ಎಂ.ನಾರಾಯಣ
ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯಿಂದ ಬಿಎಸ್‌ಎನ್‌ಎಲ್ ಕಚೇರಿಗೆ ಸಾಗುವ ರಸ್ತೆ ಮತ್ತು ಸೇಂಟ್ ಮೇರಿಸ್ ಶಾಲೆಯಿಂದ ವಿದ್ಯೋದಯ ಕಾಲೇಜು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದಾಗಿ ಕೆಸರಿನಂತಾಗಿದ್ದು ಸಾರ್ವಜನಿಕರು, ವಾಹನ ಸವಾರರ ಸಂಚಾರ ದುಸ್ತರವಾಗಿದೆ.
ಈ ರಸ್ತೆಗಳು ತ್ರಿವೇಣಿ ನಗರ ಬಡಾವಣೆಗೆ ಮುಂದುವರಿದಂತೆ ವಿವೇಕಾನಂದ ನಗರಕ್ಕೆ ಹಾಗೂ ಜೋಡಿ ರಸ್ತೆಗೆ, ನಂಜನಗೂಡು ರಸ್ತೆಗೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.
ಇದೇ ರಸ್ತೆಯಲ್ಲಿ ಸೇಂಟ್ ಮೇರಿಸ್ ಶಿಕ್ಷಣ ಸಂಸ್ಥೆ ಇದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಸೈಕಲ್, ಬೈಕ್‌ಗಳಲ್ಲಿ ಶಾಲೆಗೆ ಸಂಚರಿಸುತ್ತಾರೆ. ರಸ್ತೆಯುದ್ದಕ್ಕೂ ಹಲವು ಕಡೆ ಗುಂಡಿಗಳು ಬಿದ್ದಿವೆ. ಪಟ್ಟಣದ ಬಹುತೇಕ ರಸ್ತೆಗಳು ಅಭಿವೃದ್ಧಿ ಕಾಣದೇ ನನೆಗುದಿಗೆ ಬಿದ್ದಿದ್ದು, ರಸ್ತೆಗಳ ದುರಸ್ತಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪುರಸಭಾ ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು.
ವರುಣ ಕ್ಷೇತ್ರ ವ್ಯಾಪ್ತಿಗೆ ಸೇರುವ ಪಟ್ಟಣದ ಈ ರಸ್ತೆ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೆ, ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಅನೇಕ ಬಾರಿ ಪುರಸಭೆಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಈ ರಸ್ತೆಯಲ್ಲಿ ಶಾಲೆ ಇರುವುದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಸಂಚರಿಸಲು ಹಿಂಜರಿಯುವಂತಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
” ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಮಳೆಯಿಂದ ವಿಳಂಬವಾಗಿದೆ. ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಪರ್ಯಾಯ ಕ್ರಮ ವಹಿಸಲಾಗು ವುದು.”
-ಬಿ.ಕೆ.ವಸಂತ ಕುಮಾರಿ, ಮುಖ್ಯಾಧಿಕಾರಿ, ಪುರಸಭೆ, ತಿ.ನರಸೀಪುರ
” ಪಟ್ಟಣದ ಹೃದಯ ಭಾಗದಲ್ಲಿರುವ ಈ ರಸ್ತೆ ಸರ್ಕಾರಿ ಆಸ್ಪತ್ರೆ, ವಿವೇಕಾನಂದ ನಗರ, ತ್ರಿವೇಣಿ ನಗರ ವಿದ್ಯೋದಯ ಕಾಲೇಜು ರಸ್ತೆ ಮೂಲಕ ಸೇಂಟ್ ಮೇರಿಸ್ ಕಾನ್ವೆಂಟ್‌ಗೆ ಸಾವಿರಾರು ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಮಳೆ ಬಿದ್ದರೆ ಕೆರೆಯಂತಾಗುತ್ತದೆ. ಕೂಡಲೇ ಪುರಸಭೆ ಇತ್ತ ಗಮನಿಸಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನನುಕೂಲವನ್ನು ತಪ್ಪಿಸಬೇಕು.”
-ಎಂ.ವಿ.ಶಿವಶಂಕರ್‌ಮೂರ್ತಿ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರು





