೆ ಸಾಕು. ವಿಡಿಯೋದಲ್ಲಿ ನಾವು ಸೂಚಿಸಿದ ಭಾಷೆಯಲ್ಲಿ ಧ್ವನಿ ಹಾಗೂ ಬರಹದ ಮೂಲಕ ಮಾಹಿತಿ ಪಡೆಯಬಹುದು. ಈ ವೆಬ್‌ಸೈಟ್ ಗಾಗಿ ಫೈಥಾನ್ ಫ್ಲಾಕ್, ಗೂಗಲ್ ಜೆಮಿನಾಯ್, ಎಪಿಎಸ್ (ಅಡ್ವಾನ್ಸ್ ಪ್ಲಾನಿಂಗ್ ಆಂಡ್ ಸ್ಕೆಡ್ಯುಲಿಂಗ್ ಸಿಸ್ಟಮ್), ಲ್ಯಾನ್ಸಿಂಗ್ ಫ್ರೇಮ್‌ವರ್ಕ್‌ಗಳನ್ನು ಕೋಡಿಂಗ್‌ಗಾಗಿ ಬಳಸಿದ್ದು, ಎಚ್‌ಟಿಎಂಎಲ್ ಸಿಎಸ್‌ಎಸ್ ಆಂಡ್ ಜಾವ ಸ್ಕ್ರಿಪ್ಟ್ ಹಾಗೂ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಇದೀಗ ವಿದ್ಯಾರ್ಥಿಗಳಿಗೆ ಉಚಿತ ಬಳಕೆಗೆ ನೀಡಲಾಗಿದ್ದು, ಭವಿಷ್ಯದಲ್ಲಿ ಪೂರ್ಣಪ್ರಮಾಣದ ಆಪ್ ಆಗಿ ಅಭಿವೃದ್ಧಿಪಡಿಸಲಾಗುವುದು. ಈ ಆವಿಷ್ಕಾರಕ್ಕೆ ಪೇಟೆಂಟ್ ಸಹ ದೊರೆಯಲಿದೆ ಎನ್ನುತ್ತಾರೆ ಪ್ರಾಧ್ಯಾಪಕಿ ರುಮಾನ ಅಂಜುಂ.

” ಕ್ವಿಕ್ ಆಪ್ ಅನ್ನು ವಿದ್ಯಾರ್ಥಿಗಳ ಬಳಕೆಗಾಗಿ ಹೆಚ್ಚು ಒತ್ತು ನೀಡಿ ಆವಿಷ್ಕಾರ ಮಾಡಲಾಗಿದೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಆರ್ಥಿಕವಾಗಿ ಹೆಚ್ಚು ವ್ಯಯ ಮಾಡಿದ್ದಾರೆ. ಪ್ರತಿಯೊಂದು ಹಂತದಲ್ಲೂ ಪ್ರಾಧ್ಯಾಪಕರು ಸಲಹೆ ನೀಡಿದ್ದು ಈ ಆಪ್ ತಯಾರಿಸಲು ಸಹಕಾರಿಯಾಗಿದೆ.”

-ಅರವಿಂದ ಎಸ್.ಗುಡಿ, ವಿದ್ಯಾರ್ಥಿ, ಕಂಪ್ಯೂಟರ್ ಸೈನ್ಸ್ ವಿಭಾಗ

Tags:
error: Content is protected !!