ಸುಮತಿ ಶೆಣೈ, ಲೇಖಕಿ ಮತ್ತು ಅನುವಾದಕಿ
ಪ್ರತಿ ಹಬ್ಬದ ಆಚರಣೆಯನ್ನೂ ಅಂದು ತಯಾರಿಸುವ ಗೌಡ ಸಾರಸ್ವತ ಬ್ರಾಹ್ಮಣ- ಸಮುದಾಯಕ್ಕೇ ಸೀಮಿತವಾದ ಬಹುಬಗೆಯ ಪದಾರ್ಥ- ಖಾದ್ಯಗಳ ವಿಭಿನ್ನತೆಯನ್ನು ಸಂಭ್ರಮಿಸುವ ಕೊಂಕಣಿಯರು ಯುಗಾದಿ ಹಬ್ಬಕ್ಕೆ ಒಂದು ವಾರಇರುವಾಗಲೇ ಹೇರಳವಾದ ‘ಬಿಬ್ಬೊ’ ಅಥವಾ ಗೋಡಂಬಿಯನ್ನು ಸಂಗ್ರಹಿಸಲು ಆರಂಭಿಸುತ್ತಾರೆ. ಬಹುತೇಕ ಎಲ್ಲ ಕೊಂಕಣಿಯರಿಗೆ ಸಂವತ್ಸರದ ಮೊದಲ ಪರ್ವದಂದು ಗೋಡಂಬಿಯನ್ನು ಊಟ ಮತ್ತು ಭಕ್ಷ್ಯಗಳೆರಡರಲ್ಲೂ ಮತ್ತೆ ಮತ್ತೆ ಸವಿಯುವ ತವಕ. ಅಲ್ಲದೇ ಜೀವನದ ಸಹಜ ಗೋಡ್- ಕೋಡ್( ಸಿಹಿ-ಕಹಿ) ನ ಸಾಂಪ್ರದಾಯಿಕ ಮಹತ್ವವನ್ನು ಕುಟುಂಬ ಸದಸ್ಯರೊಂದಿಗೆ ಮರಳಿ ನೆನಪಿಸಿಕೊಳ್ಳುವ ಪುಳಕ.
ದಿನಾಲೂ ಸಂಜೆ ದೇವಳಕ್ಕೆ ಹೋಗುವ ಶೃದ್ಧಾಭ್ಯಾಸ ಇರುವ ಗೌಡ ಸಾರಸ್ವತ ಸಮುದಾಯದ ಕೊಂಕಣಿಯರು ಯುಗಾದಿಯಂದು ಬೆಳಿಗ್ಗೆ ಪರಿಶುದ್ಧ ಮೈ-ಮನಗಳಿಂದ ಹೊಸ ದಿರಿಸು ಧರಿಸಿ ದೇವಸ್ಥಾನಕ್ಕೆ ಹೋಗಿ ಪುರೋಹಿತರಿಂದ ಬೇವು- ಬೆಲ್ಲವನ್ನು ಸ್ವೀಕರಿಸುವ ಪದ್ಧತಿ ನಿರಂತರವಾಗಿ ಜಾರಿಯಲ್ಲಿದೆ. ಬೇವು-ಬೆಲ್ಲದ ಪ್ರಸಾದವನ್ನು ಮನೆಗೆ ಬಂದು ದೇವರಕೋಣೆಯಲ್ಲಿ ಇಟ್ಟು ಮನೆಯ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ಕಿರಿಯರಿಗೆ ಆಶೀರ್ವದಿಸಿ ಚಿಟಿಕೆ ಬೆಲ್ಲವನ್ನೂ- ಬೇವನ್ನೂ ಏಕಭಾವದಲ್ಲಿ ತಿನ್ನುವುದು ಪರಿಪಾಠ. ಬೇವು ತಿನ್ನುವಾಗ ಯಾವ ಮುಖ ಹೇಗೆ ತಿರುಚುತ್ತದೆ ಎಂದು ಗಮನಿಸುವ ನಾವು ಅಂದು ತಯಾರಿಸುವ ಸಾಂಪ್ರದಾಯಿಕ ಭಕ್ಷ್ಯ ‘ಪೂರಣ್ ಪೋಳಿ’ ಎಂದು ಕೊಂಕಣಿಯಲ್ಲಿ ಹೇಳುವ ದಪ್ಪ ಹೋಳಿಗೆಯ ಪದರಪದರಗಳನ್ನು ಮೆಲ್ಲುವಾಗ ಅದೇ ಮುಖದ ಸಂಭ್ರಮವನ್ನು ನೋಡಿ ಸಿಹಿ- ಕಹಿಗಳ ತಾಳೆ ಹಾಕುವೆವು.
ಮಧ್ಯಾಹ್ನ ಊಟದ ಸಾತ್ವಿಕ ಮೆನುವಿನ ವಿಶಿಷ್ಟ ಘಮವನ್ನು ಹೆಚ್ಚಿಸುವ ಕೊಂಕಣಿಯರ ಸಿಗ್ನೇಚರ್ ದಾಲ್ ‘ದಾಳಿತೋಯ್ ’ಗೆ ಯುಗಾದಿ ಸಹವರ್ತಿಗಳು ತೊಂಡೆಕಾಯಿ- ಗೋಡಂಬಿ ಉಪ್ಕರಿ(ಪಲ್ಯ), ಕಡ್ಲೆಬೇಳೆ ಪಾಯಸ ಹಾಗೂ ಸೌತೆಕಾಯಿ- ಗೋಡಂಬಿ- ತೊಂಡೆಕಾಯಿಗಳನ್ನು ತೊಗರಿಬೇಳೆ ಬೇಯಿಸಿ ಮಸಾಲೆಗೆ ಸೇರಿಸಿದ ‘ಆಂಬಟ’. ಎಲ್ಲ ಗೌಡ ಸಾರಸ್ವತರೂ ಗೋವಾದಿಂದ ವಲಸೆ ಬಂದು ಕರ್ನಾಟಕ ಕೊಂಕಣ ತೀರದಲ್ಲಿ ವಾಸಿಸಲಾರಂಭಿಸಿದ ವರ್ಷಗಳಿಂದ ಇಂದಿಗೂ ಅದೇ ಪದ್ಧತಿ ಜೀವಂತವಿರುವುದು ಸಮುದಾಯದ ಸಾಮೂಹಿಕ ಉತ್ಸಾಹಕ್ಕೆ(Team spirit) ಸಾಕ್ಷಿಯೆನ್ನಬಹುದು.
ಊರಿನ ಪ್ರತಿ ಮನೆಯಿಂದ ಪ್ರಾತಿನಿಧಿಕವಾಗಿ ಒಬ್ಬರಾದರೂ ಅಂದು ದೇವಸ್ಥಾನಕ್ಕೆ ಹೋಗಿ ವಿತರಣೆ ಮಾಡುವ ಬೇವು- ಬೆಲ್ಲ ತಗೊಂಡು ಬರಬೇಕು ಎನ್ನುವುದನ್ನು ಆಸ್ಥೆಯಿಂದ ಪಾಲಿಸುತ್ತಾ ಬಂದಿರುವ ಕೊಂಕಣಿ ಸಾರಸ್ವತ ದೇವಸ್ಥಾನಗಳಲ್ಲಿ ಯುಗಾದಿ ಯಂದು ಮತ್ತೆ ಹಬ್ಬದ ಕಳೆ ಬರುವುದು ಸಾಯಂಕಾಲ ‘ಪಂಚಾಂಗ ಶ್ರವಣ’ ಎನ್ನುವ ಧಾರ್ಮಿಕ ವಿಧಿಯಲ್ಲಿ. ಊರಿನ ಕೊಂಕಣಿಗರೆಲ್ಲರೂ ಸೇರಿ, ಮುಂಬರುವ ಸಂವತ್ಸರದಲ್ಲಿನ ಸಂಭವನೀಯ ಒಳಿತು- ಕೆಡುಕುಗಳನ್ನು, ಏಳು- ಬೀಳುಗಳನ್ನು ಒಟ್ಟಿಗೆ ಕುಳಿತು ಕೇಳುವಾಗಿನ ಸುಂದರ ಮೌನ ಮುಂದಿನ ಸಂವತ್ಸರದುದ್ದಕ್ಕೂ ಕೇಳುಗರನ್ನು ಯಾವುದೋ ಅವ್ಯಕ್ತ ತಂತುವಿನಿಂದ ಬಂಧಿಸಿಡುವಂತೆ ಭಾಸವಾಗುತ್ತದೆ. ಮೂಲತಃ ವ್ಯಾಪಾರಸ್ಥರಾದ ಗೌಡ ಸಾರಸ್ವತರಿಗೆ ತಮ್ಮ ವ್ಯಾಪಾರದ ಮೇಲೆ ಸತ್ಪರಿಣಾಮ ಅಥವಾ ದುಷ್ಪರಿಣಾಮ ಬೀರುವಂಥ ವಿದ್ಯಮಾನಗಳನ್ನು ವೈದಿಕರು ಪಂಚಾಂಗದಲ್ಲಿ ಪಠಿಸುವಾಗ ಹರ್ಷ- ದುಗುಡಗಳನ್ನು ಅನುಭವಿಸುತ್ತಾ ತನ್ಮಯರಾಗಿ ಹೊಸ ಪಂಚಾಂಗ ಆಲಿಸುವ ದೃಶ್ಯ ಸ್ಮರಣೀಯ. ಇಂದಿಗೂ ಉದ್ಯೋಗ ನಿಮಿತ್ತ ನಗರ ಸೇರಿದ ಜಿ.ಎಸ್.ಬಿ. ಯುವಕ- ಯುವತಿಯರು, ಗೃಹಸ್ಥರು-ಯುಗಾದಿಯಂದು ಊರಿಗೆ ಬಂದು ಹಬ್ಬದ ಸಡಗರ ಅನುಭವಿಸುತ್ತಾರೆ. ತಮ್ಮ ವಿಸ್ತ್ರತ ಕುಟುಂಬದೊಂದಿಗೆ ದಾಳಿತೋಯ್, ಉಬ್ಬಟಿ, ಕಡ್ಲೆಬೇಳೆ ಪಾಯಸವನ್ನು ಸವಿಯುತ್ತಾ, ಆಗಿ ಹೋದ ಸಂತಸ- ಸಂಕಟದ ಕ್ಷಣಗಳನ್ನು ಹಂಚಿಕೊಂಡು, ಮುಂದಿನ ಸಂಭಾವ್ಯ ಸುಸ್ಥಿತಿ- ದುಸ್ಥಿತಿ ಗಳನ್ನು ಎದುರಿಸಲು ಅವಶ್ಯವಿರುವ ಒಗ್ಗಟ್ಟನ್ನು, ಅನಾದಿ ಸಂಸ್ಕಾರವನ್ನೂ ರೂಪಿಸುತ್ತಾ ಸಮುದಾಯದ ಚೈತನ್ಯವನ್ನು ವೃದ್ಧಿಸುತ್ತಿರುವುದು ಖುಷಿಯ ಸಂಗತಿ.





