ಎಸ್.ಎಸ್.ಭಟ್
ನಂ.ಗೂಡು: ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯದ ಭೀತಿ
ನಂಜನಗೂಡು: ಕಬಿನಿ ನದಿಯ ದೇವರಾಜ ಅರಸು ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ವಿಚಾರದಲ್ಲಿ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯಕ್ಕೆ ಆಹ್ವಾನ ನೀಡುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
೧೯೮೦ರ ದಶಕದಲ್ಲಿ ಕಪಿಲಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ದೇವರಾಜ ಅರಸು ಸೇತುವೆ ಶಿಥಿಲವಾಗಿದ್ದು, ಬುಧವಾರದಿಂದ (೧-೪ -೨೦೨೬) ಅದರ ಮೇಲಿನ ಸಂಚಾರವನ್ನು ನಿರ್ಬಂಽಸಿ ಜಿಲ್ಲಾಽಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದಾಗಿ ಹೊಸ ಸೇತುವೆಯ ಮೇಲೆ ಎರಡೂ ಕಡೆಯಲ್ಲಿ ವಾಹನಗಳು ಸಂಚರಿಸಬೇಕಾಗಿದ್ದು, ಸಂಚಾರ ದಟ್ಟಣೆಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ ೭೬೬ರಲ್ಲಿ ಕಪಿಲಾ ನದಿಗೆ ಹೊಸ ಸೇತುವೆ ನಿರ್ಮಿಸುವಾಗ ಹೆದ್ದಾರಿ ಪ್ರಾಽಕಾರ ಮಾಡಿದ ಎಡವಟ್ಟಿನಿಂದಾಗಿ ಸೇತುವೆಯ ಅಗಲ ಕಿರಿದಾಗಿದ್ದು, ಆ ಸೇತುವೆಯ ಮೇಲೆ ಆಗ ಏಕಮುಖ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು. ಮೈಸೂರಿನಿಂದ ನಂಜನಗೂಡಿಗೆ ಬರುವ ವಾಹನಗಳು ಹಳೇ ಸೇತುವೆ ಮೇಲೂ, ನಂಜನಗೂಡಿನಿಂದ ಮೈಸೂರು ಕಡೆ ತೆರಳಬೇಕಾದ ವಾಹನಗಳು ಹೊಸ ಸೇತುವೆ ಮೇಲೂ ಸಂಚರಿಸುತ್ತಿದ್ದವು.
ಈಗ ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ಹಳೇ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತವಾಗುವುದರಿಂದ ಹೊಸ ಸೇತುವೆ ಮೇಲೆ ಎರಡೂ ಕಡೆಯಲ್ಲಿ ವಾಹನಗಳು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಿರಿದಾದ ಈ ಸೇತುವೆ ಮೇಲೆ ಎರಡೂ ಕಡೆಯಲ್ಲಿ ವಾಹನಗಳ ಸಂಚರಿಸುವುದರಿಂದ ಈ ಸೇತುವೆಯ ಮೇಲಿನ ಪ್ರಯಾಣ ಅಪಘಾತಕ್ಕೆ ದಾರಿಯಾಗಬಹುದಾಗಿದೆ ಎಂಬ ಆತಂಕ ವಾಹನ ಚಾಲಕರು ಹಾಗೂ ಪ್ರಯಾಣಿಕರಲ್ಲಿ ಮೂಡಿದೆ.
ಸೇತುವೆಯ ಮೈಸೂರು ಕಡೆಯ ಕೊನೆಯಲ್ಲಿ ವರುಣ ಕ್ಷೇತ್ರ ವ್ಯಾಪ್ತಿಯ ಹದಿನಾರು, ಹೊಸಕೋಟೆ ಸೇರಿದಂತೆ ಅನೇಕ ಗ್ರಾಮಗಳಿಗೆ ವಾಹನಗಳು ಬಲಕ್ಕೆ ತಿರುವು ಪಡೆಯಬೇಕಿದೆ.
ನಂಜನಗೂಡು ಹಾಗೂ ಕಲ್ಲಹಳ್ಳಿ ಕೈಗಾರಿಕಾ ಕೇಂದ್ರಗಳಿಗೆ ತೆರಳಬೇಕಾದ ಮೈಸೂರಿನಿಂದ ಬರುವ ಭಾರೀ ವಾಹನಗಳು ಸೇರಿದಂತೆ ಇತರ ವಾಹನಗಳು ಮತ್ತೊಂದು ತುದಿಯಲ್ಲಿ ಬಲಕ್ಕೆ ತಿರುಗಬೇಕಿದೆ. ಇದರಿಂದಾಗಿ ನಿತ್ಯ ಅನಾಹುತ ಸಂಭವಿಸುವ ಆತಂಕ ನಂಜನಗೂಡಿನ ಪೊಲೀಸರೂ ಸೇರಿದಂತೆ ಎಲ್ಲರನ್ನೂ ಈಗ ಕಾಡತೊಡಗಿದೆ. ೨೦೨೪ರಲ್ಲೇ ಈ ಸೇತುವೆ ಶಿಥಿಲಗೊಂಡಿದ್ದು ವಾಹನ ಸಂಚಾರಕ್ಕೆ ಯೋಗ್ಯವಲ್ಲ. ಎಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಸಂಸ್ಥೆಯ ಇಂಜಿನಿಯರ್ ಚಂದ್ರಶೇಖರ್ ಪ್ರಮಾಣಪತ್ರ ನೀಡಿದ್ದರು. ಹಾಗಿದ್ದೂ ಹಳೇ ಸೇತುವೆಯ ಮೇಲೆ ವರ್ಷಕ್ಕೂ ಹೆಚ್ಚು ಕಾಲ ವಾಹನಗಳು ಸಂಚರಿಸುತ್ತಿದ್ದವು.
ಈಗ ಹೊಸ ಸೇತುವೆ ಮೇಲೆ ಡಿವೈಡರ್ ಅಳವಡಿಸಬೇಕು. ಆದರೆ ಅದಕ್ಕೆ ಸ್ಥಳಾವಕಾಶವಿಲ್ಲದ್ದರಿಂದ ಪೋಲ್ ಡಿವೈಡರ್ಅಳವಡಿಸಬೇಕು. ಅದು ವಾಹನಗಳ ಬೆಳಕಾಗಿ ಪ್ರತಿಫಲಿಸ ಬೇಕು. ಸೇತುವೆಯ ಆರಂಭದ ಎರಡೂ ಕಡೆ ಏಕಮುಖ ಸಂಚಾರ ಕುರಿತಂತೆ ಫಲಕಗಳನ್ನು ಹಾಕಬೇಕು. ಹಂಪ್‌ಗಳನ್ನು ನಿರ್ಮಿಸಬೇಕು ಎಂದು ಕಳೆದ ತಿಂಗಳೇ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತ ಸೂಚಿಸಿದ್ದರೂ ನಿತ್ಯ ೩೦ ಲಕ್ಷ ರೂ.ಗಳಿಗೂ ಹೆಚ್ಚು ಸುಂಕ ವಸೂಲಿ ಮಾಡಿಕೊಳ್ಳುವ ಹೆದ್ದಾರಿ ಪ್ರಾಧಿಕಾರ ಮಾತ್ರ ಈವರೆಗೂ ಇತ್ತ ಮುಖ ಮಾಡಿಲ್ಲ.
ಯಾವುದೇ ಪೂರ್ವಸಿದ್ಧತೆಗಳನ್ನು ಕೈಗೊಂಡೇ ಇಲ್ಲ. ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಬುಧವಾರದಿಂದಲೇ ಸಂಚಾರ ನಿರ್ಬಂಧಿಸಲಾಗಿದೆ. ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದಿದ್ದರೆ ಆಗಬಹುದಾದ ಅಪಘಾತಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಉದ್ಭವಿಸಿದೆ.
ಬುಧವಾರ ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದ ತಕ್ಷಣ ಸ್ಥಳಕ್ಕೆ ಧಾವಿಸಿದ ನಂಜನಗೂಡು ಡಿವೈಎಸ್‌ಪಿ ರಘು, ಜೆಸಿಬಿ ತರಿಸಿ ಪೊಲೀಸರು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಹೆದ್ದಾರಿ ಪ್ರಾಽಕಾರ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಸಂಚಾರ ಕಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ.
೧೯೭೨ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಾನಾ ಕಾರಣಗಳಿಂದಾಗಿ ಗುತ್ತಿಗೆದಾರರು ಬದಲಾಗಿ ತೆವಳುತ್ತಾ ಸಾಗಿದ ಸೇತುವೆ ನಿರ್ಮಾಣದ ಕಾಮಗಾರಿ ೧೯೮೬ರಲ್ಲಿ ಪೂರ್ಣವಾಯಿತು.
೧೯೮೬ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಂಜನಗೂಡಿಗೆ ಆಗಮಿಸಿ ಈ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಸೇತುವೆಯ ಕಾಮಗಾರಿಯ ಭೂಮಿಪೂಜೆ ಮಾಡಿದ್ದ ದೇವರಾಜ ಅರಸು ಅವರ ಹೆಸರನ್ನು ಈ ಸೇತುವೆಗೆ ಘೋಷಿಸಿದ್ದರು.
ಈ ಸೇತುವೆ ಮೇಲೆ ೧೯೮೬ರಿಂದ ೨೦೨೬ರವರೆಗೆ ಬರೋಬ್ಬರಿ ೪೦ ವರ್ಷಗಳ ಕಾಲ ನಿತ್ಯ ೪೦ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸಿದಂತಾಗಿದೆ.




