Mysore
28
few clouds

Social Media

ಗುರುವಾರ, 15 ಜನವರಿ 2026
Light
Dark

ವರ್ಷದ ಕೊನೆಯ ಸೂರ್ಯಸ್ತ ಕಣ್ತುಂಬಿಕೊಂಡ ಪ್ರವಾಸಿಗರು

ಪುನೀತ್

ಮಡಿಕೇರಿಯ ರಾಜಾ ಸೀಟ್‌ನಲ್ಲಿ ಸಹಸ್ರಾರು ಜನರಿಂದ ವೀಕ್ಷಣೆ

ಮಡಿಕೇರಿ: ಕಣ್ಣು ಹಾಯಿಸಿದ ಕಡೆಯೆಲ್ಲಾ ಜನ.  ಸೂರ್ಯಾಸ್ತಮಾನದ ಸೌಂದರ್ಯವನ್ನು ಸವಿಯುತ್ತಿರುವ ಪ್ರವಾಸಿಗರು. ಪ್ರಕೃತಿಯೊಂದಿಗೆ ಬೆರೆತು ಹೊಸ ವರ್ಷವನ್ನು ಬರಮಾಡಿಕೊಳ್ಳುವ ತವಕ. ಇದು ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ವರ್ಷದ ಕೊನೆ ದಿನ ಮಂಗಳವಾರ ಕಂಡು ಬಂದ ರಮಣೀಯ ದೃಶ್ಯ.

ಹೊಸ ವರ್ಷ ಆಚರಣೆ ಅಂದರೆ ಸಾಕು, ಕೊಡಗಿಗೆ ಲಕ್ಷ ಲಕ್ಷ ಜನ ಬರುವುದು, ಪ್ರವಾಸಿತಾಣಗಳಲ್ಲಿ ಸಂಭ್ರಮ ಪಡುವುದು ಸಾಮಾನ್ಯ. ಅದರಂತೆ ಡಿಸೆಂಬರ್ ತಿಂಗಳಿನ ಕೊನೆಯ ವಾರದಲ್ಲಿ ಜಿಲ್ಲೆಗೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿರುವುದು ಮೂಲಕ ಪ್ರವಾಸೋಧ್ಯಮವನ್ನು ನಂಬಿಕೊಂಡಿದ್ದವರಿಗೆ ನೆಮ್ಮದಿ ನೀಡಿದೆ. ಗ್ರೇಟರ್ ರಾಜಾಸೀಟ್ ವೀವ್ ಪಾಯಿಂಟ್ ಸೇರಿದಂತೆ ೩ ವೀವ್ ಪಾಯಿಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ೨೦೨೪ರ ಕೊನೆಯ ಸೂರ್ಯಾಸ್ತಮಾನ ವೀಕ್ಷಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ವರ್ಷಾಂತ್ಯದ ದಿನದಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ರಾಜಾಸೀಟ್‌ಗೆ ಭೇಟಿ ನೀಡಿದ್ದರು. ಅದೇ ರೀತಿ ಮಂಗಳವಾರ ಸಂಜೆ ಸೂರ್ಯಾಸ್ತಮ ಸಮಯದಲ್ಲಿ ಸಾವಿರಕ್ಕಿಂತ ಹೆಚ್ಚಿನ ಪ್ರವಾಸಿಗರು ರಾಜಾಸೀಟ್‌ಗೆ ಆಗಮಿಸಿದ್ದರು. ಮಂಜಿನ ನಗರಿ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನ ವೀವ್ ಪಾಯಿಂಟ್‌ನ ನಿಸರ್ಗದ ಮಡಿಲಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಪ್ರವಾಸಿಗರು ೨೦೨೪ಕ್ಕೆ ಗುಡ್ ಬೈ ಹೇಳಿದರು. ಕೆಲವರು ಸುಂದರ ಸೂರ್ಯಾಸ್ತಮಾನದ ಸನ್ನಿವೇಶಕ್ಕಾಗಿ ಕಾದು ನಿಂತರೆ, ಮತ್ತೆ ಕೆಲವರು ಮೊಬೈಲ್, ಕ್ಯಾಮೆರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಇನ್ನೂ ಕೆಲವರು ಸುಂದರ ಕ್ಷಣವನ್ನು ತಮ್ಮ ಮನದಲ್ಲೇ ಅಚ್ಚೊತ್ತಿಕೊಂಡು ಸಂಭ್ರಮಿಸಿದರು. ಅನೇಕ ಜನರು ಮಧ್ಯರಾತ್ರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರೆ, ಇನ್ನೂ ಹಲವರು ತಮ್ಮದೇ ಆದ ರೀತಿಯಲ್ಲಿ ನೂತನ ವರ್ಷವನ್ನು ಬರಮಾಡಿಕೊಂಡರು. ನಗರದ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ಅಬ್ಬಿಫಾಲ್ಸ್, ಓಂಕಾರೇಶ್ವರ ದೇವಾಲಯ ಸೇರಿದಂತೆ ಹಲವು ಕಡೆ ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪ್ರವಾಸಿಗರು ಹ್ಯಾಪಿ ನ್ಯೂ ಇಯರ್ ಘೋಷಣೆಯ ಸಂಭ್ರಮದೊಂದಿಗೆ ೨೦೨೪ ಅನ್ನು ಬೀಳ್ಕೊಟ್ಟರು. ವರ್ಷಾಂತ್ಯ ಸಂಭ್ರಮಕ್ಕೆ ಸಿದ್ಧವಾಗಿ ಬಂದಿದ್ದ ಜನತೆ ತಮ್ಮ ಕುಟುಂಬ ಹಾಗೂ ಸ್ನೇಹಿತ ವರ್ಗದ ಜತೆ ವರ್ಷದ ಕಡೆಯ ಕ್ಷಣವನ್ನು ಕಳೆದರು.

ಹೋಂಸ್ಟೆ ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಎಂಜಾಯ್ ಮಾಡಿದರು. ವರ್ಷಾಂತ್ಯದಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಪೊಲೀಸರು ನಗರದೆಲ್ಲೆಡೆ ಬಿಗಿಬಂದೋ ಬಸ್ತ್ ಒದಗಿಸಿದ್ದರು. ಒಟ್ಟಾರೆ ಸುಂದರ ಪ್ರಕೃತಿಯ ಮಡಿಲಲ್ಲಿ ಬೆರಳೆಣಿಕೆಯ ಮಂದಿ ೨೦೨೪ಕ್ಕೆ ವಿದಾಯ ಹೇಳಿ, ೨೦೨೫ನ್ನು ಸಂಭ್ರಮದಿಂದ ಬರಮಾಡಿಕೊಂಡ ದೃಶ್ಯ ಮಡಿಕೇರಿಯಲ್ಲಿ ಕಂಡುಬಂತು.

ಎಲ್ಲೆಡೆ ಜನಜಂಗುಳಿ: ಸಾಗರೋಪಾದಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ ಪ್ರವಾಸಿಗರನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು. ನಗರದ ಮುಖ್ಯ ರಸ್ತಗಳು ಸಂಜೆ ೪ ಗಂಟೆಯಿಂದಲೇ ದಟ್ಟಣೆಯಿಂದ ಕೂಡಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಂ ಕಂಡು ಬಂದಿತು.

ಸಂಭ್ರಮಿಸಿದ ಯುವ ಜನತೆ: ಕೊಡಗಿನ ಬಹುತೇಕ ಹೋಂಸ್ಟೇಗಳಲ್ಲಿ ಪಂದಿ ಕರಿ, ಚಿಕನ್ ಕಬಾಬ್, ಕೊಡಗಿನ ಕಡುಬು, ಬಿರಿಯಾನಿ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಕ್ಯಾಂಪ್ ಪೈರ್‌ನೊಂದಿಗೆ ಯುವಕ-ಯುವತಿಯರು ನೃತ್ಯ ಮಾಡುತ್ತಿದ್ದ ದೃಶ್ಯವೂ ಕಂಡುಬಂತು. ಮಡಿಕೇರಿ ಸೇರಿದಂತೆ ಕೊಡಗಿನ ವಿವಿಧೆಡೆ ಇರುವ ವೈನ್ಸ್ ಶಾಪ್‌ಗಳಲ್ಲಿ ಮಂಗಳವಾರ ಸಂಜೆ ದೊಡ್ಡ ಸರದಿ ಸಾಲು ಕಂಡುಬಂತು. ಕೆಲವರು ಬಾಕ್ಸ್‌ಗಟ್ಟಲೆ ಮದ್ಯ ಖರೀದಿಸಿ ಕೊಂಡೊಯ್ದು ಪಾರ್ಟಿ ಮಾಡಿದರು.

Tags:
error: Content is protected !!