Mysore
24
overcast clouds

Social Media

ಶನಿವಾರ, 05 ಸೆಪ್ಟೆಂಬರ್ 2026
Light
Dark

‘ಶಿಕ್ಷಕರ ಮೇಲೆ ಅನಗತ್ಯ ಹೊರೆ: ಗುಣಮಟ್ಟದ ಶಿಕ್ಷಣಕ್ಕೆ ಬರೆ’

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಶಿಕ್ಷಕರು, ಬೋಧನೇತರ ಕೆಲಸಗಳ ಹೊರೆಯಿಂದ ಪರಿತಪಿಸುತ್ತಿದ್ದಾರೆ.

ಶಾಲಾ ದಾಖಲಾತಿ ಕಾರ್ಯದ ಹೊಣೆ ಶಿಕ್ಷಕರದ್ಧೇ ಆಗಿದೆ. ಇದಕ್ಕೆಯಾರದ್ದೂ ತಕರಾರಿಲ್ಲ. ಅದರ ಹೊರತಾಗಿ, ಜನಗಣತಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)… ಇತ್ಯಾದಿ ಕೆಲಸಗಳು ಶಿಕ್ಷಕರನ್ನು ಹೈರಾಣ ಮಾಡಿವೆ ಎಂಬ ಆರೋಪಗಳು ಅನುರಣಿಸುತ್ತಲೇ ಇವೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಬೋಧನೆ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾದ ಕೆಲವರು ತಮ್ಮ ಅಭಿಪ್ರಾಯಗಳನ್ನು ‘ಆಂದೋಲನ’ ದಿನಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

” ಶಿಕ್ಷಕರ ಆರೋಗ್ಯದತ್ತ ಕಾಳಜಿ ಅಗತ್ಯ:  ಶಿಕ್ಷಕರಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳು ಸಕಾಲಕ್ಕೆ ದೊರೆಯುತ್ತವೆ. ಆದರೆ, ಶಿಕ್ಷಕರ ಅನಾರೋಗ್ಯದ ಚಿಕಿತ್ಸೆಗೆ ನೀಡುತ್ತಿರುವ ಸೌಲಭ್ಯಗಳು ಸೂಕ್ತವಾಗಿಲ್ಲ. ಕೇವಲ ಒಂದೆರಡು ಕಾಯಿಲೆಗಳಿಗೆ ಮಾತ್ರೆ ಚಿಕಿತ್ಸೆ ಸರ್ಕಾರದ ಸವಲತ್ತಿನಲ್ಲಿ ಸಿಗುತ್ತಿದೆ. ‘ಕಣ್ಣಿನ ಸಮಸ್ಯೆಯಲ್ಲಿ ಶಸ ಚಿಕಿತ್ಸೆಗೆ ಅವಕಾಶ ಇಲ್ಲ, ಕೇವಲ ಕನ್ನಡಕ ಕೊಡಿಸುತ್ತಾರೆ’ ಎಂಬಂತೆ. ಹಲವಾರು ಕಾಯಿಲೆಗಳಿಗೆ ಸರ್ಕಾರದಿಂದ ಚಿಕಿತ್ಸೆ ದೊರೆಯುತ್ತಿಲ್ಲ. ಇದರ ಬಗ್ಗೆ ಇಲಾಖೆಯ ಮುಖ್ಯಸ್ಥರು ಗಮನಹರಿಸಬೇಕು. ಸರ್ಕಾರಿ ಶಾಲೆಯ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಶೋಚನೀಯವಾದದ್ದು. ಪಾಠ-ಪ್ರವಚನ, ಮಕ್ಕಳ ವಿದ್ಯಾಭ್ಯಾಸದ ಕುರಿತು ಕಾಳಜಿ ವಹಿಸಬೇಕಾದ ಶಿಕ್ಷಕರು ಸರ್ಕಾರದ ಇತರ ಕೆಲಸಗಳಲ್ಲಿ ದುಡಿಸಿಕೊಂಡು ಸಮಯ ಮತ್ತು ಶಿಕ್ಷಕರ ಕಾರ್ಯವೈಖರಿಯ ಮೇಲೆ ಒತ್ತಡ ಹೇರಲಾಗುತ್ತಿದೆ.”

– ಜಾನ್ ಕೆನಡಿ, ನಿವೃತ್ತ ಮುಖ್ಯ ಶಿಕ್ಷಕರು

ಖಾಲಿ ಇರುವ ಶಿಕ್ಷಕ ಹುದ್ದೆ ಭರ್ತಿ ಮಾಡಬೇಕು:  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸಲು ಸರ್ಕಾರ ಹಲವು ಬಗೆಯ ವಿಶೇಷ ಕಾರ್ಯಕ್ರಮಗಳನ್ನು ಯೋಜನೆ ರೂಪದಲ್ಲಿ ತರುತ್ತಿದೆ. ಮಕ್ಕಳ ಆರೋಗ್ಯದ ಜೊತೆಗೆ ಶಿಕ್ಷಣ ಮತ್ತು ಬದುಕಿನ ಮೌಲ್ಯಗಳನ್ನು ವೃದ್ಧಿಸುವ ಯೋಜನೆಗಳನ್ನು ಶಿಕ್ಷಣ ಇಲಾಖೆ ಜಾರಿಗೆ ತರುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ, ಕಂಪ್ಯೂಟರ್ ತರಬೇತಿ, ಕೌಶಲಾಭಿವೃದ್ಧಿ ಕಾರ್ಯಗಳನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿಸಲು ಆಂದೋಲನ ನಡೆಸಲಾಗುತ್ತಿದೆ. ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶ ದಿಂದ ಹಾಲು, ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಇನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಪ್ರತಿ ವರ್ಷವೂ ಹತ್ತು ಹಲವು ಬಗೆಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ದುರಸ್ತಿಗೊಳಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಕ್ಷೇತ್ರದ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಲಿದೆ. ಈಗ ಹೊಸದಾಗಿ ಜಾರಿಗೆ ತಂದಿರುವ ಶಿಕ್ಷಕರ ಹಾಜರಾತಿ ನೀತಿಯು ಸಮಯಕ್ಕೆ ಸರಿಯಾಗಿ ಶಾಲೆ ಸೇರುವುದರೊಂದಿಗೆ ಪಾಠ ಪ್ರವಚನಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದರೆ ಶಿಕ್ಷಕರ ಒತ್ತಡ ಕಡಿಮೆಯಾಗಲಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ನನಗೆ ತೃಪ್ತಿ ತಂದಿದೆ.

– ಜವರೇಗೌಡ, ನಿವೃತ್ತ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ 

ಸಮೀಕ್ಷೆ, ಆನ್‌ಲೈನ್ ಕಾರ್ಯಗಳಿಂದ ಹೊರೆ:  ಸರ್ಕಾರಿ ಶಾಲೆಯ ಶಿಕ್ಷಕರು ಕೆಲಸದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಪಾಠ ಮಾಡುವ ಬದಲಾಗಿ ಇಲಾಖೆ ಜಾರಿಗೆ ತಂದಿರುವ ಅಥವಾ ಸಮೀಕ್ಷೆಯಂತಹ ಕೆಲಸಗಳನ್ನು ಮಾಡಲು ಸಮಯ ಸಾಕಾಗುತ್ತಿಲ್ಲ. ಬೆಳಿಗ್ಗೆ ಶಾಲೆಗೆ ತೆರಳಿದ ತಕ್ಷಣ ಕಾಮ್ಸ್ ಎಂಬ ಹಾಜರಾತಿ ಹಾಕಬೇಕು. ಆನಂತರ ಮಕ್ಕಳ ಹಾಜರಾತಿಯನ್ನು ಮೊಬೈಲ್ ಮೂಲಕ ಭಾವಚಿತ್ರ ತೆಗೆದು ಕಳುಹಿಸಬೇಕು. ಇದಾದ ನಂತರ ಬಿಸಿಯೂಟ ತಯಾರಿಸಲು ಅಡುಗೆ ಸಹಾಯಕರಿಗೆ ಅಕ್ಕಿ, ಬೇಳೆಯನ್ನು ತೂಕ ಮಾಡಿ ಕೊಡುವ ಕೆಲಸವನ್ನು ಹಚ್ಚಲಾಗಿದೆ. ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ಕೊಡಬೇಕು. ಇವುಗಳನ್ನು ಶಿಕ್ಷಕರೇ ಮಾಡಬೇಕು. ಇದರ ಜೊತೆಗೆ ಸರ್ಕಾರದಿಂದ ನಡೆಸುವ ವಿವಿಧ ಸಮೀಕ್ಷೆಗಳಿಗೂ ಶಿಕ್ಷಕರನ್ನೇ ದುಡಿಸಿಕೊಳ್ಳಲಾಗುತ್ತಿದೆ. ಆನ್‌ಲೈನ್ ಕೆಲಸಗಳು ವಿಪರೀತವಾಗಿ ಹಲವು ಶಾಲೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಿಗದೆ ಶಿಕ್ಷಕರು ಪರದಾಡುತ್ತಾರೆ. ಬಿಸಿಯೂಟದ ಕೆಲಸಗಳನ್ನು ಅಡುಗೆ ಸಹಾಯಕರಿಗೆ ವಹಿಸಬೇಕು. ಶಿಕ್ಷಕರಿಗೆ ನೀಡಿರುವ ಆನ್‌ಲೈನ್ ಕೆಲಸ ಹೊರೆಯನ್ನು ಇಳಿಸಬೇಕು. ಇವುಗಳು ಬದಲಾವಣೆಯಾದರೆ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ ಮತ್ತಷ್ಟು ವೃದ್ಧಿಯಾಗಲಿದೆ.

– ಗೋಪಾಲಕೃಷ್ಣ, ನಿವೃತ್ತ ಶಿಕ್ಷಕ

ಸಮೀಕ್ಷೆ, ಆನ್‌ಲೈನ್ ಕಾರ್ಯಗಳಿಂದ ಹೊರೆ:  ಶಿಕ್ಷಕರು ಕೇವಲ ಪಾಠ ಬೋಽಸುವವರಲ್ಲ; ಮಕ್ಕಳ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯನ್ನೂ ಹೊತ್ತಿರುತ್ತಾರೆ. ಆದ್ದರಿಂದ ಶಿಕ್ಷಕರ ವೃತ್ತಿಯಲ್ಲಿ ಮಾನವೀಯ ಮೌಲ್ಯಗಳು, ತಾಳ್ಮೆ, ಸಹಬಾಳ್ವೆ, ಹಿರಿಯರಿಗೆ ಗೌರವ ಹಾಗೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ನನ್ನ ೩೧ ವರ್ಷಗಳ ಶಿಕ್ಷಕ ವೃತ್ತಿಯ ಅನುಭವದಲ್ಲಿ, ಮಹಿಳಾ ಶಿಕ್ಷಕರ ಗೌರವ, ಸುರಕ್ಷತೆ ಮತ್ತು ಸ್ವಾಭಿಮಾನಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂಬುದು ನನ್ನ ದೃಢವಾದ ಅಭಿಪ್ರಾಯ. ಸಹ ಶಿಕ್ಷಕರು ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ಮಹಿಳಾ ಶಿಕ್ಷಕಿಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ, ಗೌರವಯುತ ಮತ್ತು ಸ್ನೇಹಪರ ವಾತಾವರಣ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಅವರೊಂದಿಗೆ ನಾವು ಸಂವಹನ ಮಾಡಬೇಕು. ವೈಯಕ್ತಿಕ ಹಾಗೂ ಕುಟುಂಬದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅಗತ್ಯವಿದ್ದಾಗ ಮಾನವೀಯವಾಗಿ ಸ್ಪಂದಿಸಬೇಕು. ಶಿಕ್ಷಕರನ್ನು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯಗಳಿಗೆ ಹೆಚ್ಚಾಗಿ ಬಳಸಬೇಕು. ಶಿಕ್ಷಣಕ್ಕೆ ಸಂಬಂಧಿಸದ ಅನ್ಯ ಕಾರ್ಯಗಳನ್ನು ನಿರಂತರವಾಗಿ ಶಿಕ್ಷಕರ ಮೇಲೆ ಹೇರಿದರೆ, ಅವರ ಬೋಧನಾ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆಯಿದೆ.

-ಆರ್.ಎಸ್.ಪುಷ್ಪಾ, ನಿವೃತ್ತ ಶಿಕ್ಷಕರು

Tags:
error: Content is protected !!