Mysore
26
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ವಿಸಿ ನಾಲೆ ಆಧುನೀಕರಣ ನೆಪ: ನಾಲೆಗಳಿಗೆ ಬಾರದ ನೀರು 

VC canal modernization excuse: Water not reaching the canals

ಅಣ್ಣೂರು ಸತೀಶ್

ರೈತರು ಕಂಗಾಲು; ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿರುವ ಅನ್ನದಾತರು

ಭಾರತೀನಗರ: ವಿಸಿ ನಾಲೆಗಳಲ್ಲಿ ನೀರು ಬಾರದ ಕಾರಣ ಕಬ್ಬಿನ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ವಿ.ಸಿ.ನಾಲೆಗಳಿಗೆ ನೀರು ಬಿಟ್ಟಿದ್ದೇವೆಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮದ್ದೂರು, ಮಂಡ್ಯ, ಮಳವಳ್ಳಿ ಭಾಗದ ನಾಲೆಗಳಲ್ಲಿ ಇದವರೆಗೂ ನೀರು ಬಂದಿಲ್ಲ. ಇದರಿಂದ ಆತಂಕದಲ್ಲಿ ರೈತರು ಬದುಕುವಂತಾಗಿದೆ.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ನಾಲೆಯ ಆಧುನೀಕರಣ ನಡೆಯುತ್ತಿರುವ ನೆಪದಲ್ಲಿ ಇದುವರೆಗೂ ನೀರನ್ನು ಬಿಡುಗಡೆ ಮಾಡಿಲ್ಲದಿರುವುದರಿಂದ ರೈತರು ಬೆಳೆದಿರುವ ಕಬ್ಬಿನ ಬೆಳೆ ಒಣಗುತ್ತಿವೆ. ಜೂನ್-ಜುಲೈ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಮಯಕ್ಕೆ ರೈತರು ಕೃಷಿಯನ್ನು ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟು ಆಗದ ಕಾರಣ ವಿಸಿ ನಾಲೆಯ ನೀರನ್ನೇ ಎದುರು ನೋಡುವಂತಾಗಿದೆ.

ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿದ್ದರೂ ಕೂಡ ನಾಲೆಯ ಅಭಿವೃದ್ಧಿ ನೆಪದಲ್ಲಿ ನೀರು ಬಿಡಲು ಅಧಿಕಾರಿಗಳು ಮುಂದಾಗದಿರುವುದು ರೈತರ ಆಕ್ರೋಶಕ್ಕೆ ಗುರಿಯಾಗಿದೆ. ಈ ತಿಂಗಳಾಂತ್ಯದಲ್ಲಿ ಬಿತ್ತನೆ ಕಾರ್ಯ ಮುಕ್ತಾಯಗೊಂಡು ನಾಟಿಗೆ ಜಮೀನುಗಳು ಸಿದ್ಧವಾಗಬೇಕಿತ್ತು. ಆದರೆ ನಾಲೆಗಳ ದುರಸ್ತಿ ನೆಪದಲ್ಲಿ ನೀರು ಬಿಡಲು ವಿಳಂಬ ಮಾಡಿರುವುದು ಒಂದು ಕಡೆಯಾದರೆ, ಹೂಳು ತುಂಬಿರುವುದು ಮತ್ತೊಂದೆಡೆ ರೈತರ ಹಾದಿಯನ್ನು ದಿಕ್ಕುತಪ್ಪಿಸಿದೆ. ಕಾರ್ಖಾನೆಗೆ ಅಗತ್ಯವಾದಷ್ಟು ನೀರು ಸಿಗದ ಕಾರಣ ಕಾರ್ಖಾನೆ ಮಾಲೀಕರು ಮತ್ತು ರೈತರು ವಿಸಿ ನಾಲೆಯಲ್ಲಿ ನೀರು ಬರುವುದನ್ನೇ ಎದುರು ನೋಡುತ್ತಿದ್ದಾರೆ.

ವಿಸಿ ನಾಲೆಗೆ ನೀರು ಬಿಡುವಂತೆ ರೈತರು ೨ ತಿಂಗಳುಗಳಿಂದಲೂ ಆಗ್ರಹಿಸುತ್ತಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಿಂದ ನೀರು ಬಿಟ್ಟರೂ ವಿಸಿ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪಬೇಕಾದರೆ ೧೫ ರಿಂದ ೨೦ ದಿನಗಳು ಬೇಕಾಗುತ್ತವೆ.

ಹೂಳು ತುಂಬಿದ ನಾಲೆ: ಕ್ಯಾತಘಟ್ಟ, ಬೊಮ್ಮನದೊಡ್ಡಿ, ಅಜ್ಜಹಳ್ಳಿ, ಮಠದದೊಡ್ಡಿ, ಚಿಕ್ಕರಸಿನಕೆರೆ ಇತರೆ ಭಾಗದ ನಾಲೆಗಳಲ್ಲಿ ಹೂಳು ತುಂಬಿದೆ. ಒಂದು ವೇಳೆ ನೀರನ್ನು ಬಿಡುಗಡೆ ಮಾಡಿದರೂ ಕಾಲುವೆಗೆ ಹರಿಸಿದ ನೀರು ಕೊನೆಯ ಭಾಗದ ಬಯಲಿನ ಪ್ರದೇಶಕ್ಕೆ ತಲುಪದೆ ಪೋಲಾಗುವ ಸಾಧ್ಯತೆ ಇದೆ. ಈ ಕೂಡಲೇ ಅಧಿಕಾರಿಗಳು ಮತ್ತು ಸವಡೆಗಳು ಗಿಡ-ಗಂಟಿಗಳನ್ನು ತೆರವುಗೊಳಿಸಿ ಹೂಳು ತೆಗೆಯಲು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೊನೆಯ ಭಾಗಕ್ಕೆ ನೀರು ಹರಿಸಲು ಆಗ್ರಹ: ಮದ್ದೂರು ತಾಲ್ಲೂಕು ಚಿಕ್ಕರಸಿನಕೆರೆ ಹೋಬಳಿಯ ಉತ್ತರ ಮತ್ತು ದಕ್ಷಿಣ ಭಾಗದ ಕೊನೆಯ ಭಾಗಕ್ಕೆ ಪ್ರತಿ ಬಾರಿಯೂ ನೀರು ತಲುಪುತ್ತಿಲ್ಲ. ಈಗಾಗಲೇ ಕೃಷಿ ಚಟುವಟಿಕೆ ವಿಳಂಬವಾಗಿರುವುದರಿಂದ ಕೊನೆಯ ಭಾಗಕ್ಕೆ ನೀರು ತಲುಪಿಸುವ ಜವಾಬ್ದಾರಿಯನ್ನು ಇಲ್ಲಿನ ನೀರಾವರಿ ಇಲಾಖೆ ವಹಿಸಿಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

” ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಈಗಾಗಲೇ ನಾಲೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುತ್ತಿತ್ತು. ನೀರಿಲ್ಲದೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿಲ್ಲ. ಹೀಗಾದರೆ ರೈತರ ಬದುಕು ಹೀನಾಯ ಸ್ಥಿತಿಗೆ ತಲುಪುತ್ತದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆಗಾರಿಕೆ ಹೊರಬೇಕಾಗುತ್ತದೆ.”

-ಬೋರಾಪುರ ಶಂಕರೇಗೌಡ, ನಿಕಟ ಪೂರ್ವ ಜಿಲ್ಲಾಧ್ಯಕ್ಷ, ರೈತಸಂಘ

” ಕೆಆರ್‌ಎಸ್‌ನಿಂದ ಈಗಾಗಲೇ ನೀರು ಬಿಟ್ಟಿದ್ದೇವೆ. ಕೆಲವು ಕಡೆ ವಿಸಿ ನಾಲೆಗಳಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಬಿಡಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಅಂತಹ ಸ್ಥಳಗಳಲ್ಲಿ ಜನ-ಜಾನುವಾರುಗಳಿಗೆ ಮತ್ತು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮಕೈಗೊಂಡಿದ್ದೇವೆ.”

-ರಘುರಾಮನ್, ಅಧಿಕ್ಷಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ

” ರೈತರ ಬೆಳೆಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಬಿಡಿಸಬೇಕೆಂಬುದು ಜಿಲ್ಲೆಯ ಶಾಸಕರ ಒತ್ತಾಯವಾಗಿದೆ. ಆದರೆ ನಾಲೆಗಳ ಆಧುನೀಕರಣ ನಡೆಯುತ್ತಿರುವುದರಿಂದ ಈಗಾಗಲೇ ವಿಳಂಬವಾಗಿವೆ. ಜರೂರಾಗಿ ಕೆಲಸ ಮುಗಿಸಿ ನಾಲೆಗಳಿಗೆ ನೀರು ಬಿಡಬೇಕೆಂದು ಸಚಿವರಲ್ಲಿ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.”

-ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯರು

” ಪ್ರಸ್ತುತ ದಿನಗಳಲ್ಲಿ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿದೆ. ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲಾಗದೆ ಇಳುವರಿ ಕುಂಠಿತಗೊಳ್ಳುತ್ತಿದೆ. ಇದನ್ನು ಅರ್ಥಮಾಡಿಕೊಂಡು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ನಾಲೆಯ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು.”

ಡಿ.ಸಿ.ತಮ್ಮಣ್ಣ, ಮಾಜಿ ಸಚಿವರು

Tags:
error: Content is protected !!