Mysore
24
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಗ್ರಾಮೀಣ ಭಾಗಗಳಲ್ಲಿ ನಿಲ್ಲದ ವನ್ಯಮೃಗಗಳ ಹಾವಳಿ 

ಕಾಫಿ,ಬಾಳೆ ಸೇರಿ ಹಲವು ಬೆಳೆಗಳಿಗೆ ಹಾನಿ; ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಒತ್ತಾಯ

ವಿರಾಜಪೇಟೆ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ವನ್ಯಮೃಗಗಳ ಹಾವಳಿ ಮಿತಿ ಮೀರಿದ್ದು, ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗುತ್ತಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿರಾಜಪೇಟೆ ಸಮೀಪದ ಬೊಳ್ಳರಿಮಾಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀರಾ ಹೆಚ್ಚಾಗಿದೆ. ಈ ಹಿಂದೆ ಹುಲಿ ಹಾವಳಿ ಹೆಚ್ಚಾಗಿದ್ದ ಈ ಪ್ರದೇಶಗಳಲ್ಲಿ ಈಗ ಕಾಡಾನೆ ಹಾವಳಿ ಮಿತಿ ಮೀರಿದ್ದು, ಸ್ಥಳೀಯರು ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಇದರೊಂದಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಕಾಡಾನೆಗಳ ಹಾವಳಿ ಹೆಚ್ಚಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

೬ ತಿಂಗಳುಗಳ ಹಿಂದೆ ಹುಲಿ ದಾಳಿಗೆ ಕರು ಬಲಿಯಾದರೆ, ವರ್ಷದ ಹಿಂದೆ ಹಸುವೊಂದು ಬಲಿಯಾಗಿತ್ತು. ಐಮಂಗಲಭಾಗದಿಂದ ಬರುವ ಹುಲಿಯು ಸಾಕು ಪ್ರಾಣಿಗಳು ಹಾಗೂ ಜಾನು ವಾರುಗಳ ಮೇಲೆ ದಾಳಿ ನಡೆಸಿ ಹೋಗುತ್ತಿದೆ.ಇದರ ಜೊತೆಗೆ ಕಾಡನೆಗಳ ನಿರಂತರ ಹಾವಳಿ ಮಿತಿ ಮೀರಿದೆ ಎಂದು ಆತಂಕ ವ್ಯಕ್ತಪಡಿಸುವ ಗ್ರಾಮಸ್ಥರು ರಾತ್ರಿ ವೇಳೆ ಭಯದಿಂದ ಕಾಲ ಕಳೆಯುವಂತಾಗಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಇದನ್ನು ಓದಿ : ಎನ್ಎಸ್ಎಸ್ ವಿದ್ಯಾರ್ಥಿಗಳ ಸೇವೆಯನ್ನು ಸಾರುತ್ತಿದೆ ಸರ್ಕಾರಿ ಶಾಲೆ

ತೋಟದಲ್ಲಿ ಬೆಳೆದಿರುವ ಕಾಫಿ, ಬಾಳೆ, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಇತ್ತೀಚೆಗೆ ಕಾಡಾನೆ ಹಿಂಡು ಕಬ್ಬಿಣದ ಗೇಟ್ ಮುರಿದು ದಾಂದಲೆ ನಡೆಸಿದಲ್ಲದೆ, ಮುನ್ನಚ್ಚರಿಕೆ ಕ್ರಮವಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಿಗೂ ಹಾನಿ ಮಾಡಿದೆ. ಕಾಡಾನೆ ಸಂಚರಿ ಸಿದೆಲ್ಲೆಡೆ ಕಾಫಿ ಗಿಡಗಳು ಸಂಪೂರ್ಣ ನಾಶವಾಗಿವೆ.

ಕಾಡಾನೆಗಳ ನಿರಂತರ ಹಾವಳಿ ಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ದ್ದಾರೆ. ಕಾರ್ಮಿಕರು ತೋಟಗಳಿಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಮತ್ತು ಹುಲಿಯ ಹೆಜ್ಜೆ ಗುರುತುಗಳಿಂದ ಈ ವ್ಯಾಪ್ತಿಯ ನಿವಾಸಿಗಳು ಮನೆಯಿಂದ ಹೊರಬರಲೂ ಭಯಪಡುವಂತಾಗಿದೆ. ವನ್ಯಮೃಗಗಳ ಹಾವಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಇಲ್ಲಿಯವರೆಗೆ ಸೂಕ್ತ ಪರಿಹಾರವನ್ನೂ ನೀಡಿಲ್ಲ. ಬೆಳೆಗಾರರು ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಕೈಗೆ ಬರಬೇಕೆನ್ನುವ ಸಮಯದಲ್ಲಿ ವನ್ಯಮೃಗಗಳ ಪಾಲಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಹಿಂದೇಟು ಹಾಕಬೇಕಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

ಕಾಡಾನೆಗಳನ್ನು ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ತೋಟಗಳಿಗೆ ಬಂದು ದಾಂದಲೆ ನಡೆಸುತ್ತಿವೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ರೂಪಿಸಬೇಕು. ಜೊತೆಗೆ ಬೆಳೆ ಹಾನಿಗೆ ಸಂಬಂಽಸಿದಂತೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

” ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ, ಬಾಳೆಗಿಡ, ಗೇಟ್, ಸಿಸಿ ಕ್ಯಾಮಾರಾ ಸೇರಿದಂತೆ ವಿವಿಧ ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಕಾರ್ಮಿಕರೂ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಬೆಳೆಗಾರರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ತೋಟಗಳಲ್ಲಿ ಹುಲಿಯ ಹೆಜ್ಜೆ ಕೂಡ ಕಂಡುಬಂದಿದ್ದು, ಮತ್ತಷ್ಟು ಭಯದ ವಾತಾವರಣ ಸೃಷ್ಟಿಯಾಗಿದೆ. ವನ್ಯಮೃಗಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು.”

-ಬಿದ್ದಂಡ ಕರುಂಬಯ್ಯ, ಬೆಳೆಗಾರ, ಬೊಳ್ಳರಿಮಾಡು ಗ್ರಾಮ

” ಕಾಡಾನೆಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವಿರುವೆಡೆ ಸಿಬ್ಬಂದಿಯನ್ನು ನಿಯೋಜಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಲಾಗುತ್ತಿದೆ. ಕಾಡಾನೆ ಹಾವಳಿ ಬಗ್ಗೆ ಮಾಹಿತಿ ಬಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.”

-ಶಿವರಾಮ್, ವಲಯ ಅರಣ್ಯಾಧಿಕಾರಿ

Tags:
error: Content is protected !!