ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಕೆಎಸ್ಆರ್ಟಿಸಿ ಬಸ್ಗಳು ಸೂಕ್ತ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ಬಸ್ಗಳಂತೂ ಸಂಚರಿಸುವಾಗ ಚಕ್ರವೇ ಕಳಚಿಹೋದರೆ, ಕೆಲವು ಬಸ್ಗಳಲ್ಲಿ ಸ್ಟೇರಿಂಗ್, ಅಕ್ಸಲ್ ತುಂಡರಿಸಿವೆ. ಕೆಲವು ಬಸ್ಗಳು ಲೈಟ್ ಇಲ್ಲದೆಯೇ ಸಂಚರಿಸುತ್ತಿವೆ. ಮತ್ತೆ ಕೆಲವು ಬಸ್ಗಳು ಸೆಲ್ಛ್ ಸ್ಟಾರ್ಟ್ ಆಗದೆ ತಳ್ಳುವಂತಾಗಿದೆ.
ಗುಂಡ್ಲುಪೇಟೆ ಪಟ್ಟಣದ ಪೆಟ್ರೋಲ್ ಬಂಕ್ ಒಳಗೆ ಬಸ್ನ ಚಕ್ರ ಕಳಚಿ ನುಗ್ಗಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಶಿವಪುರ ಬಳಿ ಬಸ್ ಕೆಟ್ಟು ನಿಂತು ಬಾಚಹಳ್ಳಿ ಮಾರ್ಗದ ಜನರು ಪರದಾಡಿದರು. ಮೈಸೂರು, ಚಾ.ನಗರ ಮಾರ್ಗಗಳಲ್ಲಿ ಸಂಚರಿಸುವ ಸಾಕಷ್ಟು ಬಸ್ಗಳು ಸಂಚರಿಸುವಾಗಲೇ ತಾಂತ್ರಿಕ ಸಮಸ್ಯೆಯಿಂದ ಕೆಟ್ಟುನಿಂತು ಪರದಾಡುವಂತಾಗಿದೆ. ಆದರೆ, ನಿಗಮದ ಅಧಿಕಾರಿಗಳು ಬಸ್ಗಳ ದೋಷಗಳನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ರಸ್ತೆಯಲ್ಲಿ ಸಣ್ಣಪುಟ್ಟ ಸಮಸ್ಯೆಯಾದರೆ ಪರಿಹರಿಸಬಹುದು. ಆದರೆ ಟೈರ್ ಬ್ಲಾಸ್ಟ್, ಸ್ಟೇರಿಂಗ್ ಕಟ್, ಲೈಟ್ ಸಮಸ್ಯೆ ಮತ್ತಿತರರ ತಾಂತ್ರಿಕ ಸಮಸ್ಯೆಯಿಂದ ಅಪಘಾತಗಳು ನಡೆದು ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂಬ ಪ್ರಶ್ನೆ ಪ್ರಯಾಣಿಕರನ್ನು ಕಾಡುತ್ತಿದೆ. ಈಗಂತೂ ಪ್ರಯಾಣದ ದರ ಏರಿಕೆಯಾಗಿದೆ. ಜೊತೆಗೆ ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಶಕ್ತಿ ಯೋಜನೆಯಿಂದ ಬಸ್ಸುಗಳಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಸೀಟು ಸಿಗದೆ ನಿಂತುಕೊಂಡೇ ಹೋಗಬೇಕು ಎಂದು ಪ್ರಯಾಣಿಕರೊಬ್ಬರು ಬೇಸರ ಹೊರಹಾಕಿದರು.
” ಸಿಬ್ಬಂದಿಗಳ ಕೊರತೆ, ತಾಂತ್ರಿಕ ದೋಷಗಳಿಂದ ಒಂದಷ್ಟು ಸಮಸ್ಯೆಯಾಗುತ್ತಿದೆ. ನಮಗೆ ೫೦ ಮಂದಿ ಮೆಕಾನಿಕ್ಗಳು ಬೇಕಾಗಿದ್ದಾರೆ. ಆದರೆ ಗುತ್ತಿಗೆ ಆಧಾರದಲ್ಲಿ ೨೫ ಮಂದಿ ಇದ್ದಾರೆ. ಡಿಪೋದಲ್ಲಿ ೧೪೦ ಬಸ್ಗಳಿವೆ. ೨೮ ಬಸ್ಗಳು ಹೊಸದಾಗಿ ಬಂದಿವೆ. ೧೫ ವರ್ಷ ಆಗಿರುವ ಬಸ್ಗಳು ಬಳಕೆಗೆ ಅನುಪಯುಕ್ತವಾಗಿವೆ. ಚಾಲಕ, ನಿರ್ವಾಹಕರ ಕೊರತೆಯೂ ಇದೆ.”
ಕುಮಾರ್ ನಾಯಕ್, ಘಟಕ ವ್ಯವಸ್ಥಾಪಕರು
” ಸರ್ಕಾರ ಬಸ್ಗಳ ನಿರ್ವಹಣೆಗೆ ಹಣ ನೀಡುತ್ತಿಲ್ಲ, ಹೊಸ ಬಸ್ಗಳನ್ನು ಒದಗಿಸುತ್ತಿಲ್ಲ. ಬಸ್ಗಳ ಕೊರತೆ ನಡುವೆ, ಇರುವ ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಸಮಯಕ್ಕೆ ಬಸ್ ಬರದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುತ್ತಿದ್ದಾರೆ.”
ಮಣಿಕಂಠ ನಾಯಕ, ಪ್ರಯಾಣಿಕ




