Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಪ್ರವಾಸಿಗರ ದಂಡು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದು ಕಾರ್ತಿಕ ಮಾಸ ಶುರುವಾಗಿರುವ ಹೊತ್ತಲ್ಲೇ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಹಸ್ರಾರು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ದೀಪಾವಳಿ ಹಬ್ಬಕ್ಕಾಗಿ ತಮ್ಮ ತವರೂರಿಗೆ ತೆರಳುವವರು, ಪ್ರವಾಸಿತಾಣಗಳಿಗೆ ಪ್ರವಾಸಿಗರು, ಸಾರ್ವಜನಿಕರು ಭೇಟಿ ಕೊಟ್ಟು ಕುಟುಂಬ ಸಮೇತ ಕಾಲ ಕಳೆಯುವುದು ಮಾಮೂಲಿಯಾಗಿರುವ ಕಾರಣ ಮೈಸೂರಿನ ಕಡೆಗೆ ಜನರ ದಂಡು ಹರಿದು ಬಂದಿದೆ.

ನಾಲ್ಕು ದಿನಗಳ ರಜೆಯ ಗುಂಗಿನಲ್ಲಿರುವ ಜನರು ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಮೈಸೂರಿಗೆ ಧಾವಿಸಿ ಬಂದಿದ್ದರಿಂದ ಎಲ್ಲಿ ನೋಡಿದರೂ ಜನಜಂಗುಳಿ ಕಂಡು ಬಂದಿತು. ವಿಶೇಷವಾಗಿ ದೀಪಾವಳಿ ಹಬ್ಬ ಎಲ್ಲರಿಗೂ ಅಚ್ಚುಮೆಚ್ಚು.

ಭಾನುವಾರ ವಾರದ ರಜಾ ದಿನವಾದರೆ ಸೋಮವಾರ ನರಕ ಚತುರ್ದಶಿ, ಮಂಗಳವಾರ ಅಮಾವಾಸ್ಯೆ, ಬುಧವಾರ ಬಲಿಪಾಡ್ಯಮಿಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಮಂಗಳವಾರ ರಜೆ ಹಾಕಿಕೊಂಡು ನಾಲ್ಕು ದಿನಗಳ ಪ್ರವಾಸಕ್ಕಾಗಿ ಮೈಸೂರಿನತ್ತ ಬೇರೆ ಬೇರೆ ಜಿಲ್ಲೆಗಳಿಂದ ದಾಂಗುಡಿ ಇಟ್ಟಿರುವುದು ಕಂಡುಬಂದಿತು. ಮೂರ‍್ನಾಲ್ಕು ದಿನ ಒಟ್ಟಿಗೇ ರಜೆ ಸಿಕ್ಕಿರುವುದರಿಂದ ತಮಿಳುನಾಡು, ಕೇರಳ ರಾಜ್ಯಗಳವರು ಮೈಸೂರಿನ ಕಡೆ ಮುಖ ಮಾಡಿದ್ದಾರೆ.

ಇದನ್ನು ಓದಿ: ಸಾಂಸ್ಕೃತಿಕ ನಗರಿಯಲ್ಲಿ ದೀಪಾವಳಿ ಹಬ್ಬಕ್ಕೆ ಸಿದ್ಧತೆ 

ಕಾಡಾ ಕಚೇರಿ, ದೊಡ್ಡಕೆರೆ ಮೈದಾನ, ಕೋಟೆ ಮಾರಮ್ಮನ ದೇವಸ್ಥಾನ, ಕಾಡಾ ಕಚೇರಿ, ಪಾರ್ಕಿಂಗ್ ಪ್ಲಾಜಾ ಬಳಿ ವಾಹನಗಳನ್ನು ನಿಲುಗಡೆ ಮಾಡಿ ನೇರವಾಗಿ ಅರಮನೆಗೆ ತೆರಳುತ್ತಿದ್ದರು. ಅರಮನೆಯ ಅಂದವನ್ನು ಕಣ್ತುಂಬಿಕೊಂಡು, ಅದರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅರಮನೆ ವಸ್ತು ಸಂಗ್ರಹಾಲಯ ವೀಕ್ಷಿಸುವ ಜನರೂ ಕಡಿಮೆ ಇರಲಿಲ್ಲ.

ಮೃಗಾಲಯದಲ್ಲಿ ನೂಕುನುಗ್ಗಲು: ಚಾಮರಾಜೇಂದ್ರ ಮೃಗಾಲಯದಲ್ಲೂ ಹೆಚ್ಚಿನ ಜನ ಜಂಗುಳಿ ಕಂಡುಬಂತು. ಇಟ್ಟಿಗೆಗೂಡು, ಎಂ.ಜಿ.ರಸ್ತೆ, ಲಲಿತ ಮಹಲ್‌ರಸ್ತೆ ಮೊದಲಾದ ಕಡೆ ವಾಹನಗಳನ್ನು ನಿಲ್ಲಿಸಿ, ತಂಡೋಪ ತಂಡವಾಗಿ ಬಂದು ಟಿಕೆಟ್ ಪಡೆದು ಮೃಗಾಲಯಕ್ಕೆ ತೆರಳುತ್ತಿದ್ದರು. ಬೆಳಿಗ್ಗೆಯಿಂದ ಸಂಜೆ ತನಕ ಹುಲಿ, ಸಿಂಹ,ಚಿರತೆ, ಹೆಬ್ಬಾವು, ಮೊಸಳೆ, ಆನೆ, ಒಂಟೆ, ಕಾಡೆಮ್ಮೆ, ವಿಶೇಷ ಜಾತಿಯ ವಿವಿಧ ಪಕ್ಷಿಗಳನ್ನು ವೀಕ್ಷಿಸಿ ಖುಷಿಪಟ್ಟರು.

ಬೃಂದಾವನಕ್ಕೂ ಭೇಟಿ: ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿ ಚಿಮ್ಮುವ ಕಾರಂಜಿ ನೋಡಿದರು. ಬಣ್ಣಬಣ್ಣದ ದೀಪಾಲಂಕಾರ, ಕಣ್ಮನ ಸೆಳೆಯುವ ಕಾರಂಜಿಗಳನ್ನು ನೋಡಿ ಖುಷಿಯಿಂದಲೇ ಹಿಂತಿರುಗಿದರು.

ಟ್ರಾಫಿಕ್ ಜಾಮ್: ಅರಮನೆ ಸುತ್ತಮುತ್ತಲ ಕೆ.ಆರ್ ವೃತ್ತ, ಹಾರ್ಡಿಂಜ್ ವೃತ್ತ, ವಸ್ತು ಪ್ರದರ್ಶನದ ಬಳಿ ಸಾಲು ಸಾಲು ವಾಹನಗಳು ಒಂದೇ ಸಮನೆ ಬರುತ್ತಿದ್ದರಿಂದ ಜಾಮ್ ಆಗುತ್ತಿತ್ತು

ಚಾಮುಂಡಿ ಬೆಟ್ಟ ಫುಲ್‌ರಷ್: 

ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿಯ ದರ್ಶನ ಪಡೆಯಲು ಫುಲ್‌ರಷ್‌ಇತ್ತು. ದಸರಾ ಮುಗಿದ ಮೇಲೂ ಮೈಸೂರಿಗೆ ಬರುವವವರ ಪ್ರಮಾಣ ಕಡಿಮೆಯಾಗಿಲ್ಲ. ಭಾನುವಾರ ಮುಂಜಾನೆ ವಿವಿಧ ವಾಹನಗಳಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸ ಪಟ್ಟರು.

ವಸತಿ ಗೃಹಗಳಿಗೂ ಬಂಪರ್:  ಈ ಬಾರಿ ದಸರೆಯಲ್ಲಿ ಕೊಠಡಿಗಳು ಬಹುತೇಕ ಪೂರ್ಣಗೊಂಡಿದ್ದರಿಂದ ಸಂತೋಷಗೊಂಡಿದ್ದ ಹೋಟೆಲ್, ವಸತಿಗೃಹಗಳ ಮಾಲೀಕರಿಗೆ ದೀಪಾವಳಿಯಲ್ಲೂ ಕೊಠಡಿ ಭರ್ತಿಯಾಗುವ ಸುಯೋಗ ದೊರಕಿದೆ. ತ್ರೀ ಸ್ಟಾರ್, ಫೋರ್ ಸ್ಟಾರ್,ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಬಹುತೇಕ ಕೊಠಡಿಗಳು ಭಾನುವಾರದಿಂದ ಭರ್ತಿಯಾಗಿದ್ದು ಮಾಲೀಕರ ಸಂತಸಕ್ಕೆ ಕಾರಣವಾಗಿದೆ.

ವಸ್ತು ಪ್ರದರ್ಶನಕ್ಕೆ ಜನರ ಲಗ್ಗೆ:  ಅರಮನೆ, ಮೃಗಾಲಯ,ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ವೀಕ್ಷಿಸಿದ ಜನರು ದಸರಾ ವಸ್ತು ಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಜನ ಜಂಗುಳಿ ಸಾಧಾರಣವಾಗಿತ್ತು. ಸಂಜೆ ೫ ಗಂಟೆಯ ನಂತರ ದುಪ್ಪಟ್ಟು ಪ್ರವಾಸಿಗರು ವಸ್ತುಪ್ರದರ್ಶನ ವೀಕ್ಷಿಸಿದರು.

Tags:
error: Content is protected !!